ಬೆಂಗಳೂರು: ಇಂದ್ರಿಯಗಳನ್ನು ತಮ್ಮ ವಶದಲ್ಲಿರಿಸಿಕೊಳ್ಳಲು ಸಾಧ್ಯವಾಗುವ ಜ್ಞಾನವೇ ನೈಜ ಜ್ಞಾನ. ಅಂತಹ ಜ್ಞಾನ ಪಡೆಯುವುದೇ ನಮ್ಮ ಜೀವನ ಮಾರ್ಗವಾಗಬೇಕು ಎಂದು ಶೃಂಗೇರಿ ಶಾರದಾಪೀಠದ ಜಗದ್ಗುರು ಶ್ರೀ, ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದ್ದಾರೆ.
ನಗರದ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ವೇದಾಂತ ಭಾರತಿಯಿಂದ ಆಯೋಜಿಸಿರುವ ನಾಲ್ಕು ದಿನಗಳ ‘ವಿವೇಕದೀಪ್ತಿ’ ಬೃಹತ್ ಸಮಾವೇಶದಲ್ಲಿ ಶ್ರೀ ಶಂಕರಭಗವತ್ಪಾದ ವಿರಚಿತ ದಕ್ಷಿಣಾ ಮೂರ್ತಿ ಅಷ್ಟಕದ ಮಹಾ ಸಮರ್ಪಣೆ ನಂತರ ಆಶೀರ್ವಚನ ನೀಡಿದ ಅವರು, ಇಂದ್ರಿಯಗಳನ್ನು ವಶದಲ್ಲಿ ಇಟ್ಟುಕೊಳ್ಳದಿದ್ದರೆ ಸಹಜವಾಗಿಯೇ ದುಖಃ ಅನುಭವಿಸಬೇಕಾಗುತ್ತದೆ. ಆಧುನಿಕ ವಿಜ್ಞಾನದ ಆವಿಷ್ಕಾರಗಳು, ಪ್ರಗತಿ ನಮ್ಮ ಜೀವನ ಸುಧಾರಣೆಗೆ ನೆರವಾಗಲಿವೆ. ಆದರೆ ಶಂಕರರ ತತ್ವಗಳು ಜೀವನವನ್ನು ಸಾರ್ಥಕಮಾಡಿಕೊಳ್ಳಲು ಸಹಕಾರಿಯಾಗಲಿವೆ ಎಂದರು.
ಹಿಂದಿನ ಗುರು ಪರಂಪರೆ ಅತ್ಯಂತ ಶ್ರೀಮಂತವಾದದ್ದು. ಇದೇ ರಿವಾಜಿನಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದು ನಮ್ಮ ವಿವೇಕವನ್ನು ಉದ್ದೀಪನಗೊಳಿಸಬೇಕು. ಉಪನಿಷತ್ತುಗಳಲ್ಲಿ ಪರಭ್ರಹ್ಮ ತತ್ವ ಅಡಗಿದೆ. ಲೌಕಿಕ ಪ್ರಪಂಚ ತಿಳಿದುಕೊಂಡಷ್ಟೂ ಅವೆಲ್ಲವೂ ಕೇವಲ ಜೀವನ ನಡೆಸಲು ಮಾತ್ರ ಸಾಧ್ಯ. ಶಂಕರರ ತತ್ವ, ಉಪದೇಶಗಳು ಜಗತ್ತಿಗೆ ಅತ್ಯಂತ ಅಗತ್ಯವಾಗಿದೆ. ಪ್ರತಿ ದಿನ ಇದನ್ನು ಮನನ ಮಾಡಿಕೊಳ್ಳಬೇಕು. ಶಂಕರರು ಅವತಾರ ಮಾಡಿದ್ದರಿಂದ ಹಿಂದೂ ಧರ್ಮ ಉಳಿದಿದೆ. ಧರ್ಮ ನಾಶ ಮಾಡಲು ನಿರಂತರ ಪ್ರಯತ್ನದ ನಡುವೆಯೂ ಧರ್ಮ ಸ್ಥಿರವಾಗಿಯೇ ಇದೆ. ಈ ತತ್ವವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಇಂತಹ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದರು.
ಮಕ್ಕಳಿಗೆ ಇಂತಹ ಪರಂಪರೆ, ಚಿಂತನೆಗಳ ಬಗ್ಗೆ ತಿಳಿಸಬೇಕು. ಭಾರತ ನಿಜವಾಗಿಯೂ ವಿಶ್ವಗುರು ಆಗಲು ಶಂಕರರ ತತ್ವಗಳ ಮೂಲಕ ಸಾಗಬೇಕು. ಆಧುನಿಕ ವಿಜ್ಞಾನದ ಜೊತೆ ಬೇರ್ಪಡಿಸಲಾಗದ ಬಾಂಧವ್ಯ ಹೊಂದಿರುವುದು ಸತನಾತನ ಧರ್ಮವಾಗಿದೆ. ವೇದಾಂತ ಭಾರತಿ ಜೊತೆಗೂಡಿ ಶೃಂಗೇರಿ ಮಠ ರಚನಾತ್ಮಕ ಕಾರ್ಯಕ್ರಮ ನಡೆಸುತ್ತಿದೆ. ಧಾರ್ಮಿಕ ಜಾಗೃತಿ ಬಿತ್ತುವ ಕೆಲಸ ಮುಂದುವರೆಯಬೇಕು ಎಂದರು.
ಕೆ.ಆರ್. ನಗರದ ಯಡತೊರೆ ಶ್ರೀ ಯೋಗಾನಂದ ಸರಸ್ವತಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶಂಕರ ಭಾರತಿ ಸ್ವಾಮೀಜಿ ಮಾತನಾಡಿ, ಪರಂ ಫೌಂಡೇಷನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ವಿಜ್ಞಾನ ಪ್ರದರ್ಶನದ ಮಾದರಿ ಪ್ರತಿಯೊಬ್ಬ ವಿದ್ಯಾರ್ಥಿ ಸಮೂಹಕ್ಕೆ ತಲುಪಿಸಲು ಪ್ರಯತ್ನಿಸಲಾಗುವುದು. ಯುವ ಸಮೂಹಕ್ಕೆ ದಕ್ಷಿಣಾಮೂರ್ತ್ಯಷ್ಟಕವನ್ನು ವಿಜ್ಞಾನದ ಸಾಧನಗಳ ಮೂಲಕ ತಲುಪಿಸಲು ವಿನೂತನ ಪ್ರಯತ್ನ ನಡೆಸಲಾಗಿದೆ ಎಂದರು.
ಜೀವನದಲ್ಲಿ ಒತ್ತಡ, ಸವಾಲು, ಬೇರೆ ಬೇರೆ ಸಮಸ್ಯೆಗಳಿರಬಹುದು. ಇದೆಲ್ಲವನ್ನೂ ಮೆಟ್ಟಿ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಲು ಈ ಸ್ತ್ರೋತ್ರಗಳು ಅತಿ ಮುಖ್ಯ. ಬೆಂಗಳೂರು ನಗರದ 350ಕ್ಕೂ ಹೆಚ್ಚು ಕಾಲೇಜುಗಳು ಈ ಬಾರಿ ಸಮಾವೇಶದಲ್ಲಿ ಭಾಗಿಯಾಗಿವೆ. ಸಮಾಜದಲ್ಲಿ ರಚನಾತ್ಮಕ ಕೆಲಸವನ್ನು ನಿರಂತರವಾಗಿ ಮುಂದುವರೆಸುತ್ತೇವೆ ಎಂದರು.
ಯಡತೊರೆ ಮಠದ ಪರಮಪೂಜ್ಯ ಶ್ರೀ ಶ್ರೀ ಬ್ರಹ್ಞಾನಂದ ಭಾರತಿ ಸ್ವಾಮೀಜಿ, ವೇದಾಂತ ಭಾರತಿ ಟ್ರಸ್ಟಿ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಎಸ್.ಎಸ್. ನಾಗಾನಂದ ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.