ADVERTISEMENT

ಷೇರು ಮಾರುಕಟ್ಟೆ ವಂಚನೆ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 7 ಮೇ 2022, 16:17 IST
Last Updated 7 ಮೇ 2022, 16:17 IST
   

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ ಬರುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪದಡಿ ನಾಲ್ವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಕೆ.ಎಸ್. ರೆಹಮತ್ ಉಲ್ಲಾ (29), ಎಂ.ಸಿ. ಮಲ್ಲಯ್ಯಸ್ವಾಮಿ (29) ಹಾಗೂ ಸಿ.ದುರ್ಗಪ್ಪ (28) ಬಂಧಿತರು. ಇವರಿಂದ ಮೂರು ಮೊಬೈಲ್ ಹಾಗೂ 6 ಸಿಮ್‌ ಕಾರ್ಡ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮೇಕ್‌ ಇನ್ ಪ್ರಾಫಿಟ್' ಹೆಸರಿನ ಕಂಪನಿ ತೆರೆದಿದ್ದ ಆರೋಪಿಗಳು, ಷೇರು ಮಾರುಕಟ್ಟೆ ಪರಿಣಿತರು ಎಂಬುದಾಗಿ ಹೇಳಿಕೊಳ್ಳುತ್ತಿದ್ದರು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ತಾವು ನೀಡಿದ ಸಲಹೆಗಳನ್ನು ಪಾಲಿಸಿದರೆ ಲಾಭ ಬರುವುದಾಗಿಯೂ ಸಾರ್ವಜನಿಕರಿಗೆ ಹೇಳುತ್ತಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು, ಆರೋಪಿಗಳ ಮಾತು ನಂಬಿ ₹ 2.50 ಲಕ್ಷ ಹೂಡಿಕೆ ಮಾಡಿದ್ದರು. ಆದರೆ, ಯಾವುದೇ ಲಾಭ ಬಂದಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಆರೋಪಿಗಳು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ' ಎಂದೂ ಹೇಳಿದರು.

ಸಿರಗುಪ್ಪದಲ್ಲಿ ಬಂಧನ: ‘ಜನರನ್ನು ವಂಚಿಸುವ ಉದ್ದೇಶದಿಂದಲೇ ಆರೋಪಿಗಳು, ಮೇಕ್ ಇನ್‌ ಪ್ರಾಫಿಟ್ ಕಂಪನಿ ಹುಟ್ಟು ಹಾಕಿದ್ದರು. ಜನರನ್ನು ವಂಚಿಸಿ ನಗರದಿಂದ ಪರಾರಿಯಾಗಿದ್ದ ಆರೋಪಿಗಳು, ಸಿರಗುಪ್ಪ ತಾಲ್ಲೂಕಿನಲ್ಲಿರುವ ತಮ್ಮೂರಿನಲ್ಲಿದ್ದರು. ಅಲ್ಲೀಗೆ ಹೋದ ವಿಶೇಷ ತಂಡ, ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.