ADVERTISEMENT

ಶಿವಾಜಿನಗರ: 11 ಮಂದಿಗೆ ಕೊರೊನಾ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 15 ಮೇ 2020, 19:25 IST
Last Updated 15 ಮೇ 2020, 19:25 IST
ಸೋಂಕು ಪತ್ತೆ ಪರೀಕ್ಷೆಯ ಸಂಗ್ರಹ ಚಿತ್ರ
ಸೋಂಕು ಪತ್ತೆ ಪರೀಕ್ಷೆಯ ಸಂಗ್ರಹ ಚಿತ್ರ    

ಬೆಂಗಳೂರು: ಹೋಟೆಲ್ ಹೌಸ್‌ ಕಿಪೀಂಗ್ ಸಿಬ್ಬಂದಿಯ (ರೋಗಿ 653) ಸಂಪರ್ಕದಿಂದ ಶಿವಾಜಿನಗರದಲ್ಲಿ ಶುಕ್ರವಾರ 11 ಮಂದಿಗೆ ಸೋಂಕು ತಗುಲಿದೆ.

ರಿಜೆಂಟ್ ಪ್ಲೇಸ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂನ ವ್ಯಕ್ತಿಗೆಕೆಲದಿನಗಳ ಹಿಂದೆ ಸೋಂಕು ತಗುಲಿತ್ತು.ಅವರು ವಾಸವಿದ್ದ ಚಾಂದಿನಿ ಚೌಕ್‌ನ ಕಟ್ಟಡದಲ್ಲಿನ73 ಮಂದಿಯನ್ನು ಹೋಟೆಲ್ ಕ್ವಾರಂಟೈನ್ ಮಾಡಿ, ಕಟ್ಟಡದ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಅವರು ಕಾರ್ಯನಿರ್ವಹಿಸುತ್ತಿದ್ದಹೋಟೆಲ್‌ನ ಕೆಲ ಸಿಬ್ಬಂದಿಯನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ 105 ಮಂದಿ ನಿಗಾ ವ್ಯವಸ್ಥೆಗೆ ಒಳಪಟ್ಟಿದ್ದಾರೆ.

ಎರಡನೇ ಬ್ಯಾಚ್‌ನಲ್ಲಿ ಗುರುವಾರ22 ಮಂದಿಯ ಗಂಟಲ ದ್ರವದ ಮಾದರಿ ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. 11 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಎಲ್ಲರೂ ಪರೋಕ್ಷ ಸಂಪರ್ಕಿತರಾಗಿದ್ದು, ಬಹುತೇಕರಲ್ಲಿ ಸೋಂಕಿನ ಲಕ್ಷಣಗಳೇ ಗೋಚರಿಸದಿರುವುದು ಆತಂಕಕ್ಕೆ ಕಾರಣವಾಗಿದೆ.ಸೋಂಕಿತರಲ್ಲಿಒಬ್ಬ 15 ವರ್ಷದ ಬಾಲಕನಾಗಿದ್ದು, ಉಳಿದವರು 21 ರಿಂದ 33 ವರ್ಷದೊಳಗಿನವರು.

ADVERTISEMENT

ಅಂಗಡಿಗಳು, ಪೀಠೋಪಕರಣದ ಮಳಿಗೆಗಳು ಸೇರಿದಂತೆ ವಿವಿಧೆಡೆ ಸೋಂಕಿತರು ಕಾರ್ಯನಿರ್ವಹಿಸುತ್ತಿದ್ದರು. ಇವರಲ್ಲಿ ಕೆಲವರು ಭದ್ರತಾ ಸಿಬ್ಬಂದಿಯಾಗಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲರೂ ಮನೆಯಲ್ಲಿಯೇ ವಾಸವಿದ್ದರು. ಹೋಟೆಲ್‌ ಸಿಬ್ಬಂದಿಗೆ ಸೋಂಕು ತಗುಲಿದ ಬಳಿಕ ಇವರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಹೀಗಾಗಿ ಸೋಂಕಿತರೊಂದಿಗೆ ಬೇರೆ ಯಾರೂ ಸಂಪರ್ಕಕ್ಕೆ ಬಂದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಮ್ಮನಪಾಳ್ಯದ ಮದೀನ ನಗರದಲ್ಲಿ ಲಾರಿ ಚಾಲಕನ (ರೋಗಿ 911) ಸಂಪರ್ಕದಿಂದ ಅವರ ಪತ್ನಿ ಹಾಗೂ 6 ವರ್ಷದ ಬಾಲಕಿಗೆ ಸೋಂಕು ತಗುಲಿದೆ. ಇವರಿಬ್ಬರೂ ಕ್ವಾರಂಟೈನ್‌ಗೆ ಒಳಗಾಗಿದ್ದರು.

ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ

ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಶತಕ (202) ದಾಟಿದೆ. ಶುಕ್ರವಾರ ನಾಲ್ಕು ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ ಶತಕದ ಗಡಿ (101) ದಾಟಿದೆ. ಸದ್ಯ 93 ಮಂದಿ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 7 ಮಂದಿ ಮೃತಪಟ್ಟಿದ್ದಾರೆ.ವಿದೇಶಿ ಪ್ರವಾಸ ಮಾಡಿದವರು ಹಾಗೂ ತಬ್ಲೀಗ್‌ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದವರಿಂದ ಹೆಚ್ಚಿನವರಿಗೆ ಸೋಂಕು ತಗಲಿದೆ. ಪಾದರಾಯನಪುರದಲ್ಲಿ ಅತೀ ಹೆಚ್ಚು ಪ್ರಕರಣಗಳು (54) ವರದಿಯಾಗಿದ್ದು, ಅಲ್ಲಿ ಈಗ ರ್‍ಯಾಂಡಮ್ ಪರೀಕ್ಷೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.