ADVERTISEMENT

ಮಹಾಶಿವರಾತ್ರಿ: ಸತ್ಯಂ ಶಿವಂ ಸುಂದರಂ, ಐವತ್ತೊಂದು ದೈವಗಳ ದರ್ಶನ

ಶಿವರಾಜು ಮೌರ್ಯ
Published 3 ಮಾರ್ಚ್ 2019, 20:00 IST
Last Updated 3 ಮಾರ್ಚ್ 2019, 20:00 IST
ರವಿ ಎಲ್‌ ಪೂಜಾರಿ
ರವಿ ಎಲ್‌ ಪೂಜಾರಿ    

ನಗರ ಮತ್ತು ಹೊರವಲಯದ ಹಲವೆಡೆ ಶಿವಪ್ರಿಯರು ತಮ್ಮ ಆರಾಧ್ಯ ದೈವಕ್ಕೆ ಭಕ್ತಿ, ಗೌರವ ಸಮರ್ಪಿಸಲಿದ್ದಾರೆ. ದೇವಸ್ಥಾನಗಳಲ್ಲಿ ಶಾಂತಿ, ಸೌಹಾರ್ದತೆ, ಸ್ವಚ್ಛತೆ.. ಶಿವನಿಗೆ ಸಲ್ಲಿಸುವ ನಿಜದ ನಮನ. ಸುಂದರ ಶಿವರಾತ್ರಿ ನಿಮ್ಮದಾಗಲಿ.

ಬೆಂಗಳೂರು ಪೂರ್ವ ತಾಲ್ಲೂಕಿನ ರಾಮಮೂರ್ತಿನಗರ ಸಮೀಪದ ಹೊರಮಾವು ಗ್ರಾಮದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಕಾಶೀಶ್ವರ ದೇವಾಲಯದ ಆವರಣದಲ್ಲಿ ಮಹಾ ಶಿವರಾತ್ರಿ ಮಹೋತ್ಸವ ಹಾಗೂ 51 ದೈವಗಳ ದರ್ಶನದ ವ್ಯವಸ್ಥೆ ಮಾಡಲಾಗಿದೆ.

ಹತ್ತು ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಹೊರಮಾವು ಗ್ರಾಮಸ್ಥರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹೊರಮಾವು ಮುಖ್ಯ ರಸ್ತೆ, ಅಗರ ರಸ್ತೆ, ಜಯಂತಿ ನಗರ ರಸ್ತೆಗಳಿಗೆ ವಿದ್ಯುತ್ ದ್ವೀಪಗಳಿಂದ ಅಲಂಕಾರ ಮಾಡಲಾಗಿದೆ. ಗ್ರಾಮದ ಹಾಗೂ ಸುತ್ತಮುತ್ತಲಿನ ಬಡಾವಣೆಯ ಮನೆಗಳಿಗೆ ಸುಣ್ಣ ಬಣ್ಣ ಬಳಿದಿರುವುದರಿಂದ ಗ್ರಾಮೀಣ ಸೊಗಡು ಎದ್ದು ಕಾಣಿಸುತ್ತಿದೆ.

ADVERTISEMENT

51 ದೇವರುಗಳ ಮೂರ್ತಿ ಪ್ರತಿಷ್ಠಾಪನೆ ಮಾಡಿ ಆಕರ್ಷಕವಾಗಿ ಕಾಣಲು ಹಾಗೂ ಕಣ್ಮನ ಸೆಳೆಯಲು ಆಭರಣಗಳಿಂದ ಅಲಂಕಾರ ಮಾಡಲಾಗುತ್ತದೆ. ಸೋಮವಾರ ಬೆಳಿಗ್ಗೆ 6ಕ್ಕೆ ಪುಣ್ಯಾಹ, ನವಗ್ರಹ ಪೂಜೆ, ನವಗ್ರಹ ಹೋಮ, ಗಣಪತಿ ಪೂಜೆ, ಗಣಪತಿ ಹೋಮ, ಹಾಗೂ 21 ಕಳಶ ಪ್ರತಿಷ್ಠಾಪನೆ, ಪುಷ್ಪಾರ್ಚನೆ ಮಾಡಲಾಗುತ್ತದೆ. 7.20ಕ್ಕೆ ಮಹಾ ಮಂಗಳಾರತಿ ಬಳಿಕ ಪ್ರಸಾದ ವಿನಿಯೋಗ ಇರುತ್ತದೆ.

ಸಂಜೆ 6.05ಕ್ಕೆ ಸಂಧ್ಯಾ ಕಾಲ ಪೂಜೆ, ತ್ರಿಶತಿ ಅರ್ಚನೆ, ಲಕ್ಷ್ಮಿ ಹೋಮ, ಮೃತ್ಯುಂಜಯ ಹೋಮ, ಮಹಾ ಸುದರ್ಶನ ಹೋಮ, ರಾತ್ರಿ 7.20ಕ್ಕೆ‌ ಮಹಾ ಮಂಗಳಾರತಿ ಜೊತೆಗೆ ಪ್ರಸಾದ ವಿನಿಯೋಗ ನಡೆಯುತ್ತದೆ.

ಮಂಗಳವಾರ ಬೆಳಿಗ್ಗೆ 4.35ಕ್ಕೆ ಸೂರ್ಯೋದಯ ಪೂಜೆ, ‌ಶಿವರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ನೈವೇದ್ಯ, 10.35ಕ್ಕೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ.

ಶ್ರೀರೇಣುಕಾ ಎಲ್ಲಮ್ಮ, ಮಾರಮ್ಮ, ನಗರ ದೇವತೆ ಅಣ್ಣಮ್ಮ, ತಿರುಪತಿ ವೆಂಕಟೇಶ್ವರಸ್ವಾಮಿ, ಪಂಚಲಿಂಗೇಶ್ವರಸ್ವಾಮಿ ಸೇರಿದಂತೆ ವಿವಿಧ ದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಹೊರಮಾವು ಗ್ರಾಮದ ಸುತ್ತಮುತ್ತಲಿನ ಕಲ್ಕೆರೆ, ರಾಮಮೂರ್ತಿನಗರ, ಜಯಂತಿನಗರ, ಅಕ್ಷಯನಗರ, ಬಂಜಾರು ಬಡಾವಣೆ, ಕನಕನಗರ, ಚನ್ನಸಂದ್ರ, ಕಲ್ಯಾಣನಗರ, ಬಾಣಸವಾಡಿ, ಹೆಣ್ಣೂರು ಮುಂತಾದ ಕಡೆಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಗ್ರಾಮಸ್ಥರು ದೇವಾಲಯದ ಆವರಣದಲ್ಲಿ ಮಜ್ಜಿಗೆ ಕೋಸಂಬರಿ, ಪಾನಕ‌, ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಿದ್ದಾರೆ.

‘ಕಾಶೀಶ್ವರ ದೇವಸ್ಥಾನದಲ್ಲಿ ಈ ವರ್ಷ ಕೂಡ ಬರುವ ಭಕ್ತರಿಗೆ 51 ದೇವರುಗಳ ದರ್ಶನ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ ಕಾಶೀಶ್ವರ ದೇವಸ್ಥಾನ ಟ್ರಸ್ಟಿ ಪ್ರತಾಪ್‌.

‘ಗ್ರಾಮೀಣ ಮೂಲ ಸಂಸ್ಕೃತಿ ಉಳಿಯಲುಜಾತ್ರೆ, ಉತ್ಸವ, ರಥೋತ್ಸವ ಕಾರ್ಯಕ್ರಮಗಳು ತುಂಬಾ ಅಗತ್ಯ ಎನ್ನುತ್ತಾರೆ’ ಶಾಸಕ ಬೈರತಿ ಬಸವರಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.