ADVERTISEMENT

ಶಿವರಾಮ ಕಾರಂತ ಬಡಾವಣೆ: ಭೂಸ್ವಾಧೀನ ಕೈಬಿಡುವ ಪ್ರಮೇಯವೇ ಇಲ್ಲ

ಸುಪ್ರೀಂ ಕೋರ್ಟ್‌ ನೇಮಿಸಿದ ಸಮಿತಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 15:17 IST
Last Updated 5 ಏಪ್ರಿಲ್ 2021, 15:17 IST

ಬೆಂಗಳೂರು: ‘ಬೆಂಗಳೂರು ಅಭಿವರದ್ಧಿ ಪ್ರಾಧಿಕಾರವು (ಬಿಡಿಎ)ಅಭಿವೃದ್ಧಿಪಡಿಸಲಿರುವ ಡಾ.ಶಿವರಾಮ ಕಾರಂತ ಬಡಾವಣೆಯ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲಾಗುತ್ತದೆ ಎಂದು ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಯಾರೂ ಕಿವಿಗೊಡಬಾರದು’ ಎಂದು ಈ ಬಡಾವಣೆಯ ವಸ್ತುಸ್ಥಿತಿಯ ವರದಿ ನೀಡಲು ಸುಪ್ರೀಂ ಕೋರ್ಟ್‌ ನೇಮಿಸಿರುವ ನಿವೃತ್ತ ನ್ಯಾ.ಎ.ವಿ.ಚಂದ್ರಶೇಖರ್ ನೇತೃತ್ವದ ಸಮಿತಿ ಹೇಳಿದೆ.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ನಿವೃತ್ತ ನ್ಯಾ.ಚಂದ್ರಶೇಖರ್‌, ‘ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಈ ಬಡಾವಣೆಗೆ ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿರುವ ಬಿಡಿಎ ಭೂಸ್ವಾಧೀನ ಪ್ರಕ್ರಿಯೆಯನ್ನೂ ಚುರುಕುಗೊಳಿಸಿದೆ. ಆದರೂ ಕೆಲವರು ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸುವ ಯತ್ನ ಮಾಡುತ್ತಿದ್ದಾರೆ. ಈ ಬಡಾವಣೆ ವ್ಯಾಪ್ತಿಯ ಗ್ರಾಮಗಳಲ್ಲಿ ‘ಈ ಯೋಜನೆ ಕೈಬಿಟ್ಟಿದ್ದಕ್ಕೆ ಮುಖ್ಯಮಂತ್ರಿಯವರಿಗೆ ಅಭಿನಂದನೆ’ಎಂದು ಬ್ಯಾನರ್‌ ಹಾಗೂ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ. ಇದು ಸುಪ್ರೀಂ ಕೋರ್ಟ್‌ ಆದೇಶವನ್ನು ಧಿಕ್ಕರಿಸಿದಂತೆ’ ಎಂದು ಅವರು ಎಚ್ಚರಿಕೆ ನೀಡಿದರು.

‘ಈ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ರೈತ ಮುಖಂಡರ ಜೊತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಭೆ ನಡೆಸುವಾಗ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಜೊತೆಯಲ್ಲಿದ್ದರು. ಬಡಾವಣೆ ಯೋಜನೆ ಕೈಬಿಡುವ ಯಾವುದೇ ಆಶ್ವಾಸನೆಯನ್ನೂ ಮುಖ್ಯಮಂತ್ರಿಯವರು ನೀಡಿಲ್ಲ ಎಂದು ವಿಶ್ವನಾಥ್‌ ಸ್ಪಷ್ಟಪಡಿಸಿದ್ದಾರೆ’ ಎಂದರು.

ADVERTISEMENT

‘ಈ ಯೋಜನೆಗೆ ಅಧಿಸೂಚನೆ ಹೊರಡಿಸಿದ ಪ್ರದೇಶದಲ್ಲಿ ಬಿಡಿಎ ನಡೆಸಿದ ವೈಮಾನಿಕ ಸಮೀಕ್ಷೆ ಪ್ರಕಾರ 7500ಕ್ಕೂ ಅಧಿಕ ಕಟ್ಟಡಗಳು 2018ಕ್ಕಿಂತ ಮುನ್ನ ನಿರ್ಮಾಣವಾಗಿದ್ದ ಮಾಹಿತಿ ಇದೆ. ಆದರೆ ಈ ಬಗ್ಗೆ ಇದುವರೆಗೆ 1,850 ಮಂದಿ ಮತ್ರ ದಾಖಲೆಗಳನ್ನು ಒದಗಿಸಿದ್ದಾರೆ. ಈ ದಾಖಲೆ ಸಂಗ್ರಹಿಸಲು ಮಾರ್ಚ್‌ 1ರಿಂದ ಸೇವಾಕೇಂದ್ರಗಳನ್ನು ಆರಂಭಿಸಿದ್ದೇವೆ. ಇದುವರೆಗೆ 4,500 ಮಂದಿಯಾದರೂ ದಾಖಲೆ ನೀಡಬಹುದು ಎಂಬ ನಿರೀಕ್ಷೆ ಇತ್ತು. ಕೆಲವರು ಜನರಲ್ಲಿ ಗೊಂದಲ ಮೂಡಿಸುತ್ತಿರುವುದರಿಂದಲೇ ಜನ ಹಿಂದೇಟು ಹಾಕುತ್ತಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಜನರಿಗೆ ನ್ಯಾಯ ಒದಗಿಸುವ ಉದ್ದೇಶದಿಂದಲೇ ಸುಪ್ರೀಂ ಕೋರ್ಟ್‌ ಮಂಜೂರಾತಿ ಪಡೆದು ನಿರ್ಮಾಣಗೊಂಡ ಕಟ್ಟಡಗಳ ಮಾಹಿತಿಯನ್ನು ಪಡೆಯುತ್ತಿದೆ. ಈ ಬಿಕ್ಕಟ್ಟು ಬಗೆಹರಿಸುವ ಉದ್ದೇಶ ಸುಪ್ರೀಂ ಕೋರ್ಟ್‌ನದು. ಇದನ್ನು ಜನ ಅರ್ಥಮಾಡಿಕೊಳ್ಳಬೇಕು’ ಎಂದರು.

ಸಮಿತಿಯ ಸದಸ್ಯರಾದ ಜೈಕರ್‌ ಜೆರೋಮ್‌ ಹಾಗೂ ಎಸ್‌.ಟಿ.ರಮೇಶ್ ಉಪಸ್ಥಿತರಿದ್ದರು.

‘ಕಂದಾಯ ನಿವೇಶನಗಳ ದಾಖಲೆ ಸಂಗ್ರಹ’

ಈ ಯೋಜನೆಗೆ ಅಧಿಸೂಚನೆ ಹೊರಡಿಸಿದ ಪ್ರದೇಶಗಳಲ್ಲಿ ಭೂಪರಿವರ್ತನೆ ಮಾಡಿಸಿಕೊಂಡ ಮತ್ತು ಬಿಡಿಎಯಿಂದ ಮಂಜೂರಾತಿ ಪಡೆದ ಕಂದಾಯ ಬಡಾವಣೆಗಳಿದ್ದರೆ, ಅವುಗಳಲ್ಲಿ ನಿವೇಶನ ಖರೀದಿಸಿದವರ ಬಗ್ಗೆಯೂ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಕೇಳಿದೆ. ಈ ಹಿಂದೆ ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆ, ಅಂಜನಾಪುರ ಹಾಗೂ ಬನಶಂಕರಿ ಬಡಾವಣೆಗಳಲ್ಲಿ ಕಂದಾಯ ನಿವೇಶನದಾರರಿಗೆ ಬಿಡಿಎ ಬದಲಿ ನಿವೇಶನ ನೀಡಿದ ಬಗ್ಗೆಯೂ ಅಧ್ಯಯನ ಮಾಡಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್‌ ಬಿಡಿಎಗೆ ಸೂಚಿಸಿದೆ. ಕಂದಾಯ ನಿವೇಶನ ಖರೀದಿಸಿದವರಿಗೂ ನೆರವಾಗುವ ಇರಾದೆ ಸುಪ್ರೀಂ ಕೋರ್ಟ್‌ಗೆ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ನಿವೃತ್ತ ನ್ಯಾ.ಚಂದ್ರಶೇಖರ ಅಭಿಪ್ರಾಯಪಟ್ಟರು.

‘ಕೋಡಿಹಳ್ಳಿ ವಿರುದ್ಧ ಕೋರ್ಟ್‌ಗೆ ವರದಿ’

‘2018ರ ಆ. 3ಕ್ಕಿಂತ ಮುನ್ನ ಕಟ್ಟಡ ನಿರ್ಮಿಸಿದ ಬಗ್ಗೆಸಮಿತಿಗೆ ದಾಖಲೆ ನೀಡದಂತೆ ಜನರ ಹಾದಿ ತಪ್ಪಿಸುತ್ತಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ನೋಟಿಸ್‌ ನೀಡಿದ್ದೆವು. ಮಾ .24ರ ಒಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದ್ದರೂ ಅವರಿಂದ ಸ್ಪಂದನೆ ಬಂದಿಲ್ಲ. ಹಾಗಾಗಿ ಅವರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ವರದಿ ನೀಡಿದ್ದೇವೆ’ ಎಂದು ನಿವೃತ್ತ ನ್ಯಾ.ಚಂದ್ರಶೇಖರ ಮಾಹಿತಿ ನೀಡಿದರು.

ಕಟ್ಟಡದ ದಾಖಲೆ ಸಲ್ಲಿಕೆಗೆ ಏ.30 ಗಡುವು

‘ಕಟ್ಟಡಗಳ ಬಗ್ಗೆ ದಾಖಲೆಗಳೊಂದಿಗೆ ಅರ್ಜಿ ನೀಡುವುದಕ್ಕೆ ಏ. 30ರ ಗಡುವು ವಿಧಿಸಿದ್ದೇವೆ. ಮೇಡಿ ಅಗ್ರಹಾರ, ಸೋಮಶೆಟ್ಟಿಹಳ್ಳಿ, ದೊಡ್ಡ ಬ್ಯಾಲಕೆರೆ, ಸಿಂಗನಾಯಕನಹಳ್ಳಿಗಳ ಸಹಾಯ ಕೇಂದ್ರಗಳು ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ತೆರೆದಿರುತ್ತವೆ. ಆನ್‌ಲೈನ್ ಪೋರ್ಟಲ್ (jcc-skl.in) ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು. ಏ 30ರ ನಂತರ ನೀಡುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ’ ಎಂದು ನಿವೃತ್ತ ನ್ಯಾ.ಚಂದ್ರಶೇಖರ್‌ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.