ಸಿದ್ಧಲಿಂಗೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಕನಕಪುರದ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರಿಗೆ ‘ತೋಂಟದ ಸಿದ್ಧಲಿಂಗಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರು: ‘12ನೇ ಶತಮಾನದಲ್ಲಿ ಆಡು ಭಾಷೆಯಲ್ಲಿ ರಚನೆಯಾದ ವಚನ ಸಾಹಿತ್ಯದಲ್ಲಿ ಖೊಟ್ಟಿ (ನಕಲಿ) ವಚನಗಳು ಸೇರಿಕೊಂಡಿವೆ. ಇವುಗಳನ್ನು ಇಟ್ಟುಕೊಂಡು ಕೆಲವರು ವೀರಶೈವ ಲಿಂಗಾಯತ ಸಮುದಾಯದ ವಿರುದ್ಧ ಅಪಪ್ರಚಾರ ಹಾಗೂ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಭಾನುವಾರ ದೂರಿದರು.
ಸಿದ್ಧಲಿಂಗೇಶ್ವರ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ‘ಸಿದ್ಧಲಿಂಗೇಶ್ವರ ಜಯಂತ್ಯುತ್ಸವ’ದಲ್ಲಿ ರಾಮನಗರ ಜಿಲ್ಲೆಯ ಕನಕಪುರದ ದೇಗುಲಮಠದ ಅಧ್ಯಕ್ಷರಾದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಅವರಿಗೆ ‘ತೋಂಟದ ಸಿದ್ಧಲಿಂಗ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ನೈಜ ವಚನಗಳ ಶೋಧ ಮತ್ತು ವರ್ಗೀಕರಣ ಕಾರ್ಯವನ್ನು ವೀರಣ್ಣ ರಾಜೂರು, ಅಶೋಕ ದೊಮ್ಮಲೂರು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇದಕ್ಕಾಗಿ ಫ.ಗು.ಹಳಕಟ್ಟಿ ವಚನ ಸಂಶೋಧನಾ ಕೇಂದ್ರದ ಕಚೇರಿ ಪ್ರಾರಂಭಿಸಲಾಗಿದೆ’ ಎಂದರು.
‘12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ಶರಣ ಚಳವಳಿ ನಡೆದು ಸಮಾಜದಲ್ಲಿ ಸಮಾನತೆ ನೆಲೆಸಿತ್ತು. ತದನಂತರ 400 ವರ್ಷ ನಮಗೆ ಹಿನ್ನಡೆ ಆಗಿತ್ತು. 16ನೇ ಶತಮಾನದಲ್ಲಿ ಶರಣ ಚಳವಳಿಗೆ ಮರುಹುಟ್ಟು ನೀಡಿದ ಕೀರ್ತಿ ಸಿದ್ಧಲಿಂಗೇಶ್ವರರಿಗೆ ಸಲ್ಲುತ್ತದೆ. ಅವರನ್ನು ಅಭಿನವ ಬಸವಣ್ಣ ಎಂದು ಕರೆದರೂ ತಪ್ಪಾಗಲಾರದು’ ಎಂದು ಹೇಳಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಾಗಡಿ ಗದ್ದುಗೆ ಮಠದ ಮಹಾಂತ ಸ್ವಾಮೀಜಿ, ನೆಲಮಂಗಲದ ಪವಾಡ ಬಸವಣ್ಣದೇವರ ಮಠದ ಸಿದ್ಧಲಿಂಗ ಸ್ವಾಮೀಜಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ವೀರಶೈವ ಲಿಂಗಾಯತರಿಗೆ ಉದ್ಯೋಗ ಶಿಕ್ಷಣ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯ ಸಿಗಬೇಕು. ಇದು ನಮ್ಮ ಸಮುದಾಯದ ಎಲ್ಲ ಪಂಗಡದವರಿಗೂ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಕೆಲಸ ಮಾಡುತ್ತೇನೆಎಂ.ಬಿ. ಪಾಟೀಲ ಬೃಹತ್ ಕೈಗಾರಿಕಾ ಸಚಿವ
‘ಕೆಲ ತಿಂಗಳ ಹಿಂದೆ ಪ್ರಾರಂಭವಾದ ಟಿ.ವಿ ಧಾರಾವಾಹಿಯಲ್ಲಿ ಎಡೆಯೂರು ಸಿದ್ಧಲಿಂಗೇಶ್ವರರ ಥೆಯನ್ನು ಮನಸ್ಸಿಗೆ ತೋಚಿದಂತೆ ಹೇಳಲಾಗುತ್ತಿದೆ. ಸಿದ್ಧಲಿಂಗೇಶ್ವರರಿಗೆ ಸಂಬಂಧವಿಲ್ಲದ ವೈದಿಕ ಪ್ರಕ್ರಿಯೆಗಳನ್ನು ಜೋಡಿಸಿ ಪವಾಡ ಇತ್ಯಾದಿ ಸೃಷ್ಟಿಸಿ ಅವರ ಚರಿತ್ರೆ ಹಾಳು ಮಾಡಲಾಗುತ್ತಿದೆ. ಎಲ್ಲ ಸ್ವಾಮೀಜಿಗಳು ಇದನ್ನು ಖಂಡಿಸಬೇಕು’ ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.