ಬೆಂಗಳೂರು: ‘ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಬರಹದ ಶೈಲಿ ಭಿನ್ನವಾಗಿದೆ. ಇದರಿಂದಾಗಿಯೇ ಅವರಿಗೆ ಮರಾಠಿಯಲ್ಲಿ ದೊಡ್ಡ ಓದುಗರ ವಲಯವಿದೆಯೇ ಹೊರತು, ಮಹಾರಾಷ್ಟ್ರದಲ್ಲಿ ಆರೆಸ್ಸೆಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಪ್ರಬಲವಾಗಿರುವುದು ಕಾರಣವಲ್ಲ’ ಎಂದು ಮರಾಠಿ ಅನುವಾದಕಿ, ಲೇಖಕಿ ಉಮಾ ಕುಲಕರ್ಣಿ ಹೇಳಿದರು.
ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ‘ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ’ ಸ್ವೀಕರಿಸಿ, ಮಾತನಾಡಿದರು. ಪ್ರಶಸ್ತಿಯು ₹1 ಲಕ್ಷ ನಗದು ಒಳಗೊಂಡಿದೆ.
‘ಮಹಾರಾಷ್ಟ್ರದಲ್ಲಿ ಆರೆಸ್ಸೆಸ್ ಪ್ರಬಲವಾಗಿರುವುದರಿಂದ ಅಲ್ಲಿ ಭೈರಪ್ಪ ಅವರ ಕೃತಿಗಳಿಗೆ ಹೆಚ್ಚು ಬೇಡಿಕೆಯಿದೆಯೆಂದು ಕನ್ನಡದ ಕೆಲ ಸಾಹಿತಿಗಳು ಅಭಿಪ್ರಾಯಪಟ್ಟಿದ್ದರು. ಆದರೆ, ವಾಸ್ತವ ಬೇರೆಯಾಗಿದ್ದು, ಓದುಗ ಬಳಗ ಹೆಚ್ಚಲು ಅವರ ಶೈಲಿಯೇ ಮುಖ್ಯ ಕಾರಣ. ಅವರಿಗೆ ಮರಾಠಿಯಲ್ಲಿ ದೊಡ್ಡ ಓದುಗರ ವಲಯವಿದ್ದು, ಪುಣೆಗೆ ಅವರು ಬರುತ್ತಾರೆಂದು ತಿಳಿದರೆ ದೊಡ್ಡ ಸಂಖ್ಯೆಯಲ್ಲಿ ಜನರು ಅವರನ್ನು ನೋಡಲು ಕಾದು ಕುಳಿತಿರುತ್ತಾರೆ’ ಎಂದರು.
‘ಭೈರಪ್ಪ ಅವರ ‘ವಂಶವೃಕ್ಷ’ ಕಾದಂಬರಿ ಅನುವಾದ ಮಾಡುವಾಗ ನಾನು ಕಣ್ಣೀರು ಹಾಕಿದ್ದೂ ಇದೆ. ಕೆಲವು ಕಾದಂಬರಿಗಳು ಆನಂದ ಕೊಟ್ಟಿದ್ದೂ ಇದೆ. ‘ಮಂದ್ರ’ ಕಾದಂಬರಿ ಅನುವಾದ ಮಾಡುವಾಗ ಪದಗಳ ಭಾಷಾಂತರ ಕಷ್ಟವಾಗಿತ್ತು. ಆದರೂ ಮೂಲ ಕಥೆಗೆ ಧಕ್ಕೆಯಾಗದ ರೀತಿಯಲ್ಲಿ, ಮರಾಠಿ ಓದುಗರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದೇನೆ’ ಎಂದು ಹೇಳಿದರು.
ಲೇಖಕಿ ಸಹನಾ ವಿಜಯಕುಮಾರ್, ‘ಭೈರಪ್ಪ ಅವರನ್ನು ಮರಾಠಿ ಓದುಗರಿಗೆ ತಲುಪಿಸಿದ ಶ್ರೇಯಸ್ಸು ಉಮಾ ಕುಲಕರ್ಣಿ ಅವರಿಗೆ ಸಲ್ಲುತ್ತದೆ. ಕನ್ನಡದ ನಂತರ ಮರಾಠಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಭೈರಪ್ಪ ಹೊಂದಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರು ತಮ್ಮ ಕೃತಿಯನ್ನು ಮರಾಠಿ ಓದುಗರಿಗೆ ತಲುಪಿಸಿದಕ್ಕಾಗಿ ಧನ್ಯವಾದ ತಿಳಿಸಿದರು. ಲೇಖಕಿಯರಾದ ಅಂಜಲಿ ಜೋಶಿ, ಉಮಾ ರಾಮರಾವ್, ಭೈರಪ್ಪ ಅವರ ಪತ್ನಿ ಸರಸ್ವತಿ, ಪ್ರತಿಷ್ಠಾನದ ಟ್ರಸ್ಟಿ ಉದಯಶಂಕರ್, ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ.ಜಿ.ಎಲ್. ಶೇಖರ್ ಹಾಗೂ ಸಾಹಿತ್ಯ ಭಂಡಾರದ ರಾಜ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.