ADVERTISEMENT

ಸಿನಿಮಾಗೆ ರಂಗಭೂಮಿಯೇ ತಾಯಿ: ನಾಗತಿಹಳ್ಳಿ ಚಂದ್ರಶೇಖರ್

ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 19:43 IST
Last Updated 2 ಏಪ್ರಿಲ್ 2021, 19:43 IST
ನಾಗತಿಹಳ್ಳಿ ಚಂದ್ರಶೇಖರ್ (ಬಲದಿಂದ ಎರಡನೆಯವರು) ಭಿತ್ತಿಪತ್ರ ಬಿಡುಗಡೆಗೊಳಿಸುವ ಮೂಲಕ ನಾಟಕೋತ್ಸವಕ್ಕೆ ಚಾಲನೆ ನೀಡಿದರು. (ಎಡದಿಂದ) ರಂಗ ಚಂದಿರ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಜಿ.ಪಿ.ಓ. ಚಂದ್ರು, ನಾಟಕ ನಿರ್ದೇಶಕ ಮಾಲತೇಶ ಬಡಿಗೇರ, ಎಂ.ಎಸ್.ಮೂರ್ತಿ, ಶ್ರೀನಿವಾಸ ಜಿ. ಕಪ್ಪಣ್ಣ ಮತ್ತು ಕಲಾ ನಿರ್ದೇಶಕ ಶಶಿಧರ ಅಡಪ ಇದ್ದಾರೆ -ಪ್ರಜಾವಾಣಿ ಚಿತ್ರ
ನಾಗತಿಹಳ್ಳಿ ಚಂದ್ರಶೇಖರ್ (ಬಲದಿಂದ ಎರಡನೆಯವರು) ಭಿತ್ತಿಪತ್ರ ಬಿಡುಗಡೆಗೊಳಿಸುವ ಮೂಲಕ ನಾಟಕೋತ್ಸವಕ್ಕೆ ಚಾಲನೆ ನೀಡಿದರು. (ಎಡದಿಂದ) ರಂಗ ಚಂದಿರ ಟ್ರಸ್ಟ್‌ನ ಸಂಸ್ಥಾಪಕ ಕಾರ್ಯದರ್ಶಿ ಜಿ.ಪಿ.ಓ. ಚಂದ್ರು, ನಾಟಕ ನಿರ್ದೇಶಕ ಮಾಲತೇಶ ಬಡಿಗೇರ, ಎಂ.ಎಸ್.ಮೂರ್ತಿ, ಶ್ರೀನಿವಾಸ ಜಿ. ಕಪ್ಪಣ್ಣ ಮತ್ತು ಕಲಾ ನಿರ್ದೇಶಕ ಶಶಿಧರ ಅಡಪ ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಂಗಭೂಮಿಯು ಎಂತಹುದೇ ಪರಿಸ್ಥಿತಿಯಲ್ಲೂ ನಮ್ಮನ್ನು ಎಚ್ಚರವಾಗಿಡುವಂತಹ ಮಾಧ್ಯಮ. ಇದು ಕೇವಲ ರಂಜನೆಯಲ್ಲ. ಇಲ್ಲಿ ಚಿಂತನೆಗಳಿರುತ್ತವೆ. ರಂಗಭೂಮಿ ಅನೇಕ ಚಳವಳಿಗಳನ್ನು ಹುಟ್ಟುಹಾಕಿದೆ. ಪ್ರತಿಭಟಿಸುವುದನ್ನೂ ಕಲಿಸಿಕೊಟ್ಟಿದೆ. ಚಲನಚಿತ್ರ ಕ್ಷೇತ್ರಕ್ಕೆ ರಂಗಭೂಮಿಯೇ ತಾಯಿ. ಇಲ್ಲಿಂದ ಬಂದ ಅನೇಕರು ಬೆಳ್ಳಿ ಪರದೆಯಲ್ಲಿ ಪ್ರಜ್ವಲಿಸಿದ್ದಾರೆ’ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಶುಕ್ರವಾರ ಅಭಿಪ‍್ರಾಯಪಟ್ಟರು.

ರಂಗಚಂದಿರ ಟ್ರಸ್ಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ಶಿವಸಂಚಾರ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಿಜಿಕೆ ಅವರು ವಿಕೇಂದ್ರೀಕರಣದಲ್ಲಿ ನಂಬಿಕೆ ಇಟ್ಟಿದ್ದರು. ರಂಗಭೂಮಿಯನ್ನು ಗ್ರಾಮೀಣ ಜಗತ್ತಿಗೆ ಕೊಂಡೊಯ್ದರು. ಮಠದಲ್ಲಿದ್ದ ಸ್ವಾಮೀಜಿಗಳಲ್ಲೂ ನಾಟಕದ ಅಭಿರುಚಿ ಬೆಳೆಸಿದರು. ಶಿವಸಂಚಾರವು ಪ್ರತಿವರ್ಷ ಹಲವು ನಾಟಕಗಳನ್ನು ಆಯೋಜಿಸುತ್ತದೆ. ಈ ಬಾರಿ ಕೋವಿಡ್‌ ನಡುವೆಯೂ ಹಲವು ಮುನ್ನೆಚ್ಚರಿಕೆಗಳನ್ನು ವಹಿಸಿ ಎರಡು ನಾಟಕಗಳನ್ನು ಪ್ರದರ್ಶಿಸುತ್ತಿದೆ. ವಚನ ಚಳವಳಿಗಳ ಆಶಯದ ಮುಂದುವರಿದ ಭಾಗವಾಗಿ ಶಿವಸಂಚಾರವು ರಾಜ್ಯದಾದ್ಯಂತ ಕೆಲಸ ಮಾಡುತ್ತಿದೆ’ ಎಂದರು.

ADVERTISEMENT

ಕರ್ನಾಟಕ ಲಲಿತಕಲಾ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಎಂ.ಎಸ್‌.ಮೂರ್ತಿ ‘ಸಂಸ ರಂಗಮಂದಿರಕ್ಕೆ ಬಂದಾಗಲೆಲ್ಲಾ ಸಿಜಿಕೆ ನೆನಪಾಗುತ್ತಾರೆ. ಒಬ್ಬ ವ್ಯಕ್ತಿ ಸೃಜಶೀಲ, ಚಲನಶೀಲ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಂಸ್ಕೃತಿಕ ವಲಯ
ವನ್ನು ಕಟ್ಟಬಹುದು ಎಂಬುದಕ್ಕೆ ಸಿಜಿಕೆಯವರೇ ಸಾಕ್ಷಿ. ನಾಟಕ ಕ್ಷೇತ್ರದಲ್ಲಿ ಸಾತ್ವಿಕತೆ ಇದೆ. ಎಷ್ಟೇ ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಗುಣವನ್ನು ನಾಟಕ ರಂಗ ನಮಗೆಲ್ಲ ಕಲಿಸಿಕೊಟ್ಟಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.