ADVERTISEMENT

ರಾಜ್ಯದ ಪರ ದನಿ ಎತ್ತಿ: ಸಂಸದರಿಗೆ ರಾಹುಲ್ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 14:32 IST
Last Updated 7 ಜೂನ್ 2024, 14:32 IST
<div class="paragraphs"><p>ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ ಪಕ್ಷದ ಸಂಸದರೊಂದಿಗೆ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಭೆಯಲ್ಲಿದ್ದರು </p></div>

ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ ಪಕ್ಷದ ಸಂಸದರೊಂದಿಗೆ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಭೆಯಲ್ಲಿದ್ದರು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಬೇಕು. ತಾರತಮ್ಯದ ವಿರುದ್ಧ ಪ್ರಬಲ ಹೋರಾಟ ನಡೆಸಬೇಕು’ ಎಂದು ರಾಜ್ಯದಿಂದ ಆಯ್ಕೆಯಾದ ತಮ್ಮ ಪಕ್ಷದ ಸಂಸದರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಲಹೆ ನೀಡಿದ್ದಾರೆ.

ADVERTISEMENT

ನ್ಯಾಯಾಲಯಕ್ಕೆ ಹಾಜರಾಗಲು ನಗರಕ್ಕೆ ಬಂದಿದ್ದ ಅವರು, ಕೆಪಿಸಿಸಿ ಕಚೇರಿಯಲ್ಲಿ  ಲೋಕಸಭೆ ಚುನಾವಣೆಯಲ್ಲಿ ಗೆದ್ದವರು ಮತ್ತು ಪರಾಜಿತರಾಗಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್ ಸುರ್ಜೇವಾಲಾ ಸಭೆಯಲ್ಲಿದ್ದರು.

ಎಲ್ಲ ಸಂಸದರ ಜತೆ ಖುದ್ದಾಗಿ ಮಾತನಾಡಿದ ರಾಹುಲ್‌, ಸಂಸತ್‌ ಅಧಿವೇಶನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಿದ್ದಾರೆ. ಕ್ಷೇತ್ರದಲ್ಲಿ ನಿರಂತರವಾಗಿ ಜನರ ಸಂಪರ್ಕದಲ್ಲಿದ್ದು, ಈ ಚುನಾವಣೆಯಲ್ಲಿ ಮತ ನೀಡದವರ ಮನಸ್ಸನ್ನೂ ಗೆಲ್ಲುವಂತೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್‌, ‘ರಾಜ್ಯದ ಪರ ಪ್ರಬಲವಾದ ಹೋರಾಟ ನಡೆಸುವುದರ ಜತೆಯಲ್ಲೇ ಕ್ಷೇತ್ರದ ಜನರ ಜತೆ ನಿಂತು ಕೆಲಸ ಮಾಡುವಂತೆ ಸಂಸದರಿಗೆ ರಾಹುಲ್‌ ಗಾಂಧಿ ಸಲಹೆ ನೀಡಿದರು. ದೆಹಲಿ, ಬೆಂಗಳೂರಿನಲ್ಲಿ ಹೆಚ್ಚು ಸಮಯ ಕಳೆಯದೆ ಕ್ಷೇತ್ರದಲ್ಲೇ ಇರುವಂತೆ ಹೇಳಿದ್ದಾರೆ’ ಎಂದರು.

‘ಈ ಹಿಂದೆ ರಾಜ್ಯದಿಂದ ಸಂಸದರಾಗಿದ್ದವರ ಪೈಕಿ ಒಬ್ಬರನ್ನು (ಡಿ.ಕೆ. ಸುರೇಶ್‌) ಹೊರತುಪಡಿಸಿದರೆ ಯಾರೊಬ್ಬರೂ ರಾಜ್ಯದ ಪರ ಧ್ವನಿ ಎತ್ತಲಿಲ್ಲ. ತೆರಿಗೆ ಹಂಚಿಕೆಯಲ್ಲಿ ಅನ್ಯಾಯ, ಕಳಸಾ ಬಂಡೂರಿ, ಮೇಕೆದಾಟು ಯೋಜನೆಗೆ ಒಪ್ಪಿಗೆ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಸೇರಿದಂತೆ ರಾಜ್ಯಕ್ಕೆ ನ್ಯಾಯ ಪಡೆಯಲು ಸಂಸದರು ಒಗ್ಗಟ್ಟಿನಿಂದ ಪ್ರಯತ್ನಿಸಬೇಕು ಎಂಬ ಸಲಹೆಯನ್ನೂ ನೀಡಿದರು’ ಎಂದು ತಿಳಿಸಿದರು.

ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳಿಗೂ ಧೈರ್ಯ ತುಂಬಿದ ರಾಹುಲ್‌, ಜನರ ಮಧ್ಯೆಯೇ ಇದ್ದು ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ ಎಂದರು.

ಫಲಿತಾಂಶದ ಕುರಿತು ವರದಿಗೆ ಸೂಚನೆ

ಸಚಿವರ ಜತೆ ಪ್ರತ್ಯೇಕ ಸಭೆ ನಡೆಸಿದ ರಾಹುಲ್‌ ಗಾಂಧಿ ಚುನಾವಣಾ ಫಲಿತಾಂಶದ ಕುರಿತು ಮಾಹಿತಿ ಪಡೆದರು. ಕ್ಷೇತ್ರವಾರು ಫಲಿತಾಂಶದ ಕುರಿತು ವರದಿ ಸಲ್ಲಿಸುವಂತೆ ಕೆ‍ಪಿಸಿಸಿ ಪ್ರಮುಖರಿಗೆ ಸೂಚಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸತೀಶ ಜಾರಕಿಹೊಳಿ ಕೆ.ಜೆ. ಜಾರ್ಜ್‌ ಈಶ್ವರ ಬಿ. ಖಂಡ್ರೆ ದಿನೇಶ್ ಗುಂಡೂರಾವ್ ರಹೀಂ ಖಾನ್‌ ಸೇರಿದಂತೆ ಹಲವು ಸಚಿವರು ಸಭೆಯಲ್ಲಿದ್ದರು. ‘ಆಯಾ ಸಚಿವರ ಕ್ಷೇತ್ರದಲ್ಲಿ ಚುನಾವಣೆಯ ಫಲಿತಾಂಶ ಏನಾಗಿದೆ ಎಂಬುದರ ಮಾಹಿತಿಯನ್ನು ರಾಹುಲ್‌ ಗಾಂಧಿ ಪಡೆದರು. ರಾಜ್ಯದಲ್ಲಿ ಇನ್ನೂ 5–6 ಕ್ಷೇತ್ರಗಳಲ್ಲಿ ಗೆಲುವಿನ ನಿರೀಕ್ಷೆ ಇತ್ತು ಎಂದ ಅವರು ಪ್ರತಿ ಕ್ಷೇತ್ರದ ಫಲಿತಾಂಶದ ಬಗ್ಗೆ ವರದಿ ನೀಡುವಂತೆ ಸೂಚಿಸಿದರು’ ಎಂದು ಶಿವಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ರಾಹುಲ್‌ ಸ್ವಾಗತಕ್ಕೆ ಜನಸ್ತೋಮ

ರಾಹುಲ್‌ ಗಾಂಧಿ ಅವರು ಕೆಪಿಸಿಸಿ ಕಚೇರಿಗೆ ಬರುತ್ತಿರುವ ಸುದ್ದಿ ತಿಳಿದು ನೂರಾರು ಮಂದಿ ಅಲ್ಲಿಗೆ ಬಂದಿದ್ದರು. ರಾಹುಲ್‌ ಅವರನ್ನು ಸ್ವಾಗತಿಸುವ ಫ್ಲೆಕ್ಸ್‌ ಹಿಡಿದು ಕಾದು ನಿಂತಿದ್ದ ಅವರು ಜೈಕಾರ ಹಾಕಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.