ಸಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘವು ಇದೇ 7ರಂದು ಬೆಳಿಗ್ಗೆ 11 ಗಂಟೆಗೆ ಅರಮನೆ ಮೈದಾನದಲ್ಲಿ (ಗಾಯತ್ರಿ ವಿಹಾರ್) ಬೆಳ್ಳಿ ಮಹೋತ್ಸವ ಹಾಗೂ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮೈಸೂರು ನಾರಾಯಣ, ‘ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುತ್ತಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧ್ಯಕ್ಷತೆ ವಹಿಸುತ್ತಾರೆ. ರಾಜ್ಯದಲ್ಲಿ 38 ಸಾವಿರ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ 29 ಸಾವಿರ ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಲಾಗಿದೆ. ಬಾಕಿ ಉಳಿದಿರುವ 9 ಸಾವಿರ ಪೌರಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಪೌರಕಾರ್ಮಿಕರಿಗೆ ಕೂಡ ಸರ್ಕಾರಿ ನೌಕರರಿಗೆ ನೀಡುವ ಆರೋಗ್ಯ ವಿಮೆ, ಬೆಳಗಿನ ಉಪಹಾರದಂತಹ ಯೋಜನೆಯನ್ನು ಜಾರಿ ಮಾಡಬೇಕು. ಕಸದ ವಾಹನ ಚಾಲಕರು, ನಿರ್ವಾಹಕರು ಸೇರಿ ಎಲ್ಲ ಸ್ವಚ್ಛತಾ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಮಾವೇಶದಲ್ಲಿಯೂ ಸರ್ಕಾರಕ್ಕೆ ಆಗ್ರಹಿಸಲಾಗುವುದು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.