ADVERTISEMENT

ಸಿರಿಧಾನ್ಯ ಮೇಳದಲ್ಲಿ ಮಂಡ್ಯ ಬೆಲ್ಲದ ಸವಿ!

ಸಿರಿಧಾನ್ಯ, ಸಾವಯವ ವಾಣಿಜ್ಯ ಮೇಳಕ್ಕೆ ಜನಸಾಗರ

ಕೆ.ಎಸ್.ಸುನಿಲ್
Published 24 ಜನವರಿ 2025, 19:06 IST
Last Updated 24 ಜನವರಿ 2025, 19:06 IST
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಸಾವಯವ ಮತ್ತು ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಮೊಬೈಲ್ ಆಲೆಮನೆ ಮನೆಯಲ್ಲಿ ಬೆಲ್ಲ ತಯಾರಿಸಲಾಯಿತು
ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.
ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಸಾವಯವ ಮತ್ತು ಸಿರಿಧಾನ್ಯ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಮೊಬೈಲ್ ಆಲೆಮನೆ ಮನೆಯಲ್ಲಿ ಬೆಲ್ಲ ತಯಾರಿಸಲಾಯಿತು ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.   

ಬೆಂಗಳೂರು : ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಎರಡನೇ ದಿನವಾದ ಶುಕ್ರವಾರವೂ ಜನಸಾಗರವೇ ಹರಿದುಬಂತು. 

ಕೃಷಿ ಇಲಾಖೆ ಮಾಹಿತಿಯ ಪ್ರಕಾರ, ಎರಡು ದಿನಗಳಲ್ಲಿ 1.75 ಲಕ್ಷಕ್ಕೂ ಅಧಿಕ ರೈತರು ಹಾಗೂ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಿದ್ದಾರೆ. ವಿದೇಶಿ ಪ್ರತಿನಿಧಿಗಳು, ಕೃಷಿ ವಿಶ್ವವಿದ್ಯಾಲಯಗಳ ಬೆಳೆ ತಜ್ಞರು, ವಿದ್ಯಾರ್ಥಿಗಳು, ರೈತರು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಸಿರಿಧಾನ್ಯಗಳ ಮಾಹಿತಿ ಪಡೆದರು. ಖಾದ್ಯಗಳ ರುಚಿ ಸವಿದರು.

ಮಂಡ್ಯ ಜಿಲ್ಲೆಯ ಬೆಲ್ಲದ ಪರಿಷೆ, ಕಬ್ಬಿನ ಗಾಣ, ‘ದೇಸಿರಿ’ ಗುಡಿ ಕೈಗಾರಿಕೆ ವತಿಯಿಂದ ಎತ್ತಿನ ಎಣ್ಣೆಗಾಣ ಪ್ರದರ್ಶನ ಮತ್ತು ನೈಸರ್ಗಿಕವಾಗಿ ಅಡುಗೆ ಎಣ್ಣೆ ಹೊರತೆಗೆಯುವ ಪ್ರಾತ್ಯಕ್ಷಿಕೆ ಹಾಗೂ ವಿವಿಧ ಯಂತ್ರೋಪಕರಣಗಳು ಪ್ರಮುಖ ಆಕರ್ಷಣೆಯಾಗಿದ್ದವು.

ADVERTISEMENT

ಆಲೆಮನೆಯಲ್ಲಿ ಕಬ್ಬು ಅರೆಯುವುದು, ಸಾವಯವ ಬೆಲ್ಲ ತಯಾರಿಸುವ ವಿಧಾನವನ್ನು ಸಮೀಪದಿಂದಲೇ ನೋಡುವ ಅವಕಾಶ ಇದೆ. ಕಬ್ಬಿನ ಗಾಣದ ರೈತ ಉತ್ಪಾದಕರ ಕಂಪನಿ ಆಲೆಮನೆ ಆರಂಭಿಸಿದ್ದು, ಯಂತ್ರದ ಸಹಾಯದಿಂದ ಕಬ್ಬು ಅರೆದು, ಕಬ್ಬಿನ ಹಾಲನ್ನು ಬಾಣಲೆಯಲ್ಲಿ ಹಾಕಿ  ಒಲೆಯಲ್ಲಿ ಕುದಿಸಿ, ಬೆಲ್ಲ ತಯಾರು ಮಾಡುವ ರೀತಿ ಕುತೂಹಲ ಮೂಡಿಸಿದೆ. ಸ್ಥಳದಲ್ಲೇ ತಯಾರಿಸಿದ ಬೆಲ್ಲದ ಪಾಕದ ರುಚಿ ಸವಿಯುವ ಅವಕಾಶವೂ ಉಂಟು.

‘ಪಿಎಂಎಫ್‌ಎಂಇ ಯೋಜನೆಯಡಿ ದೊರೆತ ₹ 30 ಲಕ್ಷ ಸಾಲದಲ್ಲಿ ಆಲೆಮನೆ ಆರಂಭಿಸಿದ್ದೇನೆ. ಸರ್ಕಾರ ಶೇಕಡ 50ರಷ್ಟು ಸಹಾಯಧನ ನೀಡಿದೆ. 80 ಗ್ರಾಂ. ನಿಂದ 20 ಕೆ.ಜಿ. ತೂಕದವರೆಗೂ ಬೆಲ್ಲ ಮಾರಾಟಕ್ಕೆ ಇಡಲಾಗಿದೆ. ಗರಿ ಅಚ್ಚು, ಬಕೆಟ್‌, ಬುಲೆಟ್, ಬಟನ್, ಇಡ್ಲಿ ಬೆಲ್ಲ, ಬಾರ್ ಮಾದರಿ ಬೆಲ್ಲಗಳನ್ನು ತಯಾರಿಸಲಾಗಿದೆ’ ಎಂದು ಮಂಡ್ಯ ಜಿಲ್ಲೆಯ ಬೇವಿನಹಳ್ಳಿಯ ರೈತ ಸೋಮಶೇಖರ ಗೌಡ ತಿಳಿಸಿದರು.

‘ಬಿಸಿಲಿನ ತಾಪಕ್ಕೆ ಆಣೆ ಬೆಲ್ಲ ಕರಗುವುದಿಲ್ಲ. ಒಂದು ವರ್ಷದವರೆಗೂ ಬಳಸಬಹುದು. ಮಲೆನಾಡು ಭಾಗದ ಜನರು ಹೆಚ್ಚು ಆಣೆ ಬೆಲ್ಲ ಬಳಸುತ್ತಾರೆ’ ಎಂದರು.

ರಾಜ್ಯದ ಮೊದಲ ರೈತ ಉತ್ಪಾದಕ ಕಂಪನಿ ‘ಸಹಜ ಸಮೃದ್ಧ ಆರ್ಗ್ಯಾನಿಕ್ ಪ್ರಡ್ಯೂಸರ್‌’  25 ವಿಧದ ಅಕ್ಕಿ, ಹಣ್ಣು, ತರಕಾರಿ, ಸಿರಿಧಾನ್ಯಗಳನ್ನು ಪ್ರದರ್ಶನಕ್ಕೆ ಇಟ್ಟಿತ್ತು. 

‘ಅಕ್ಕಿ, ಸಿರಿಧಾನ್ಯಗಳನ್ನು ದೇಶದ ವಿವಿಧ ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿದೆ. ರೈತರೇ ಷೇರುದಾರರು. ಹಾಗಾಗಿ ಇದರ ಲಾಭ ರೈತರಿಗೆ ಹೋಗಲಿದೆ’ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸೋಮೇಶ್ ತಿಳಿಸಿದರು. 

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ರಾಜ್ಯ ಕೃಷಿ ಉತ್ಪಾದಕರ ಸಂಘದಿಂದ ಕಾಡಿನ ಹಣ್ಣುಗಳ ಪರಿಚಯ ಜನರನ್ನು ಸೆಳೆಯಿತು. ಬ್ಯಾಲದ ಹಣ್ಣು, ನಗರೆ ಹಣ್ಣು ಮತ್ತು ಗೇರು ಹಣ್ಣಿನ ರುಚಿ ಸವಿಯಲು ಜನರು ಮುಗಿಬಿದ್ದರು.

ರಾಜ್ಯದಲ್ಲಿರುವ ಮಣ್ಣಿನ ವಿಧಗಳು, ಪದರಗಳು, ಮಣ್ಣಿನ ಮಹತ್ವ, ಗುಣ ಲಕ್ಷಣಗಳು, ವರ್ಗೀಕರಣ ಮತ್ತುರಚನೆ ಬಗ್ಗೆ ಚಿತ್ರ ಸಹಿತ ಮಾಹಿತಿ ನೀಡಲಾಯಿತು.

ಉತ್ತರ ಪ್ರದೇಶ, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು, ಮೇಘಾಲಯ, ಜಾರ್ಖಂಡ್, ಸಿಕ್ಕಿಂ ಸೇರಿದಂತೆ ಹಲವು ರಾಜ್ಯಗಳು ಭಾಗವಹಿಸಿರುವುದು ವಿಶೇಷ.

'ಮೊದಲಿನಿಂದಲೂ ಸಿರಿಧಾನ್ಯ ಬಳಸುತ್ತಿದ್ದೇನೆ. ಇದು ಆರೋಗ್ಯಕ್ಕೆ ಉತ್ತಮ. ಹಾಗಾಗಿ, ಮೇಳದಲ್ಲಿ ಖರೀದಿ ಮಾಡಲು ಬಂದಿದ್ದೇನೆ ' ಎಂದು ಗ್ರಾಹಕ ರವೀಶ್ ತಿಳಿಸಿದರು.

ವಿವಿಧ ಬಗೆಯ ಅಚ್ಚಿನ ಬೆಲ್ಲ ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.

- ಕೃಷಿ ತಜ್ಞರು–ರೈತರ ಸಂವಾದ

ಕೃಷಿ ತಜ್ಞರು ಪ್ರಗತಿಪರ ರೈತರ ಜತೆ ಸಂವಾದ ನಡೆಯಿತು. ಕಡಿಮೆ ಖರ್ಚಿನ ಸಾವಯವ ಕೃಷಿ ಪದ್ಧತಿಗಳು ಒಣ ಪ್ರದೇಶದಲ್ಲಿ ಸುಸ್ಥಿರ ಆಹಾರ ಮತ್ತು ಮೇವು ಭದ್ರತೆಯ ಪ್ರಾಮುಖ್ಯತೆ ಸಾವಯವ ಮತ್ತು ಸಿರಿಧಾನ್ಯ ಬೆಳೆಗಳ ಉತ್ತೇಜನಕ್ಕಾಗಿ ಸರ್ಕಾರ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಲಾಯಿತು. ಇಲಾಖೆಯ ವಿವಿಧ ಯೋಜನೆಗಳ ಸದ್ಭಳಕೆಯ ಅನುಭವ ಹಂಚಿಕೆ ಸಿರಿಧಾನ್ಯಗಳ ಮೌಲ್ಯವರ್ಧನೆ ಸಾವಯವ ಕೃಷಿಯಲ್ಲಿ ವಿನೂತನ ತಾಂತ್ರಿಕತೆಗಳ ಫ್ಲಿಪ್‌ಕಾರ್ಟ್‌ ಮಾರುಕಟ್ಟೆಯ ವೇದಿಕೆಯಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಮಾರಾಟ ಕುರಿತು ಉಪನ್ಯಾಸ ನೀಡಲಾಯಿತು. ಉದ್ಯಮಿಗಳ ಹಾಗೂ ಯುವ ನವೋದ್ಯಮಿಗಳ ಅನುಭವ ಹಂಚಿಕೆ ಮತ್ತು ಚರ್ಚೆಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.