ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ನಾಗರಾಜು ಗಾಣದಹುಣಸೆ, ಜಿ.ಕೆ. ಮುತ್ತಮ್ಮ, ಪಿ. ತಿಪ್ಪೇಸ್ವಾಮಿ, ಮಳಸಿದ್ದ ಲಕ್ಷ್ಮಣ ನಾಯಕೋಡಿ ಮತ್ತು ಕೆ. ಉಚ್ಚಂಗಪ್ಪ ಅವರಿಗೆ ಸಿದ್ದರಾಮಯ್ಯ ಅವರು ಮಹರ್ಷಿ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸಿದರು. ಬಸವನಗೌಡ ದದ್ದಲ್, ಎಚ್. ಆಂಜನೇಯ, ಸತೀಶ ಜಾರಕಿಹೊಳಿ,
ಬೆಂಗಳೂರು: ‘ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್.ಟಿ) ಪಟ್ಟಿಗೆ ಸೇರಿಸಿದರೆ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ಬೆಂಬಲ, ಸಹಮತವೂ ಇದೆ. ಯಾರೂ ಮತ್ತೊಬ್ಬರ ಅನ್ನದ ತಟ್ಟೆಗೆ ಕೈ ಹಾಕಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಆಗ ಕುರುಬರನ್ನು ಎಸ್.ಟಿಗೆ ಸೇರಿಸಬೇಕೆಂದು ಪಾದಯಾತ್ರೆ ಮಾಡಿದ್ದು ಬಿಜೆಪಿಯ ಈಶ್ವರಪ್ಪ. ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ. ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಕುಲಶಾಸ್ತ್ರೀಯ ಅಧ್ಯಯನ ನಡೆದು ಒಂದು ವೇಳೆ ಕುರುಬ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಿದರೆ, ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ನೀಡಬೇಕು. ಶೇಕಡ 7, ಶೇಕಡ 12, ಶೇ 20ರವರೆಗೂ ನೀಡಲಿ ಎಂದರು.
‘ವಾಲ್ಮೀಕಿ ಮತ್ತು ಕುರುಬ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಲು ನಾನು ಮತ್ತು ಉಗ್ರಪ್ಪ ಅವರು ರಾಮಕೃಷ್ಣ ಹೆಗಡೆ ಅವರಿಗೆ ಮನವಿ ಮಾಡಿದ್ದೆವು. ಹೆಗಡೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೂ ಆಗ ಸೇರಿಸಲು ಆಗಲಿಲ್ಲ. ಆದರೆ, ಉಗ್ರಪ್ಪ ಅವರು ಸುಮ್ಮನೆ ಕೂರಲಿಲ್ಲ. ಉಗ್ರಪ್ಪ ಮತ್ತು ದೇವೇಗೌಡರ ನಡುವಿನ ಒಡನಾಟ ಆಗಲೂ ಚೆನ್ನಾಗಿತ್ತು. ಈಗಲೂ ಚೆನ್ನಾಗಿಯೇ ಇದೆ. ದೇವೇಗೌಡರು ಮತ್ತು ಅಂದಿನ ಪ್ರಧಾನಿ ಚಂದ್ರಶೇಖರ್ ಅವರ ಒಡನಾಟ ಚೆನ್ನಾಗಿತ್ತು. ಚಂದ್ರಶೇಖರ್ ಅವರನ್ನು ದೇವೇಗೌಡರು ಒಪ್ಪಿಸಿ ವಾಲ್ಮೀಕಿ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸಿದರು. ವಾಲ್ಮೀಕಿ, ಬೇಡ ಮತ್ತು ನಾಯಕ ಸಮುದಾಯಕ್ಕೆ ಮೀಸಲಾತಿ ಸಿಗಲು ಉಗ್ರಪ್ಪನವರೇ ಕಾರಣ ಎನ್ನುವುದನ್ನು ಮರೆಯಬಾರದು’ ಎಂದು ತಿಳಿಸಿದರು.
‘ಅಧಿಕಾರದಲ್ಲಿದ್ದಾಗ ಯಾರು ನಿಮ್ಮ ಪರವಾಗಿ ಇದ್ದಾರೋ ಅವರ ಪರವಾಗಿ ವಾಲ್ಮೀಕಿ ಸಮುದಾಯ ನಿಲ್ಲಬೇಕು. ವಾಲ್ಮೀಕಿ ಅವರ ಬಗ್ಗೆ ಮತ್ತು ರಾಮಾಯಣವನ್ನು ಪಠ್ಯದಲ್ಲಿ ಸೇರಿಸಬೇಕು ಎನ್ನುವ ಉಗ್ರಪ್ಪ ಅವರ ಬೇಡಿಕೆ ಬಗ್ಗೆಯೂ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು’ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ‘ಕುರುಬ ಸಮುದಾಯವನ್ನು ಎಸ್.ಟಿ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ತಟ್ಟೆಯ ಅನ್ನ ಕಿತ್ತುಕೊಂಡರೆ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಜನಸಂಖ್ಯೆಗೆ ತಕ್ಕಂತೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಯನ್ನು ಶೇಕಡ 18ಕ್ಕೆ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.
ವಾಲ್ಮೀಕಿ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರದ ಸಾಧಕರಾದ ನಾಗರಾಜು ಗಾಣದಹುಣಸೆ, ಪಿ.ತಿಪ್ಪೇಸ್ವಾಮಿ, ಜೆ.ಕೆ.ಮುತ್ತಮ್ಮ, ಮಳಸಿದ್ದ ಲಕ್ಷ್ಮಣ ನಾಯಕೋಡಿ ಹಾಗೂ ಕೆ.ಉಚ್ಚಂಗಪ್ಪ ಅವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಸಿದ್ದರಾಮಯ್ಯ ಪ್ರದಾನ ಮಾಡಿದರು.
ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಶಾಸಕಿ ಅನ್ನಪೂರ್ಣ, ಮಾಜಿ ಸಚಿವ ಎಚ್.ಆಂಜನೇಯ ಹಾಜರಿದ್ದರು.
ಮೆಟ್ರೊ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರಿಡುವ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ.ಸಿದ್ದರಾಮಯ್ಯ ಮುಖ್ಯಮಂತ್ರಿ
‘ಸಚಿವ ಸ್ಥಾನಕ್ಕೆ ಪರಿಗಣನೆ’
ನಾಯಕ ಸಮುದಾಯದ ಶಾಸಕರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಮುಂದಿನ ದಿನಗಳಲ್ಲಿ ನಡೆಯುವ ಸಚಿವ ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಪರಿಗಣಿಸಲಾಗುವುದು’ ಎಂದರು.
ಹೊಸ ಕಾಲೊನಿ: ಪ್ರಾಯೋಗಿಕ ಯೋಜನೆ
ಎಸ್‌ಸಿ -ಎಸ್‌ಟಿ ಹೊಸ ಕಾಲೊನಿಗಳ ನಿರ್ಮಾಣಕ್ಕೆ ಪ್ರಾಯೋಗಿಕ ಯೋಜನೆ ರೂಪಿಸಲಾಗಿದೆ. ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಭೂಮಿ ಖರೀದಿ ಮಾಡಿ ಕಾಲೊನಿಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಹೊಸ ಕಾಲೊನಿಗಳಿಗೆ ಅಂಬೇಡ್ಕರ್ ವಾಲ್ಮೀಕಿಯವರ ಹೆಸರಿಡಲಾಗುವುದು. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ರಾಜ್ಯದಾದ್ಯಂತ ವಿಸ್ತರಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಎಸ್‌ಸಿ ಎಸ್‌ಟಿಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೆಹಲಿಯಲ್ಲಿ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಲು ಅನುಕೂಲ ಆಗುವಂತೆ ಕಟ್ಟಡ ನಿರ್ಮಿಸಲು ಯೋಚಿಸಲಾಗಿದೆ. ಅದಕ್ಕಾಗಿ ಎಸ್‍ಸಿಎಸ್‌ಪಿ-ಟಿಎಸ್‍ಪಿ ಅನುದಾನದಲ್ಲಿ ₹40 ಕೋಟಿ ಮೀಸಲಿಡಲಾಗಿದೆ. ಶೀಘ್ರದಲ್ಲೇ ಜಾಗ ಖರೀದಿಸಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬೆಂಗಳೂರಿನ ಸುಮನಹಳ್ಳಿಯಲ್ಲಿ ವಾಲ್ಮೀಕಿ ಸೌಧ ನಿರ್ಮಿಸಲು ಸರ್ಕಾರ 2 ಎಕರೆ ಜಮೀನು ಮಂಜೂರು ಮಾಡಿದ್ದು ಬಜೆಟ್‍ನಲ್ಲಿ ₹50 ಕೋಟಿ ಅನುದಾನ ಒದಗಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.