ADVERTISEMENT

ಸಮೂಹ ಕೃಷಿಯೇ ‘ಜೀವಾಮೃತ’

ಸಾವಯವ ಕ್ಷೇತ್ರದಲ್ಲಿ ರೈತರ ವಿಭಿನ್ನ ಹೆಜ್ಜೆ * ಬೆಳೆಗಾರರಿಂದಲೇ ಉತ್ಪನ್ನಗಳ ಮೌಲ್ಯವರ್ಧನೆ

ಸಚ್ಚಿದಾನಂದ ಕುರಗುಂದ
Published 18 ಜನವರಿ 2019, 19:43 IST
Last Updated 18 ಜನವರಿ 2019, 19:43 IST
ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಜನರನ್ನು ಆಕರ್ಷಿಸಿದ ಸಿರಿಧಾನ್ಯಗಳಲ್ಲಿ ಬಿಡಿಸಿದ ರಂಗೋಲಿ –ಪ್ರಜಾವಾಣಿ ಚಿತ್ರ
ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಕೃಷಿ ಇಲಾಖೆ ಆಯೋಜಿಸಿದ್ದ ಸಾವಯವ ಮತ್ತು ಸಿರಿಧಾನ್ಯಗಳ ಮೇಳದಲ್ಲಿ ಜನರನ್ನು ಆಕರ್ಷಿಸಿದ ಸಿರಿಧಾನ್ಯಗಳಲ್ಲಿ ಬಿಡಿಸಿದ ರಂಗೋಲಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಿರಿಧಾನ್ಯಗಳ ಶ್ರೀಮಂತಿಕೆಯನ್ನು ಹೆಚ್ಚಿಸಲು ಬಯಲುಸೀಮೆಯ ರೈತರು ಹೊಸ ವಿಧಾನವನ್ನು ರೂಪಿಸಿಕೊಂಡಿದ್ದಾರೆ.

ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಈ ರೈತರು ಇತರರಲ್ಲೂ ಜಾಗೃತಿ ಮೂಡಿಸುವ ಜತೆಗೆ ಒಗ್ಗಟ್ಟಿನ ಬಲ ಪ್ರದರ್ಶಿಸುತ್ತಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಚಿಮಲಾಪುರ ಗ್ರಾಮದ 50 ಎಕರೆ ಪ್ರದೇಶದಲ್ಲಿ 50 ರೈತರು ಗುಂಪು ಕೃಷಿ ಕೈಗೊಂಡಿದ್ದಾರೆ. ಕಳೆದ ಮೂವರು ವರ್ಷಗಳಿಂದ ಈ ರೈತರು ತಲಾ ಒಂದು ಎಕರೆಯಂತೆ ಸ್ವಂತ ಜಮೀನಿನಲ್ಲಿ ಸಿರಿ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ಈ ಗುಂಪು ಕೃಷಿಯಿಂದ ವೆಚ್ಚವೂ ಕಡಿಮೆಯಾಗಿದೆ. ಪರಸ್ಪರ ಕೊಡುಕೊಳ್ಳುವಿಕೆ ಆಧಾರದ ಮೇಲೆಯೇ ಕೃಷಿ ನಡೆಯುತ್ತಿದೆ.

ADVERTISEMENT

ಇಲ್ಲಿ ಬೆಳೆಯುವ ನವಣೆ, ಕೊರ್ಲೆ, ಊದುಲು, ಹಾರಕಗಳಿಂದ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಬಿಸ್ಕತ್ತು, ಭರ್ಪಿ, ಚಕ್ಕುಲಿ, ಚಟ್ನಿಗಳನ್ನು ತಯಾರಿಸುತ್ತಿದ್ದಾರೆ. ಈ ಉತ್ಪನ್ನಗಳನ್ನು ತಯಾರಿಸಲು 20 ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಬೇಡಿಕೆಗೆ ತಕ್ಕಂತೆ ಉತ್ಪನ್ನಗಳ ತಯಾರಿ ಈ ಗ್ರಾಮದಲ್ಲಿ ನಡೆಯುತ್ತಿದೆ.

ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಆರಂಭವಾದ ಸಾವಯವ ಮತ್ತು ಸಿರಿಧಾನ್ಯಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ತಮ್ಮ ಅನುಭವ ಹಂಚಿಕೊಂಡ ಚಿಮಲಾಪುರದ ಆನಂದಗೌಡ, ‘ರೈತರು ಒಗ್ಗಟ್ಟಾಗಿ ಸಿರಿ ಧಾನ್ಯಗಳನ್ನು ಬೆಳೆಯುತ್ತಿದ್ದಾರೆ. ನಾನು ಎರಡು ಎಕರೆಯಲ್ಲಿ ನವಣೆ ಬೆಳೆದಿದ್ದೇನೆ. 20 ಕ್ವಿಂಟಲ್‌ ಇಳುವರಿ ದೊರೆತಿದೆ. ₹60ಗೆ ಪ್ರತಿ ಕೆ.ಜಿಯಂತೆ ನವಣೆ ಅಕ್ಕಿ, ರವಾ ಮಾರಾಟ ಮಾಡುತ್ತಿದ್ದೇನೆ. ಈ ಬೆಳೆಗಳಿಗೆ ಖರ್ಚು ಸಹ ಕಡಿಮೆ. ಹೀಗಾಗಿ, ಒಂದು ಎಕರೆಗೆ ಕನಿಷ್ಠ ₹20 ಸಾವಿರ ಲಾಭ ದೊರೆಯುತ್ತದೆ’ ಎಂದು ವಿವರಿಸಿದರು.

ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಉತ್ತೇಜನ ನೀಡಲು 25 ಗ್ರಾಮಗಳಿಗೊಂದು ‘ಕ್ಲಸ್ಟರ್‌’ ರಚಿಸಲಾಗಿದೆ. ಒಂದು ಕ್ಲಸ್ಟರ್‌ನಲ್ಲಿ 500 ರೈತರಿದ್ದಾರೆ.

‘ಕ್ಲಸ್ಟರ್‌ಗಳ ಮೂಲಕವೇ ರೈತರು ಒಗ್ಗೂಡಿ ಸಿರಿಧಾನ್ಯಗಳನ್ನು ಬೆಳೆಯುವ ಕುರಿತು ಮತ್ತು ಮಾರುಕಟ್ಟೆ ಅವಕಾಶಗಳ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ’ ಎಂದು ವಿಶಾಖಪಟ್ಟಣ ಜಿಲ್ಲೆಯ ಪದೇರು ಗ್ರಾಮದ ಎಸ್‌. ರಾಮಲಿಂಗಂ ವಿವರಿಸಿದರು.

ಪಂಜಾಬ್‌ನಲ್ಲಿ ಈಗ ಸಾವಯವ ಕ್ರಾಂತಿ

ಹಸಿರು ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದ್ದ ಪಂಜಾಬ್‌ ರಾಜ್ಯ ಈಗ ಸಿರಿಧಾನ್ಯಗಳನ್ನು ಬೆಳೆಯುವಲ್ಲಿ ಮುನ್ನಡೆ ಸಾಧಿಸುತ್ತಿದೆ.

ಸುಶಿಕ್ಷಿತ ರೈತರೇ ಸಿರಿ ಧಾನ್ಯಗಳನ್ನು ಬೆಳೆಯಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ‘ಪಂಜಾಬ್‌ ಅಗ್ರಿ ಎಕ್ಸ್‌ಪೋರ್ಟ್‌ ಕಾರ್ಪೋರೇಷನ್‌’ ರೈತರಿಂದ ಈ ಉತ್ಪನ್ನಗಳನ್ನು ನೇರವಾಗಿ ಖರೀದಿಸುತ್ತಿದೆ. ಜತೆಗೆ, ಕನಿಷ್ಠ ಬೆಂಬಲ ಬೆಲೆಗಿಂತಲೂ ಶೇಕಡ 30ರಷ್ಟು ಹೆಚ್ಚು ದರವನ್ನು ನೀಡಲಾಗುತ್ತಿದೆ.

ಸಿರಿಧಾನ್ಯ ಬೆಳೆಯುವ ಸುಮಾರು 10 ಸಾವಿರ ರೈತರು ಈಗಾಗಲೇ ‘ಪಂಜಾಬ್‌ ಅಗ್ರಿ ಎಕ್ಸ್‌ಪೋರ್ಟ್‌ ಕಾರ್ಪೋರೇಷನ್‌’ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ವಹಿವಾಟು ನಡೆಸುತ್ತಿದ್ದಾರೆ. ಇನ್ನುಮುಂದೆ ಇಲ್ಲಿಯ ಉತ್ಪನ್ನಗಳು ಜರ್ಮನಿಗೂ ರಫ್ತು ಆಗಲಿವೆ.

‘ಜರ್ಮನಿಗೆ ಈ ವರ್ಷ 20 ಮೆಟ್ರಿಕ್‌ ಟನ್‌ನಷ್ಟು ಸಿರಿಧಾನ್ಯಗಳನ್ನು ರಫ್ತು ಮಾಡುವ ಉದ್ದೇಶವಿದೆ. ಈಗಾಗಲೇ ನಾವು ಕಳುಹಿಸಿದ್ದ ಮಾದರಿಗಳಿಗೆ ಜರ್ಮನಿಯ ಪ್ರಯೋಗಾಲಯದಲ್ಲಿ ಒಪ್ಪಿಗೆಯೂ ದೊರೆತಿದೆ’ ಎಂದು ಸಂಸ್ಥೆಯ ಅಧಿಕಾರಿ ಮನ್‌ಪ್ರೀತ್‌ ವಿವರಿಸಿದರು.
ಸಾವಯವ ಬೆಲ್ಲಕ್ಕೂ ಡಿಮ್ಯಾಂಡು

ಸಾವಯವ ಮತ್ತು ಸಿರಿಧಾನ್ಯ ಮೇಳಕ್ಕೆ ಬಂದಿದ್ದ ಬೆಳಗಾವಿಜಿಲ್ಲೆಯ ರಾಯಭಾಗ ತಾಲ್ಲೂಕಿನ ನಂದಿಕುರುಳಿ ಗ್ರಾಮದ ಪ್ರಕಾಶ್‌ ಬಣಕಾರ್‌, ಸಾವಯವ ಬೆಲ್ಲದಿಂದ ದೊರೆಯುತ್ತಿರುವ ಲಾಭದ ಕುರಿತು ವಿವರಿಸಿದರು.

‘ಸಾವಯವ ಕೃಷಿ ಪದ್ಧತಿಯಂತೆ ಒಂದು ಎಕರೆಯಲ್ಲಿ 50 ಟನ್‌ ಕಬ್ಬು ಬೆಳೆಯುತ್ತೇವೆ. ಇಲ್ಲಿ ಖರ್ಚು ಕಡಿಮೆ. ಜೀವಾಮೃತ, ಎರೆಹುಳು ಗೊಬ್ಬರ ಹಾಕುತ್ತೇವೆ. ಜತೆಗೆ, ರವದಿಯನ್ನು ಸುಡುವುದಿಲ್ಲ. 50 ಟನ್‌ ಕಬ್ಬಿಗೆ 5 ಟನ್‌ ಬೆಲ್ಲ ದೊರೆಯುತ್ತದೆ. ಸಗಟು ರೂಪದಲ್ಲಾದರೆ ಪ್ರತಿ ಕೆ.ಜಿ.ಗೆ ₹50ರಿಂದ 60 ದೊರೆಯುತ್ತದೆ. ಚಿಲ್ಲರೆಯಾಗಿ ಮಾರಾಟ ಮಾಡಿದರೆ ಪ್ರತಿ ಕೆ.ಜಿ.ಗೆ ₹70 ದೊರೆಯುತ್ತದೆ. ರಾಸಾಯನಿಕಗಳನ್ನು ಬಳಸಿ ಬೆಳೆದ ಕಬ್ಬಿನಿಂದ ತಯಾರಿಸಿದ ಬೆಲ್ಲ ₹30ಕ್ಕೆ ಮಾರಾಟವಾದರೆ ಇದು ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತದೆ’ ಎಂದು ವಿವರಿಸಿದರು.

‘ನಾವು ಈಗ ಸಾವಯವ ಕೃಷಿ ಸಂಘ ರಚಿಸಿಕೊಂಡಿದ್ದೇವೆ. ಸದ್ಯ 60 ಸದಸ್ಯರಿದ್ದಾರೆ. ಸಂಘವು ದಿನೇ ದಿನೇ ಬೆಳೆಯುತ್ತಿದೆ. ಸಂಘದ ಮೂಲಕವೇ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ. ಜತೆಗೆ, ಬೆಳಗಾವಿ ಜಿಲ್ಲಾ ಪ್ರಾಂತೀಯ ಒಕ್ಕೂಟದ ಮೂಲಕವೂ ಮಾರಾಟವಾಗುತ್ತಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.