ADVERTISEMENT

ಸಾಕು ಪ್ರಾಣಿಗಳ ನಿಗಾಕ್ಕೆ ‘ಸ್ಮಾರ್ಟ್ ಬೆಲ್ಟ್’

ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಿಂದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 16:00 IST
Last Updated 13 ಜುಲೈ 2022, 16:00 IST
ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿರುವ ಸ್ಮಾರ್ಟ್ ಬೆಲ್ಟ್ ನಾಯಿಗೆ ಅಳವಡಿಸಿರುವುದು
ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿರುವ ಸ್ಮಾರ್ಟ್ ಬೆಲ್ಟ್ ನಾಯಿಗೆ ಅಳವಡಿಸಿರುವುದು   

ಬೆಂಗಳೂರು: ಸಾಕು ಪ್ರಾಣಿಗಳ ಆರೋಗ್ಯ ಹಾಗೂ ಚಲನವಲನದ ಮೇಲೆ ನಿಗಾ ಇಡಲು ಪಿಇಎಸ್ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿನಿಯರು ಸ್ಮಾರ್ಟ್ ಬೆಲ್ಟ್ ಅಭಿವೃದ್ಧಿಪಡಿಸಿದ್ದಾರೆ.

ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದ ಬಿ.ಎನ್. ವಿಸ್ಮಯಾ, ಪಲ್ಲವಿ ಗೋಪಿನಾಥ್ ಹಾಗೂ ಪ್ರಾರ್ಥನಾ ಭಟ್ ಅವರು ‘ಫಾಂಡ್ ಫ್ಲೂಪಿಟ್ ಸ್ಮಾರ್ಟ್ ಬೆಲ್ಟ್’ ನಿರ್ಮಾಣದ ರೂವಾರಿಗಳು. ಇವರು ‘ಫಾಂಡ್’ ಹೆಸರಿನಲ್ಲಿ ನವೋದ್ಯಮ ಸ್ಥಾಪಿಸಿದ್ದು, ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸುರೇಶ್ ಎನ್. ಅವರ ಮಾರ್ಗದರ್ಶನದಲ್ಲಿ ತಮ್ಮ ಯೋಜನೆಯನ್ನು ಕಾರ್ಯಗತ ಮಾಡಿದ್ದಾರೆ.

ಈ ಬೆಲ್ಟ್ ಸ್ಮಾರ್ಟ್ ಬ್ಯಾಂಡ್ ಮಾದರಿ ಕಾರ್ಯನಿರ್ವಹಿಸಲಿದೆ. ನಾಯಿ, ಬೆಕ್ಕು ಸೇರಿದಂತೆ ವಿವಿಧ ಸಾಕು ಪ್ರಾಣಿಗಳಿಗೆ ಈ ಬೆಲ್ಟ್ ಅಳವಡಿಸಬಹುದಾಗಿದೆ. ಬೆಲ್ಟ್‌ನಲ್ಲಿ ಅಳವಡಿಸಿರುವ ಸ್ಮಾರ್ಟ್ ಸಾಧನಕ್ಕೆ ಮೊಬೈಲ್ ಆ್ಯಪ್ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ. ಬೆಲ್ಟ್‌ನಲ್ಲಿರುವ ಸಾಧನಕ್ಕೆ ಒಮ್ಮೆ ಚಾರ್ಜ್ ಮಾಡಿದರೆ 57 ಗಂಟೆಗಳು ಕಾರ್ಯನಿರ್ವಹಿಸಲಿದೆ. ಬೆಲ್ಟ್ ಹೊಂದಿದ ಪ್ರಾಣಿಯ ದೇಹದ ತಾಪಮಾನ, ಸೇವಿಸಿದ ಆಹಾರದ ಪ್ರಮಾಣ ಸೇರಿದಂತೆ ವಿವಿಧ ಮಾಹಿತಿಗಳು ಆ್ಯಪ್‌ ಮೂಲಕ ಲಭ್ಯವಾಗಲಿವೆ.

ADVERTISEMENT

‘ಸಮಯಕ್ಕೆ ಸರಿಯಾಗಿ ಗುಣಮಟ್ಟದ ಆಹಾರ ಸಿಗದಿದ್ದರಿಂದ ಕೆಲ ಸಾಕು ಪ್ರಾಣಿಗಳು ಅನಾರೋಗ್ಯಕ್ಕೆ ಒಳಗಾಗಿ, ಅವಧಿಗೆ ಮುನ್ನವೇ ಮೃತಪಡುತ್ತಿವೆ. ಇನ್ನೊಂದೆಡೆ ಮನೆಯ ಮಾಲೀಕರು ಹೊರಗಡೆ ತೆರಳಿದಾಗ ಸಾಕು ಪ್ರಾಣಿಗಳ ಮೇಲೆ ನಿಗಾ ಇರಿಸಲು ಸಾಧ್ಯವಿಲ್ಲ. ಅವುಗಳ ಆರೋಗ್ಯದಲ್ಲಾಗುವ ಏರುಪೇರುಗಳೂ ತಿಳಿಯುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿನಿಯರು ಸ್ಮಾರ್ಟ್ ಬೆಲ್ಟ್ ಸಿದ್ಧಪಡಿಸಿದ್ದಾರೆ. ಇದು ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ’ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕಸುರೇಶ್ ಎನ್. ತಿಳಿಸಿದರು.

‘ಆಹಾರ ಒದಗಿಸುವ ಸಮಯ ಬಂದಾಗ ಮೊಬೈಲ್‌ಗೆ ಎಚ್ಚರಿಕೆಯ ಸಂದೇಶ ಬರಲಿದೆ. ಸಾಕು ಪ್ರಾಣಿಗಳ ಆರೋಗ್ಯ ವೃದ್ಧಿಗೆ ಈ ಬೆಲ್ಟ್ ಸಹಕಾರಿ.ಸದ್ಯ ಸೀಮಿತ ಸಂಖ್ಯೆಯಲ್ಲಿ ಬೆಲ್ಟ್‌ಗಳನ್ನು ತಯಾರಿಸಿ, ಮಾರಾಟ ಮಾಡಲಾಗುತ್ತಿದೆ. ಇದೇ 21ಕ್ಕೆ ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು’ ಎಂದು ವಿವರಿಸಿದರು.

ಈ ಬೆಲ್ಟ್‌ಗೆ ವಿದ್ಯಾರ್ಥಿನಿಯರು ₹ 2,999 ನಿಗದಿಪಡಿಸಿದ್ದಾರೆ.thefond.co ಮೂಲಕ ಖರೀದಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.