ದಾಬಸ್ ಪೇಟೆ: ಸೋಂಪುರ ಹೋಬಳಿಯ ಮಾಕೇನಹಳ್ಳಿಯ ಶನಿಮಹಾತ್ಮ ದೇವಸ್ಥಾನದಲ್ಲಿ ಬೆಳ್ಳಿ ವಿಗ್ರಹ ಹಾಗೂ ಹುಂಡಿ ಹಣ ಕಳವು ಮಾಡಲಾಗಿದೆ. ಕಳ್ಳತನ ಬಳಿಕ ಕಳ್ಳರು ವಸ್ತುಗಳ ಮೇಲೆ ಕಾರದ ಪುಡಿ ಎರಚಿದ್ದಾರೆ.
ಬೆಳಿಗ್ಗೆ ಪೂಜೆಗಾಗಿ ಅರ್ಚಕ ವಿನೋದ್ ಅವರು ದೇವಾಲಯದ ಬಾಗಿಲು ತೆರೆಯಲು ಬಂದಾಗ ಕಳ್ಳತನ ಮಾಡಿರುವುದು ಗೊತ್ತಾಗಿದೆ.
6 ಕೆ.ಜಿ. ತೂಕದ ಬೆಳ್ಳಿಯ ಉತ್ಸವ ಮೂರ್ತಿ, ಹುಂಡಿಯಲ್ಲಿ ಹಣ ಹಾಗೂ ಕಾಗೆ ಕೊರಳಲ್ಲಿದ್ದ ಬೆಳ್ಳಿ ಸರ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದಾರೆ. ವರ್ಷದ ಹಿಂದೆಯೂ ಹಣ ಮತ್ತು ವಸ್ತುಗಳನ್ನು ಕಳವು ಮಾಡಲಾಗಿತ್ತು.
ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿತ್ತು. ಅಷ್ಟರಲ್ಲಿ ಕಳ್ಳತನವಾಗಿದೆ ಎಂದು ಅರ್ಚಕ ವಿನೋದ್ ತಿಳಿಸಿದರು.
‘ಮಧುಗಿರಿ ರಸ್ತೆಗೆ ಹೊಂದಿಕೊಂಡಂತೆ ದೇವಾಲಯ ಇದೆ. ಅಪಾರ ಭಕ್ತರನ್ನು ಹೊಂದಿರುವ ದೇವಾಲಯದಲ್ಲಿ ಕಳ್ಳತನ ಆಗಿರುವುದು ನೋವು ತರಿಸಿದೆ’ ಎಂದರು ದೇವಾಲಯದ ಭಕ್ತ ಸಂತೋಷ್.
ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.