ADVERTISEMENT

BMCRI ಆಸ್ಪತ್ರೆಗಳಿಗೆ ಸಿದ್ದರಾಮಯ್ಯ ದಿಢೀರ್ ಭೇಟಿ: ಚಿಕಿತ್ಸೆ, ಊಟ ಪರಿಶೀಲನೆ

ಸಹನೆಯಿಂದ ಕೆಲಸ ಮಾಡುವಂತೆ ವೈದ್ಯರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 16:21 IST
Last Updated 6 ಆಗಸ್ಟ್ 2025, 16:21 IST
ಗ್ಯಾಸ್ಟ್ರೋಎಂಟರಾಲಜಿ ವಿಜ್ಞಾನ ಮತ್ತು ಅಂಗಾಂಗ ಕಸಿ ಸಂಸ್ಥೆಯ ಆವರಣದಲ್ಲಿ ರೋಗಿಗಳ ಸಹಾಯಕರನ್ನು ಸಿದ್ದರಾಮಯ್ಯ ವಿಚಾರಿಸಿದರು. ಶರಣಪ್ರಕಾಶ ಪಾಟೀಲ ಉಪಸ್ಥಿತರಿದ್ದರು
ಗ್ಯಾಸ್ಟ್ರೋಎಂಟರಾಲಜಿ ವಿಜ್ಞಾನ ಮತ್ತು ಅಂಗಾಂಗ ಕಸಿ ಸಂಸ್ಥೆಯ ಆವರಣದಲ್ಲಿ ರೋಗಿಗಳ ಸಹಾಯಕರನ್ನು ಸಿದ್ದರಾಮಯ್ಯ ವಿಚಾರಿಸಿದರು. ಶರಣಪ್ರಕಾಶ ಪಾಟೀಲ ಉಪಸ್ಥಿತರಿದ್ದರು   

ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳಿಗೆ ಬುಧವಾರ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿಕಿತ್ಸಾ ವ್ಯವಸ್ಥೆಯನ್ನು ‍‍ಪರಿಶೀಲಿಸಿದರು.

ಗ್ಯಾಸ್ಟ್ರೋಎಂಟರಾಲಜಿ ವಿಜ್ಞಾನ ಮತ್ತು ಅಂಗಾಂಗ ಕಸಿ ಸಂಸ್ಥೆ (ಐಗಾಟ್), ವಾಣಿವಿಲಾಸ ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಅಪಘಾತ ಮತ್ತು ತುರ್ತು ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದರು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರಿಗೆ ಸಾಥ್ ನೀಡಿದರು. 

ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕುತ್ತಿದೆಯೆ? ಚಿಕಿತ್ಸೆ ಪಡೆಯುವಲ್ಲಿ ಏನಾದರೂ ಅಡೆತಡೆಗಳಿವೆಯೆ? ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಸ್ಪಂದನೆ ಹೇಗಿದೆ ಎಂದು ರೋಗಿಗಳು ಹಾಗೂ ಅವರ ಸಹಾಯಕರನ್ನು ಪ್ರಶ್ನಿಸಿದರು. ರೋಗಿಗಳಿಗೆ ಸಮಸ್ಯೆಯಾಗದಂತೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವಂತೆ ಇದೇ ವೇಳೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯಲ್ಲಿನ ಊಟವನ್ನೂ ತರಿಸಿಕೊಂಡು ಪರಿಶೀಲಿಸಿದರು. 

ADVERTISEMENT

‘ವೈದ್ಯರು ರೋಗಿಗಳನ್ನು ಸಹಾನುಭೂತಿಯಿಂದ ಕಾಣಬೇಕು. ಉಚಿತವಾಗಿ ಚಿಕಿತ್ಸೆ ಒದಗಿಸುತ್ತಿರುವುದರಿಂದ ಸಹಜವಾಗಿ ರೋಗಿಗಳ ದಟ್ಟಣೆ ಹೆಚ್ಚಿರುತ್ತದೆ. ವೈದ್ಯರು ಸಹನೆಯಿಂದ ಕೆಲಸ ಮಾಡಬೇಕು. ಯಾರ ಬಳಿಯೂ ಹಣ ಪಡೆಯಬಾರದು’ ಎಂದು ವೈದ್ಯರಿಗೆ ಸೂಚಿಸಿದರು.

ಹಾಸಿಗೆ ಹೆಚ್ಚಳ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರತಿನಿತ್ಯ 40ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ವಿವಿಧ ರಾಜ್ಯದ ಜನರು ಇಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ತಾಯಂದಿರ ದಟ್ಟಣೆ ಹೆಚ್ಚಿರುವುದರಿಂದ ಆಸ್ಪತ್ರೆಯ ಹಾಸಿಗೆಗಳನ್ನು ಹೆಚ್ಚು ಮಾಡಬೇಕಿದೆ. ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ತಿಳಿಸಿದರು. 

ಖಾಸಗಿ ಆಂಬುಲೆನ್ಸ್‌ ದಂಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರದಿಂದ 108 ಆಂಬುಲೆನ್ಸ್‌ ಸೇವೆ ಲಭ್ಯವಿದ್ದು, ಅದನ್ನು ಬಳಸಿಕೊಳ್ಳಬೇಕು’ ಎಂದು ಹೇಳಿದರು. 

‘ಬಿಎಂಸಿಆರ್‌ಐ ಆಸ್ಪತ್ರೆಗಳ ಸಂಕೀರ್ಣದಲ್ಲಿ ವಾಹನ ನಿಲುಗಡೆಗೆ ಹಣ ಪಡೆಯುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಹೇಳಿದರು. 

‘ದುಬಾರಿ ವೆಚ್ಚದ ಕಸಿ ಉಚಿತ’

‘ಐಗಾಟ್ ಸದ್ಯ 120 ಹಾಸಿಗೆಗಳನ್ನು ಹೊಂದಿದೆ. ಖಾಸಗಿ ವಲಯದಲ್ಲಿ ಪಿತ್ತಜನಕಾಂಗ ಕಸಿಗೆ ₹30 ಲಕ್ಷದಿಂದ ₹40 ಲಕ್ಷ ವೆಚ್ಚವಾಗುತ್ತದೆ. ಆದರೆ ಇಲ್ಲಿ ಉಚಿತವಾಗಿ ಮಾಡಲಾಗುತ್ತಿದೆ. ಉತ್ತಮ ವೈದ್ಯಕೀಯ ಸೇವೆ ಮತ್ತು ಆರೈಕೆಯೊಂದಿಗೆ ರೋಗಿಗಳಿಗೆ ಗುಣಮಟ್ಟದ ಆಹಾರವನ್ನೂ ನೀಡಲಾಗುತ್ತಿದೆ. ಹಾಗಾಗಿ ಇಲ್ಲಿಗೆ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಇದರಿಂದಾಗಿ ಹಾಸಿಗೆ ಸಾಮರ್ಥ್ಯವನ್ನು 300ಕ್ಕೆ ಹೆಚ್ಚಿಸುವ ಬೇಡಿಕೆ ಇದೆ. ಈ ಕುರಿತ ಪ್ರಸ್ತಾವ ಸರ್ಕಾರದ ಮುಂದಿದ್ದು ಇದನ್ನು ಪರಿಗಣಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.