ADVERTISEMENT

ಸರ್ಕಾರಿ ಜಮೀನು ಒತ್ತುವರಿ ವಿವರ ಸಲ್ಲಿಸಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 19:35 IST
Last Updated 12 ಫೆಬ್ರುವರಿ 2019, 19:35 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ರಾಜ್ಯದ ಪ್ರತಿ ಕಂದಾಯ ಗ್ರಾಮ ಹಾಗೂ 281 ಪಟ್ಟಣಗಳಲ್ಲಿ ಇರುವ ಸ್ಮಶಾನ ಭೂಮಿಯ ವಿವರ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

‘ರಾಜ್ಯದಲ್ಲೆಡೆ ಸ್ಮಶಾನ ಭೂಮಿಯನ್ನು ಕಾಯ್ದಿರಿಸುವ ದಿಸೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿ ನಗರದ ವಕೀಲರೂ ಆದ ಮಹಮ್ಮದ್‌ ಇಕ್ಬಾಲ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಮಹಮ್ಮದ್‌ ಇಕ್ಬಾಲ್‌ ಅವರು, ‘ಕಂದಾಯ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ 11,77,925 ಎಕರೆಯಷ್ಟು ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಈ ಜಮೀನು ವಶಕ್ಕೆ ಪಡೆದರೆ ಸ್ಮಶಾನಕ್ಕೆ ಜಾಗ ಲಭ್ಯವಾಗುತ್ತದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಸರ್ಕಾರಿ ಜಮೀನು ಒತ್ತುವರಿ ಕುರಿತಂತೆ ಮಾರ್ಚ್‌ 6ರ ಒಳಗೆ ಸಮಗ್ರ ವರದಿ ಸಲ್ಲಿಸಿ. ಒತ್ತುವರಿ ಮಾಡಿಕೊಂಡಿರುವವರ ಹೆಸರುಗಳ ಪಟ್ಟಿಯನ್ನೂ ನೀಡಿ’ ಎಂದು ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿತು.

ವಿಚಾರಣೆಯನ್ನು ಮಾರ್ಚ್‌ 6ಕ್ಕೆ ಮುಂದೂಡಲಾಗಿದೆ.

ಅರ್ಜಿದಾರರ ಮನವಿ ಏನು?:

‘ರಾಜ್ಯ ಸರ್ಕಾರವು 2014ರ ನವೆಂಬರ್ 11ರಂದು ಅಧಿಸೂಚನೆಯೊಂದನ್ನು ಹೊರಡಿಸಿದೆ. ಈ ಅಧಿಸೂಚನೆ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ಅಂತ್ಯಕ್ರಿಯೆಗೆ ಅಗತ್ಯವಾದ 60 ಚದರ ಅಡಿ ಜಾಗವನ್ನು ಸ್ಥಳೀಯ ತಾಲ್ಲೂಕು ಅಥವಾ ಜಿಲ್ಲಾಡಳಿತ ಕಾಯ್ದಿರಿಸಬೇಕು. ಈ ದಿಸೆಯಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಆದರೆ, ರಾಜ್ಯದಲ್ಲಿ ಈಗ ಸ್ಮಶಾನದ ಜಾಗಗಳನ್ನು ಒತ್ತುವರಿ ಮಾಡಲಾಗುತ್ತಿದೆ’ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

‘ಒತ್ತುವರಿ ಮಾಡುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಎಲ್ಲ ಗ್ರಾಮಗಳಲ್ಲಿಯೂ ಸ್ಮಶಾನಗಳಿಗೆ ತಂತಿಬೇಲಿ ಹಾಕಬೇಕು ಹಾಗೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂಬ ಅಧಿಸೂಚನೆ ಅಂಶಗಳನ್ನು ಕಡೆಗಣಿಸಲಾಗಿದೆ. ಎಲ್ಲ ಸ್ಮಶಾನಗಳ ಸುತ್ತ ಮರಗಿಡ ಬೆಳೆಸಬೇಕು. ಈ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಅರ್ಜಿದಾರರ ಮೂರನೇ ಸುತ್ತಿನ ಹೋರಾಟದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.