ADVERTISEMENT

ಕಲ್ಲು ಎತ್ತಿ ಹಾಕಿ ಕೊಲ್ಲುವ ‘ಸೈಕೊ ರಾಜ’ ಸೆರೆ

‘ಡ್ರಗ್ಸ್‌’ಗಾಗಿ ತಂಗಿಯನ್ನೇ ಸುಟ್ಟು ಕೊಂದಿದ್ದ l ಆರೋಪಿಗೆ ಪೊಲೀಸ್ ಗುಂಡೇಟು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:26 IST
Last Updated 30 ಮಾರ್ಚ್ 2019, 19:26 IST
ರಾಜೇಂದ್ರ
ರಾಜೇಂದ್ರ   

ಬೆಂಗಳೂರು: ಅತಿಯಾದ ಮಾದಕ ವಸ್ತು ಸೇವನೆಯಿಂದಲೇ ಮಾನಸಿಕ ಅಸ್ವಸ್ಥನಾಗಿದ್ದ ಈತ, ಗಾಂಜಾ ಖರೀದಿಗೆ ಹಣ ಕೊಡಲಿಲ್ಲವೆಂದು ತಂಗಿಯನ್ನು ಜೀವಂತವಾಗಿಯೇ ಸುಟ್ಟಿದ್ದ. ಆನಂತರ ಮನೆಯಿಂದ ಹೊರಬಿದ್ದು ಬೀದಿ ಬೀದಿ ಸುತ್ತಲಾರಂಭಿಸಿದ್ದ. ಗಾಂಜಾಕ್ಕಾಗಿಯೇ ಈವರೆಗೆ ಮೂವರ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದ ‘ಸೈಕೊ ರಾಜ’ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ರಾಜೇಂದ್ರ ಅಲಿಯಾಸ್ ಸೈಕೊ ರಾಜನನ್ನು (28) ಬಂಧಿಸಿದ್ದೇವೆ. ಶನಿವಾರ ನಸುಕಿನ ವೇಳೆ (4.30ರ ಸುಮಾರಿಗೆ) ಈತ, ಕೋಣನಕುಂಟೆಯ ಡಬಲ್ ರಸ್ತೆಯಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣ ಇನ್‌ಸ್ಪೆಕ್ಟರ್ ಹಜರೇಶ್ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿಯಿತು. ಪೊಲೀಸರನ್ನು ನೋಡುತ್ತಿದ್ದಂತೆಯೇ ಆತ ಕಲ್ಲು ತೂರಲಾ ರಂಭಿಸಿದ. ಈ ಹಂತದಲ್ಲಿ ಇನ್‌ಸ್ಪೆಕ್ಟರ್ ಅತನ ಎರಡೂ ಕಾಲುಗಳಿಗೆ ಗುಂಡು ಹೊಡೆದರು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.

ಸೆಕ್ಯುರಿಟಿ ಗಾರ್ಡ್ ಹತ್ಯೆ: ಇದೇ 24ರಂದು ಕದಿರೇನಹಳ್ಳಿ ಮುಖ್ಯರಸ್ತೆಯ ಕರ್ನಾಟಕ ಬ್ಯಾಂಕ್ ಎಟಿಎಂ ಘಟಕದ ಸೆಕ್ಯುರಿಟಿ ಗಾರ್ಡ್‌ ಲಿಂಗಪ್ಪ ಡಾವಳಗಿ (62) ಅವರ ಕೊಲೆ ನಡೆದಿತ್ತು. ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ರಾಜೇಂದ್ರನ ಚಹರೆ ಸಿಕ್ಕಿತ್ತು. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದ ಆರೋಪಿ, ನಂತರ ಅವರ ಮೊಬೈಲನ್ನು ತೆಗೆದುಕೊಂಡು ಹೋಗಿದ್ದ. ಆ ಮೊಬೈಲ್‌ ಸಂಖ್ಯೆಯ ಜಾಡು ಹಿಡಿದು ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

ADVERTISEMENT

ಇದರ ಬೆನ್ನಲ್ಲೇ ಗುರುವಾರ ನಸುಕಿನಲ್ಲಿ ಜೆ.ಪಿ.ನಗರ 14ನೇ ‘ಇ’ ಅಡ್ಡರಸ್ತೆಯಲ್ಲಿ ಚಾಂದ್ ಪಾಷಾ (30) ಎಂಬುವರ ತಲೆ ಮೇಲೂ ಕಲ್ಲು ಹಾಕಿದ್ದ. ಕೂಲಿ ಕೆಲಸ ಮಾಡುವ ಪಾಷಾ, ಸೆಕೆ ಎಂಬ ಕಾರಣಕ್ಕೆ ಹೊರಗೆ ಮಲಗಿದ್ದರು. 2.30ರ ಸುಮಾರಿಗೆ ಅಲ್ಲಿಗೆ ಬಂದಿದ್ದ ರಾಜೇಂದ್ರ, ಕಲ್ಲು ಎತ್ತಿ ಹಾಕಿ ಮೊಬೈಲ್ ತೆಗೆದುಕೊಂಡು ಹೋಗಿದ್ದ. ಪಾಷಾ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

16ನೇ ವಯಸ್ಸಿನಿಂದ: ‘ರಾಜೇಂದ್ರನ ಪೋಷಕರು ಆಂಧ್ರ ಪ್ರದೇಶದವರಾಗಿದ್ದು, 30 ವರ್ಷಗಳ ಹಿಂದೆ ಕೂಲಿ ಅರಸಿ ನಗರಕ್ಕೆ ಬಂದಿದ್ದರು. ಆಗಿನಿಂದಲೂ ಬನ್ನೇರುಘಟ್ಟ ರಸ್ತೆಯ ಕೊಳೆಗೇರಿ ಪ್ರದೇಶದಲ್ಲೇ ನೆಲೆಸಿದ್ದರು. ಶಾಲೆ ಮೆಟ್ಟಿಲನ್ನೇ ಹತ್ತದ ರಾಜೇಂದ್ರ, ಬಾಲ್ಯದಿಂದಲೇ ಸೊಲ್ಯುಷನ್ ಮೂಸುತ್ತ, ಗಾಂಜಾ ಸೇದುತ್ತ ಮಾದಕ ವ್ಯಸನಿಯಾಗಿದ್ದ. ಡ್ರಗ್ಸ್ ಖರೀದಿಗೆ ಹಣ ಬೇಕಾದಾಗ ಸಣ್ಣ–ಪುಟ್ಟ ಕಳ್ಳತನವನ್ನೂ ಮಾಡುತ್ತಿದ್ದ’ ಎಂದು ‍ಪೊಲೀಸರು ರಾಜೇಂದ್ರನ ಪೂರ್ವಾಪರ ಬಿಚ್ಚಿಟ್ಟರು.

‘2007ರಲ್ಲಿ ತನ್ನ ತಂಗಿಯನ್ನೇ ಜೀವಂತ ಸುಟ್ಟು ಮನೆಯಿಂದ ಹಣ ದೋಚಿಕೊಂಡು ಹೋಗಿದ್ದ ಈತ, ಆನಂತರ ಮಾನಸಿಕ ಅಸ್ವಸ್ಥನಂತೆ ವರ್ತಿಸಲು ಪ್ರಾರಂಭಿಸಿದ್ದ. ವಿವಿಧ ಆಸ್ಪತ್ರೆಗಳಲ್ಲಿ ಪೋಷಕರು ಚಿಕಿತ್ಸೆ ಕೊಡಿಸಿದ್ದರಾದರೂ, ಆತ ಗುಣಮುಖನಾಗಲಿಲ್ಲ. ಆ ನಂತರ ಮನೆಯಿಂದ ಹೊರಬಿದ್ದ ರಾಜೇಂದ್ರ, ಭಿಕ್ಷೆ ಬೇಡುತ್ತ ನಿರ್ಮಾಣ ಹಂತದ ಕಟ್ಟಡಗಳಲ್ಲೇ ಮಲಗಿಕೊಂಡೇ ದಿನಗಳನ್ನು ದೂಡುತ್ತಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

ಮೊಬೈಲ್ ಕದ್ದು ₹ 100ಕ್ಕೆ ಮಾರಾಟ!

‘ರಾತ್ರಿ ವೇಳೆ ರಸ್ತೆ ಬದಿಯ ಶೆಡ್‌ಗಳಿಗೆ ನುಗ್ಗಿ ಮೊಬೈಲ್‌ಗಳನ್ನು ದೋಚುತ್ತಿದ್ದ ಆರೋಪಿ, ಅವುಗಳನ್ನು ₹ 100 ರಿಂದ ₹ 200ಕ್ಕೆ ಮಾರಾಟ ಮಾಡಿ ಆ ಹಣದಲ್ಲಿ ಗಾಂಜಾ ಖರೀದಿಸುತ್ತಿದ್ದ. 2014ರಲ್ಲಿ ತ್ಯಾಗರಾಜನಗರ ಠಾಣೆ ವ್ಯಾಪ್ತಿಯಲ್ಲಿ ಗಾರೆ ಕೆಲಸಗಾರನೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದ. ಮಾನಸಿಕ ಅಸ್ವಸ್ಥನೆಂಬ ಕಾರಣಕ್ಕೆ ಆ ಪ್ರಕರಣದಲ್ಲಿ ಸುಲಭವಾಗಿ ಜಾಮೀನು ಸಿಕ್ಕಿತ್ತು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.