ADVERTISEMENT

ಸಣ್ಣ ಕರುಳು ಸಮಸ್ಯೆ: ವಿದೇಶಿ ಯುವತಿಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 20:16 IST
Last Updated 28 ನವೆಂಬರ್ 2020, 20:16 IST

ಬೆಂಗಳೂರು: ಸಣ್ಣ ಕರುಳು ಸಮಸ್ಯೆಯಿಂದ ಬಳಲುತ್ತಿದ್ದ ಯೆಮನ್ ದೇಶದ 19 ವರ್ಷದ ಯುವತಿಗೆ ನಗರದ ಬನ್ನೇರುಘಟ್ಟ ರಸ್ತೆ ಬಳಿಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಸಣ್ಣ ಕರುಳು ಕಸಿ ನಡೆಸಿದ್ದಾರೆ.

ನಗರದಲ್ಲಿ ಕೋವಿಡ್ ಕಾಣಿಸಿಕೊಳ್ಳುವ ಮೊದಲು (ಮಾರ್ಚ್‌ ತಿಂಗಳಲ್ಲಿ) ವಿದೇಶದಿಂದ ತಂದೆಯ ಜತೆಗೆ ಇಲ್ಲಿಗೆ ಬಂದ ಯುವತಿ, ತೀವ್ರ ನಿತ್ರಾಣರಾಗಿದ್ದರು. ಆ ವೇಳೆ ಯುವತಿಯ ತೂಕ 28 ಕೆ.ಜಿಗೆ ಇಳಿಕೆಯಾಗಿತ್ತು. ಅಪೌಷ್ಟಿಕತೆಯಿಂದಲೂ ಬಳಲುತ್ತಿದ್ದು, ಖಿನ್ನತೆಗೆ ಒಳಗಾಗಿದ್ದರು. ಸಣ್ಣ ಕರುಳಿನ ಗ್ಯಾಂಗ್ರೀನ್ ಚಿಕಿತ್ಸೆಗಾಗಿ ಗರ್ಭಪಾತ ಮಾಡಿಸಿಕೊಂಡಿದ್ದರು. ಈ ವೇಳೆ ಅವರ ರಕ್ತನಾಳದ ಮೂಲಕ ಗ್ಲೂಕೋಸ್‌ ಬಲದಿಂದ ಬದುಕುಳಿದಿದ್ದರು. ಸಣ್ಣ ಕರುಳಿನ ಸಮಸ್ಯೆ ಪತ್ತೆ ಮಾಡಿದಡಾ. ಮಹೇಶ್ ಗೋಪಸೆಟ್ಟಿ ಮತ್ತು ಡಾ.ಬಿ.ಎಸ್. ರವೀಂದ್ರ ನೇತೃತ್ವದ ವೈದ್ಯರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿತು ಎಂದು ಆಸ್ಪತ್ರೆ ತಿಳಿಸಿದೆ.

‘ಕಿಬ್ಬೊಟ್ಟೆಯಲ್ಲಿ ಕಾಣಿಸಿಕೊಳ್ಳುವ ನೋವಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಒಂದೇ ಕಾರಣವಲ್ಲ. ಕೆಲವೊಮ್ಮೆ ಕರುಳಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದಲೂ ನೋವು ಕಾಣಿಸಿಕೊಳ್ಳಬಹುದು. ಈ ಕಾರಣ ಯುವತಿಯನ್ನು ಪರೀಕ್ಷಿಸಿದಾಗ ರಕ್ತ ಹೆಪ್ಪುಗಟ್ಟಿರುವುದು ತಿಳಿಯಿತು. ಇದನ್ನು ಆರಂಭದಲ್ಲೇ ಪತ್ತೆ ಮಾಡಿದರೆ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ವಿಳಂಬ ಮಾಡಿದಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಡಾ.ಬಿ.ಎಸ್. ರವೀಂದ್ರ ತಿಳಿಸಿದರು.

ADVERTISEMENT

ಡಾ. ಮಹೇಶ್ ಗೋಪಸೆಟ್ಟಿ, ‘ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಯುವತಿಯನ್ನು ಮಾನಸಿಕವಾಗಿ ಸಜ್ಜುಗೊಳಿಸಲಾಯಿತು. ತೂಕ ಹೆಚ್ಚಳಕ್ಕೂ ಕ್ರಮಗಳನ್ನು ಕೈಗೊಳ್ಳಲಾಯಿತು. ಕೋವಿಡ್ ಕಾರಣ ಕಸಿ ನಡೆಸಲು 9 ತಿಂಗಳು ಕಾಯಬೇಕಾಯಿತು. ದಾನಿ ದೊರೆತ ಬಳಿಕ 16 ಗಂಟೆಗಳಲ್ಲಿ ಸಣ್ಣ ಕರುಳು ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು. ಐದು ದಿನಗಳ ನಂತರ ಯುವತಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.