ADVERTISEMENT

ಶಿವಾಜಿನಗರ, ಕೆ.ಆರ್.ಪುರಂ ಕ್ಷೇತ್ರಗಳಲ್ಲೇ ಕಡಿಮೆ ಮತದಾನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 10:36 IST
Last Updated 5 ಡಿಸೆಂಬರ್ 2019, 10:36 IST
   

ಬೆಂಗಳೂರು: ಉಪಚುನಾವಣೆಯ ಮತದಾನ ರಾಜ್ಯದ 15 ಕ್ಷೇತ್ರಗಳಲ್ಲಿ ಬಿರುಸಿನಿಂದ ಸಾಗುತ್ತಿದ್ದರೂ, ಮಧ್ಯಾಹ್ನ 3 ಗಂಟೆಯವರೆಗಿನ ಮತದಾನ ವಿವರ ನೋಡಿದರೆ ಶಿವಾಜಿನಗರ ಮತ್ತು ಕೆ.ಆರ್‌.ಪುರ ಕ್ಷೇತ್ರಗಳಲ್ಲೇ ಅತ್ಯಂತ ಕಡಿಮೆ ಮತದಾನವಾಗಿರುವುದು ಕಂಡುಬಂದಿದೆ.

ಕೆ.ಆರ್‌.ಪುರದಲ್ಲಿ ಶೇ 29ರಷ್ಟು ಮತದಾನವಾಗಿದ್ದರೆ, ಶಿವಾಜಿನಗರದಲ್ಲಿ ಶೇ 32ರಷ್ಟು ಮತದಾನವಾಗಿದೆ. ಹೀಗಾಗಿ ಈ ಎರಡೂ ಕ್ಷೇತ್ರಗಳಲ್ಲಿ ಶೇ 50ಕ್ಕಿಂತ ಅಧಿಕ ಮತದಾನವಾಗುವ ಸಾಧ್ಯತೆ ಕಡಿಮೆ ಇದೆ ಎಂದೇ ಹೇಳಲಾಗುತ್ತಿದೆ.

ಇನ್ನು ಎರಡೂವರೆ ಗಂಟೆ ಮಾತ್ರ ಮತದಾನಕ್ಕೆ ಅವಕಾಶ ಇದೆ. ಅಂದರೆ ಸಂಜೆ 6 ಗಂಟೆಯೊಳಗೆ ಮತದಾರರು ಮತಗಟ್ಟೆಯೊಳಗೆ ತೆರಳಬೇಕಿದ್ದು, ಅದಕ್ಕಿಂತ ಮೊದಲು ಗರಿಷ್ಠ ಮತದಾನವಾಗುವಂತೆ ನೋಡಿಕೊಳ್ಳಲು ವಿವಿಧ ಪಕ್ಷಗಳು ಪ್ರಯತ್ನಿಸುತ್ತಿವೆ.

ADVERTISEMENT

ಮತದಾನಕ್ಕೆ ಅಡ್ಡಿ: ಬೆಂಗಳೂರಿನ ಜಿಗಣಿಯಲ್ಲಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರ ಮೇಲಧಿಕಾರಿಯೊಬ್ಬರು ತಮ್ಮ ಸಿಬ್ಭಂದಿಗೆ ಮತ ಚಲಾಯಿಸಲು ಅವಕಾಶ ನೀಡಿಲ್ಲದಿರುವುದನ್ನು ಸ್ವತಃ ಸಿಬ್ಬಂದಿಯೇ ‘ಪ್ರಜಾವಾಣಿ’ಗೆ ಹೇಳಿಕೊಂಡಿದ್ದಾರೆ.

‘ನಾನು ಸಾಮಾನ್ಯವಾಗಿ ಕೆಲಸಕ್ಕೆ ಹೋಗುವುದು ಬೆಳಿಗ್ಗೆ 10 ಗಂಟೆಗೆ. ಮತದಾನಕ್ಕೆ ಅವಕಾಶ ಕೊಡಬೇಕು ಎಂದು ನಿನ್ನೆಯೇ ವಿನಂತಿ ಮಾಡಿದ್ದೆ. ಆದರೆ ನನಗೆ ಮತದಾನಕ್ಕೆ ಅವಕಾಶ ತಪ್ಪಿಸುವ ಸಲುವಾಗಿಯೇ ಬೆಳಿಗ್ಗೆ 8.30ಕ್ಕೇ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದರು. ಹೀಗಾಗಿ ನನಗೆ ಇಂದು ಮತದಾನಕ್ಕೆ ಅವಕಾಶ ಸಿಕ್ಕಿಲ್ಲ’ ಎಂದು ಅವರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.