ADVERTISEMENT

ಗೊಂದಲದ ಗೂಡಾದ ಶ್ರೀಕೃಷ್ಣ ಜಯಂತಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:50 IST
Last Updated 2 ಸೆಪ್ಟೆಂಬರ್ 2018, 19:50 IST
ರವೀಂದ್ರ ಕಲಾಕ್ಷೇತ್ರದ ಎದುರು ಜನಪದ ಕಲಾ ತಂಡಗಳ ಕಲಾವಿದರು ಕೃಷ್ಣನ ತೇರಿನ ಮುಂದೆ ನೃತ್ಯ ಮಾಡಿದರು -ಪ್ರಜಾವಾಣಿ ಚಿತ್ರ
ರವೀಂದ್ರ ಕಲಾಕ್ಷೇತ್ರದ ಎದುರು ಜನಪದ ಕಲಾ ತಂಡಗಳ ಕಲಾವಿದರು ಕೃಷ್ಣನ ತೇರಿನ ಮುಂದೆ ನೃತ್ಯ ಮಾಡಿದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕೃಷ್ಣ ಜಯಂತಿ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು.

ಆಹ್ವಾನಿತರ ಪಟ್ಟಿಯಲ್ಲಿದ್ದ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ಕೇಂದ್ರ ಸಚಿವ ಅನಂತಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲಾ ಗೈರುಹಾಜರಾಗಿದ್ದರು. ವಿಧಾನಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌ ಕಾರ್ಯಕ್ರಮ ಉದ್ಘಾಟಿಸಿದರು.

ಮಾತಿನ ಆರಂಭದಲ್ಲಿಯೇ ಅವರು, ‘ವೇದಿಕೆ ಮೇಲೆ ಇರುವ ಶಾಸಕ ಉದಯ್‌ ಗರುಡಾಚಾರ್‌ ಅವರೇ’ ಎಂದರು. ಈ ಮಾತು ಕೇಳಿ ಯಾದವ ಸಮುದಾಯದವರು, ‘ಅವರು ಎಲ್ಲಿ ಬಂದಿದ್ದಾರೆ ಸರಿಯಾಗಿ ನೋಡಿ’ ಎಂದು ಗಲಾಟೆ ಆರಂಭಿಸಿದರು.

ADVERTISEMENT

ಜನರ ಕಡೆ ಸುಮ್ಮನಿರಿ ಎಂದು ಕೈತೋರಿಸುತ್ತಾ ಮಾತು ಮುಂದುವರಿಸಿದ ಜಯಮ್ಮ, ‘ಹಿಂದಿನ ವರ್ಷ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಾದವ ಸಮುದಾಯದ ಏಕೈಕ ವಿಧಾನಪರಿಷತ್‌ ಸದಸ್ಯೆಯಾದ ನನ್ನನ್ನೂ ಈ ವರ್ಷ ಕರೆದಿರಲಿಲ್ಲ. ಆದರೂ ನಾನು ಬಂದಿದ್ದೇನೆ’ ಎಂದರು.

ಆಗ ಸಭಿಕರು, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶೇಮ್‌, ಶೇಮ್‌. ಗಣ್ಯರು ಯಾರೂ ಬಂದಿಲ್ಲ. ನೀವು ಯಾಕೆ ಬಂದಿದ್ದೀರಿ’ ಎಂದು ಕೂಗಾಡಿದರು. ಇದಕ್ಕೆ ಜಯಮ್ಮ ಅವರು, ‘ದಯಮಾಡಿ ಎಲ್ಲರೂ ಕುಳಿತುಕೊಳ್ಳಿ. ನಾವು ಒಂದಾಗಿದ್ದರೆ ಮುಖಂಡರು ಕಾರ್ಯಕ್ರಮಕ್ಕೆ ಬರುತ್ತಿದ್ದರು’ ಎಂದರು.

‘ಕೃಷ್ಣ ಯಾದವ ಸಮುದಾಯಕ್ಕೆ ಮಾತ್ರ ಸೀಮಿತನಾದವನಲ್ಲ. ವಿಶ್ವವೇ ಅವನನ್ನು ಪ್ರೀತಿಸುತ್ತದೆ. ಗೊಲ್ಲ ಸಮುದಾಯದವರು ಕಲೆ ಹಾಗೂ ಸಂಸ್ಕೃತಿಯಲ್ಲಿ ಮುಂದೆ ಇದ್ದಾರೆ. ರಾಜಕೀಯವಾಗಿಯೂ ಅವರು ಮುಂದೆ ಬರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.