
ಪೀಣ್ಯ ದಾಸರಹಳ್ಳಿ: ‘ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿದ್ದ ಕರ್ಲಾನ್ ಎಂಟರ್‌ಪ್ರೈಸಸ್ ಲಿಮಿಟೆಡ್ ಕಾರ್ಖಾನೆಯನ್ನು ಏಕಾಏಕಿ ಆಂಧ್ರಪ್ರದೇಶದ ಚಿತ್ತೂರಿಗೆ ಸ್ಥಳಾಂತರಿಸಿ, 75ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸದಿಂದ ತೆಗೆದಿರುವುದನ್ನು ವಿರೋಧಿಸಿ ಕಾರ್ಮಿಕರು ಭಾನುವಾರ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
’ಎರಡೂವರೆ ದಶಕಗಳಿಗೂ ಹೆಚ್ಚು ಕಾಲದಿಂದ ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆವು. ಈಗ ದಿಢೀರನೆ ಕಾರ್ಖಾನೆಯನ್ನು ಆಂಧ್ರಪ್ರದೇಶದ ಚಿತ್ತೂರಿಗೆ ಸ್ಥಳಾಂತರಿಸಿ, ಇಲ್ಲಿ ಕೆಲಸ ಮಾಡುತ್ತಿದ್ದ 75 ಕ್ಕೂ ಕಾರ್ಮಿಕರನ್ನು ತೆಗೆದು ಹಾಕಿದ್ದಾರೆ’ ಪ್ರತಿಭಟನಾಕಾರರು ದೂರಿದರು.
ಕಾರ್ಮಿಕ ನಾಗರಾಜ್ ನಾಯಕ್ ಮಾತನಾಡಿ 'ಯಾವುದೇ ಸೂಚನೆ ನೀಡದೇ ಫ್ಯಾಕ್ಟರಿಯನ್ನು ಚಿತ್ತೂರಿಗೆ ದಿಢೀರನೆ ಸ್ಥಳಾಂತರಿಸಿದ್ದಾರೆ. ಮಾಲೀಕರ ಈ ನಿಲುವಿನಿಂದ ನಮಗೆ ತೀವ್ರ ಕಷ್ಟ ಎದುರಾಗಿದೆ. ಕಾರ್ಖಾನೆಯಲ್ಲಿ ಮಹಿಳೆಯರು ಮತ್ತು ಪುರುಷರು ಸೇರಿ 75ಕ್ಕೂ ಹೆಚ್ಚು ಕಾರ್ಮಿಕರಿದ್ದೇವೆ. ಫ್ಯಾಕ್ಟರಿ ಸ್ಥಳಾಂತರದಿಂದ ಕಂಗಾಲಾಗಿದ್ಧೇವೆ. ನಮಗೆ ಬೇರೆ ಯಾವುದೇ ಆದಾಯವಿಲ್ಲ, ಇದನ್ನೇ ನಂಬಿ ಜೀವನ ಮಾಡುತ್ತಿದ್ದೇವೆ. ನಮಗೆ ಕಲಸದ ಅವಶ್ಯಕತೆಯಿದ್ದು ಉದ್ಯೋಗ ನೀಡಬೇಕು'ಎಂದು ಆಕ್ರೋಶ ಆಗ್ರಹಿಸಿದರು. 'ಕಾರ್ಮಿಕ ಇಲಾಖೆಯಲ್ಲಿ ದೂರು ದಾಖಲಿಸಿದ್ದೇವೆ. ಆದರೆ ಮಾಲೀಕರು ವಿಚಾರಣೆಗೆ ಗೈರಾಗುತ್ತಿದ್ದಾರೆ' ಎಂದು ದೂರಿದರು.
ಮಹಿಳಾ ಕಾರ್ಮಿಕರೊಬ್ಬರು ಮಾತನಾಡಿ 'ಇದೇ ಕೆಲಸ ಅವಲಂಬಿಸಿ ಜೀವನ ಸಾಗಿಸುತ್ತಿದ್ದೆವು. ನನ್ನ ಪತಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ. ಇಲ್ಲಿ ದಿಢೀರ್ ಅಂತ ಫ್ಯಾಕ್ಟರಿ ಮುಚ್ಚಿದ್ದಾರೆ. ಮಂದೆ ಜೀವನ ಸಾಗಿಸುವುದಾದರೂ ಹೇಗೆ? ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ, ದಿನನಿತ್ಯದ ಖರ್ಚುನಿಭಾಯಿಸುವುದು ಹೇಗೆ? ನಮಗೆ ಕೆಲಸಬೇಕು, ನ್ಯಾಯಬೇಕು‘ ಎಂದು ಆಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.