ADVERTISEMENT

ಬೆಂಗಳೂರು: ಸ್ಮಾರ್ಟ್‌ ಮೀಟರ್‌ ನಿರ್ಧಾರ ಪ್ರಶ್ನಿಸಿದ ಅರ್ಜಿ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 15:22 IST
Last Updated 13 ಆಗಸ್ಟ್ 2025, 15:22 IST
<div class="paragraphs"><p>ನ್ಯಾಯಮೂರ್ತಿ ಎಂ.ನಾಗಪ್ರಸನ್ನ</p></div>

ನ್ಯಾಯಮೂರ್ತಿ ಎಂ.ನಾಗಪ್ರಸನ್ನ

   

ಬೆಂಗಳೂರು: ‘ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆಯುವ ಗ್ರಾಹಕರು ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಿಕೊಳ್ಳಬೇಕು’ ಎಂಬ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ.

‘ಸ್ಮಾರ್ಟ್‌ ಮೀಟರ್‌ ಅಳವಡಿಕೆಗೆ ಸಂಬಂಧಿಸಿದಂತೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ಹೊರಡಿಸಿರುವ ಸುತ್ತೋಲೆಯನ್ನು ರದ್ದುಪಡಿಸಬೇಕು’ ಎಂದು ಕೋರಿ ದೊಡ್ಡಬಳ್ಳಾಪುರದ ಪಿ.ಎಂ.ಹರೀಶ್‌ ಮತ್ತು ಎಂ.ಜಯಲಕ್ಷ್ಮಿ ಸಲ್ಲಿಸಿದ್ದ ರಿಟ್‌ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಪ್ರಕಟಿಸಿತು.

ADVERTISEMENT

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಅವರು, ‘ಸ್ಮಾರ್ಟ್‌ ಮೀಟರ್‌ ಅಳವಡಿಕೆ ವಿಚಾರದಲ್ಲಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮಾರ್ಗಸೂಚಿಗಳಿಗೆ ಅನುಗುಣವಾಗಿಯೇ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ನಡೆದುಕೊಳ್ಳುತ್ತಿದೆ. ಹೊಸದಾಗಿ ಯಾರು ಸ್ಮಾರ್ಟ್‌ ಮೀಟರ್‌ಗಳನ್ನು ಅಳವಡಿಸಿಕೊಳ್ಳುತ್ತಾರೆಯೋ ಅವರಿಗೆ ಮಾತ್ರವೇ ಪರಿಪಾಲನಾ ನಿರ್ದೇಶನಗಳು ಅನ್ವಯವಾಗಲಿವೆ. ಅಷ್ಟಕ್ಕೂ ಇದು ಪೋಸ್ಟ್‌ ಪೇಯ್ಡ್‌ ಆಗಿರುತ್ತದೆ’ ಎಂದು ನೀಡಿದ್ದ ಸಮಜಾಯಿಷಿಯನ್ನು ನ್ಯಾಯಪೀಠ ಪುರಸ್ಕರಿಸಿದೆ.

ಅಂತೆಯೇ, ‘ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲೂ ಇದೇ ವಿಷಯಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಾಕಿ ಇದೆ ಎಂಬ ವಿಚಾರ ಮತ್ತು ಆ ಅರ್ಜಿಯಲ್ಲಿನ ಖಂಡಿಕೆ ಅನುಸಾರದ ವಿವರಗಳು ಈ ಅರ್ಜಿಯಲ್ಲೂ ಯಥಾವತ್ತಾಗಿ ನಕಲುಗೊಂಡಿವೆ. ಹಾಗಾಗಿ, ಈ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅರ್ಜಿಯಲ್ಲಿ ಏನಿತ್ತು?: ‘ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಪ್ರೀ ಪೇಯ್ಡ್ ಸ್ಮಾರ್ಟ್ ಮೀಟರ್) ನಿಯಮಗಳು-2024ರ ಅನ್ವಯ ಎಲ್ಲ ವರ್ಗದ ಗ್ರಾಹಕರೂ ಪ್ರೀ ಪೇಯ್ಡ್‌ ಮೀಟರ್‌ಗಳನ್ನು ಪಡೆಯಲು ಅವಕಾಶ ಇದೆ. ಈ ಕ್ರಮ 2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನಿಯಮ ರೂಪಿಸಲಾಗಿದೆ. ಈ ಪ್ರಕ್ರಿಯೆ ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಎಂದೂ ತಿಳಿಸಲಾಗಿದೆ. ನಮ್ಮ ಸಂಪರ್ಕ ಶಾಶ್ವತವಾದದ್ದು. ಆದರೆ, ಸ್ಮಾರ್ಟ್‌ ಮೀಟರ್‌ ಅಳವಡಿಸಿಕೊಳ್ಳುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂವಹನಾ ಪತ್ರವೊಂದನ್ನು ನೀಡಿದ್ದಾರೆ. ಈ ಮೀಟರ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿರುವ ಹೊರಗಿನ ಏಜೆನ್ಸಿಗಳ ಮುಖಾಂತರವೇ ಖರೀದಿಸಬೇಕಿದೆ. ಈ ಏಜೆನ್ಸಿಗಳು ₹2 ಸಾವಿರ ಬೆಲೆಯ ಮೀಟರ್‌ ಅನ್ನು ₹10 ಸಾವಿರಕ್ಕೆ ಖರೀದಿಸುವಂತೆ ಒತ್ತಾಯಿಸುತ್ತಿವೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠದಲ್ಲಿ ವಿಚಾರಣೆಗೆ ಬಾಕಿ ಇರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೂ ಇಲ್ಲಿ ಸಲ್ಲಿಸಲಾಗಿರುವ ಅರ್ಜಿಗೂ ಎಳ್ಳಷ್ಟೂ ವ್ಯತ್ಯಾಸ ಇಲ್ಲದಿರುವುದು ಅಚ್ಚರಿ. ಇದು ನ್ಯಾಯಾಂಗ ಶಿಸ್ತಿಗೆ ವಿರುದ್ಧವಾಗಿರುವುದು ಸ್ಪಷ್ಟ
ನ್ಯಾಯಮೂರ್ತಿ ಎಂ.ನಾಗಪ್ರಸನ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.