ADVERTISEMENT

ಜೆಜೆಎಂಗೆ ಹಣ ನೀಡದ ಕೇಂದ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 15:43 IST
Last Updated 1 ಡಿಸೆಂಬರ್ 2025, 15:43 IST
<div class="paragraphs"><p>ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಗಾಂಧಿ ಗ್ರಾಮ ಪುರಸ್ಕಾರ’ ಪಡೆದ (ಎಡದಿಂದ) ಮೇಲುಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಸಿ.ಆರ್, ಆನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ, ಪಾಲಹಳ್ಳಿ&nbsp;ಪಿಡಿಒ ಕೆ. ರಾಜೇಶ್, ಕುರ್ಕಿ ಪಿಡಿಒ ಸುರೇಖಾ ಗಿರೀಶ್ ಮತ್ತು ಕೋಳೂರು ಪಿಡಿಒ ತಸ್ಲೀಂ ಬಾನು </p></div>

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಗಾಂಧಿ ಗ್ರಾಮ ಪುರಸ್ಕಾರ’ ಪಡೆದ (ಎಡದಿಂದ) ಮೇಲುಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಸಿ.ಆರ್, ಆನೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ, ಪಾಲಹಳ್ಳಿ ಪಿಡಿಒ ಕೆ. ರಾಜೇಶ್, ಕುರ್ಕಿ ಪಿಡಿಒ ಸುರೇಖಾ ಗಿರೀಶ್ ಮತ್ತು ಕೋಳೂರು ಪಿಡಿಒ ತಸ್ಲೀಂ ಬಾನು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಗೆ ರಾಜ್ಯದ ಪಾಲೇ ಹೆಚ್ಚು. ಕೇಂದ್ರದಿಂದ ಇನ್ನೂ ₹13 ಸಾವಿರ ಕೋಟಿ ಹಣ ರಾಜ್ಯಕ್ಕೆ ವಾಪಸ್ ಬರಬೇಕಿದೆ. ಕೇಂದ್ರದ ಅನ್ಯಾಯವನ್ನು ರೈತರು ಮತ್ತು ರಾಜ್ಯದ ಜನರು ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ವಿರೋಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ADVERTISEMENT

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ ಆಯ್ಕೆಯಾದ 238 ಗ್ರಾಮ ಪಂಚಾಯಿತಿಗಳಿಗೆ ‘ಗಾಂಧಿ ಗ್ರಾಮ ಪುರಸ್ಕಾರ’ ವಿತರಿಸಿ ಹಾಗೂ ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಪ್ರಧಾನಿ ಅವರ ಹೆಸರಿನಲ್ಲಿರುವ ಜೆಜೆಎಂಗೆ ಖರ್ಚಾಗುವ ಹಣ ₹35,698 ಕೋಟಿ. ರಾಜ್ಯ ಸರ್ಕಾರ ತನ್ನ ಪಾಲಿನ ₹24,598 ಕೋಟಿ ಹಣ ನೀಡಿದೆ. ಆದರೆ, ಕೇಂದ್ರ ಈವರೆಗೂ ತನ್ನ ಪಾಲಿನ ಹಣ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಪತ್ರ ಸಹ ಬರೆಯಲಾಗಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಸಂವಿಧಾನ ಪರಿಚ್ಛೇದ 73, 74 ಕ್ಕೆ ತಿದ್ದುಪಡಿ ತಂದು, ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ತಂದರು. ಈ ತಿದ್ದುಪಡಿ ಬರುವವರೆಗೂ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿಯೇ ಇರಲಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ನಾನೂ ತಾಲ್ಲೂಕು ಬೋರ್ಡ್ ಸದಸ್ಯನಾಗಿ ಈಗ ಮುಖ್ಯಮಂತ್ರಿವರೆಗೂ ಬೆಳೆದಿದ್ದೇನೆ. ಹೀಗಾಗಿ ಗ್ರಾಮ ಪಂಚಾಯಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ಶಕ್ತಿಯುತವಾಗಬೇಕು’ ಎಂದು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, 5ನೇ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಇದ್ದರು.

ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಪಂಚಾಯಿತಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ ₹ 5 ಲಕ್ಷ ಪ್ರೋತ್ಸಾಹಧನ ವಿತರಿಸಲಾಯಿತು. 

ಇ-ಸ್ವತ್ತು ತಂತ್ರಾಂಶದಿಂದ ಗ್ರಾಮೀಣ ಪ್ರದೇಶದ ಆಸ್ತಿ ತೆರಿಗೆ ಆದಾಯವು ₹1778 ಕೋಟಿಗೆ ಏರಿಕೆಯಾಗುವ ಅಂದಾಜಿದೆ. ತಂತ್ರಾಂಶ ಪರಿಣಾಮಕಾರಿ ಜಾರಿಯಾದರೆ ಆದಾಯದ ಪ್ರಮಾಣ ₹2000 ಕೋಟಿಗೂ ಹೆಚ್ಚುವ ನಿರೀಕ್ಷೆ ಇದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ
ನರೇಗಾ ಯೋಜನೆಯಡಿ 2021ರಲ್ಲಿ 14.65 ಕೋಟಿ ಮಾನವ ದಿನಗಳಿಗೆ ಅವಕಾಶವಿದ್ದು ₹5910 ಕೋಟಿ ಅನುದಾನ ಬಂದಿತ್ತು. ಈಗ ಅದನ್ನು 9 ಕೋಟಿ ಮಾನವ ದಿನಗಳಿಗೆ ಇಳಿಸಿರುವ ಕೇಂದ್ರ ಸರ್ಕಾರ ಅನುದಾನವನ್ನು ₹2691 ಕೋಟಿಗೆ ಇಳಿಸಿದೆ
ಡಿ.ಕೆ. ಶಿವಕುಮಾರ್‌ ಉಪ ಮುಖ್ಯಮಂತ್ರಿ

ಗ್ರಾಮೀಣ ಆಸ್ತಿಗಳಿಗೂ ‘ಇ–ಸ್ವತ್ತು’

ಮನೆ ಬಾಗಿಲಿಗೆ ಇ-ಸ್ವತ್ತು ತಂದು ಕೊಡುವ ಕೆಲಸ ಮಾಡಲಾಗುತ್ತಿದೆ. ಇದು ಸರ್ಕಾರದ ಆರನೇ ಗ್ಯಾರಂಟಿ ಆಗಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು. ‘ಎಲ್ಲ ಪಂಚಾಯ್ತಿ ಆಸ್ತಿ ದಾಖಲೆಗಳಿಗೆ 11 ಬಿ ಖಾತೆಗಳನ್ನು ನೀಡಲಾಗುತ್ತಿದೆ. ಅರ್ಜಿ ಹಾಕಿದ 15 ದಿನದ ಒಳಗೆ ಖಾತೆ ನೀಡಲಾಗುವುದು. ಕಚೇರಿಗಳಿಗೆ ಅಲೆದಾಟ ತಪ್ಪಿಸಲು ಆನ್‌ಲೈನ್ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ವಿತರಣೆಗೆ ಅವಕಾಶ ನೀಡಲಾಗಿದೆ. ನಮೂನೆ 11ಎ ಮತ್ತು 11 ಬಿ ಮೂಲಕ ತೆರಿಗೆ ಪಾವತಿಸಿ ಆಸ್ತಿ ದಾಖಲೆ ಸರಿಪಡಿಸಿಕೊಳ್ಳಬೇಕು’ ಎಂದರು. ಗ್ರಾಮೀಣ ಜನರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸುಲಭವಾಗಿ ಮತ್ತು ಡಿಜಿಟಲ್ ರೂಪದ ಇ–ಸ್ವತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. 2.0 ತಂತ್ರಾಂಶ ಮೂಲಕ ಆಸ್ತಿಗಳಿಗೆ ಇ ಸ್ವತ್ತು ಪ್ರಮಾಣ ಪತ್ರ (ನಮೂನೆ 11ಎ ಮತ್ತು ನಮೂನೆ 11 ಬಿ) ವಿತರಿಸಲಾಗುತ್ತದೆ. 95 ಲಕ್ಷ ಆಸ್ತಿಯನ್ನು ತೆರಿಗೆ ವ್ಯಾಪ್ತಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು.  1.48 ಕೋಟಿ ಮನೆಗಳಿದ್ದು 53 ಲಕ್ಷ ಮನೆಗಳ ಇ– ಸ್ವತ್ತು ಮಾಡಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ₹1272 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.