ADVERTISEMENT

ಸರ್ಕಾರಿ ಶಾಲೆಗೆ ‘ಸ್ಮಾರ್ಟ್’ ಸ್ಪರ್ಶ

ಬ್ಯಾಡರಹಳ್ಳಿ: ₹25 ಲಕ್ಷ ವೆಚ್ಚದಲ್ಲಿ ಶಾಲೆಯ ಉನ್ನತೀಕರಣ

ಮನೋಹರ್ ಎಂ.
Published 23 ಅಕ್ಟೋಬರ್ 2020, 21:40 IST
Last Updated 23 ಅಕ್ಟೋಬರ್ 2020, 21:40 IST
ಸ್ಮಾರ್ಟ್‍ಕ್ಲಾಸ್ ಬೋಧನೆಗೆ ತರಗತಿಯೊಳಗೆ ಪ್ರೊಜೆಕ್ಟರ್ ವ್ಯವಸ್ಥೆ.
ಸ್ಮಾರ್ಟ್‍ಕ್ಲಾಸ್ ಬೋಧನೆಗೆ ತರಗತಿಯೊಳಗೆ ಪ್ರೊಜೆಕ್ಟರ್ ವ್ಯವಸ್ಥೆ.   

ಬೆಂಗಳೂರು: ಶಾಲಾ ಕಟ್ಟಡದ ಮೇಲೆಲ್ಲಾ ವರ್ಣಮಯ ಚಿತ್ತಾರ. ತರಗತಿಯ ಒಳಹೊಕ್ಕರೆ ಅಲ್ಲೊಂದು ಸ್ಮಾರ್ಟ್ ಪರದೆ ಅಳವಡಿಸಿರುವ ರಂಗಮಂದಿರ. ಇದು ಸ್ಮಾರ್ಟ್ ಸೌಲಭ್ಯಗಳೊಂದಿಗೆ ನವೀಕೃತಗೊಂಡಿರುವ ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಈಗಿನ ನೋಟ.

‘ಸರ್ಕಾರಿ ಶಾಲೆ ಉಳಿಸಿ’ ಹಾಗೂ ‘ಹೆಣ್ಣುಮಕ್ಕಳ ಹೆಮ್ಮೆ’ ಅಭಿಯಾನದಡಿ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ತಮ್ಮ ‘ಸಂಸದರ ನಿಧಿ’ಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದ್ದು, ಒಟ್ಟು ₹25 ಲಕ್ಷ ವೆಚ್ಚದಲ್ಲಿ ಬ್ಯಾಡರಹಳ್ಳಿ ಸರ್ಕಾರಿ ಶಾಲೆಯನ್ನು ಆಧುನಿಕ ಸೌಲಭ್ಯಗಳೊಂದಿಗೆ ‘ಸ್ಮಾರ್ಟ್ ಶಾಲೆ’ಯನ್ನಾಗಿ ಪರಿವರ್ತಿಸಿದ್ದಾರೆ.

ಈ ಹಿಂದೆ ದಾಸರಹಳ್ಳಿ, ಶಿವಾಜಿನಗರದ ಸರ್ಕಾರಿ ಶಾಲೆಗಳನ್ನು ಚಂದ್ರಶೇಖರ್ ಅಭಿವೃದ್ಧಿಪಡಿಸಿದ್ದರು. ಇದೇ ರೀತಿಯ ಸ್ಮಾರ್ಟ್ ಸೌಲಭ್ಯಗಳೊಂದಿಗೆ ಹೆಬ್ಬಾಳದ ಸರ್ಕಾರಿ ಶಾಲೆಯನ್ನೂ ನವೀಕರಿಸಲಾಗಿದ್ದು, ಶೀಘ್ರವೇ ಉದ್ಘಾಟನೆಗೊಳ್ಳಲಿದೆ.

ADVERTISEMENT

ಬ್ಯಾಡರಹಳ್ಳಿ ಶಾಲೆಯಲ್ಲಿ ಖಾಸಗಿ ಶಾಲೆಗಳ ಮಾದರಿಯಲ್ಲೇ ಹೈಟೆಕ್ ಸೌಲಭ್ಯ ಹೊಂದಿರುವ ಎರಡು ಕೊಠಡಿಗಳನ್ನು ನಿರ್ಮಿಸಲಾಗಿದೆ. ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಅತ್ಯಾಧುನಿಕ ಕುರ್ಚಿಗಳು, ಪ್ರೊಜೆಕ್ಟರ್, ಸ್ಮಾರ್ಟ್‍ಬೋರ್ಡ್ ಪರದೆಗಳನ್ನು ಅಳವಡಿಸಲಾಗಿದೆ.

‘ಹೆಣ್ಣುಮಕ್ಕಳ ಹೆಮ್ಮೆ’ ಕಾರ್ಯಕ್ರಮದಡಿ ಹೆಣ್ಣುಮಕ್ಕಳ ಶುಚಿತ್ವ ಹಾಗೂ ಆರೋಗ್ಯ ದೃಷ್ಟಿಯಿಂದ ಶಾಲೆಯ ಶೌಚಾಲಯ, ನೆಲಹಾಸು ನವೀಕರಿಸಲಾಗಿದೆ. ಶೌಚಾಲಯದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಬರ್ನರ್, ನೀರಿನ ಕೊಳವೆಗಳ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಹೊರಭಾಗ ಹಾಗೂ ತರಗತಿಗಳ ಒಳಗಿನ ಗೋಡೆಗಳ ಮೇಲೆ ಕಲಾವಿದ
ರಿಂದ ಮಹನೀಯರ ಚಿತ್ರಗಳನ್ನು ಬಿಡಿಸಿ, ಅಂದಗೊಳಿಸಲಾಗಿದೆ.

‘ನನ್ನ ಕನಸಿನ ಯೋಜನೆಯಾಗಿರುವ ‘ಸರ್ಕಾರಿ ಶಾಲೆ ಉಳಿಸಿ’ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ ದುರಸ್ತಿ, ನವೀಕರಣ, ಶೌಚಾಲಯ ನಿರ್ಮಾಣ ಕಾರ್ಯ, ಸ್ಮಾರ್ಟ್ ತರಗತಿಗಳು, ಹೆಣ್ಣುಮಕ್ಕಳಿಗೆ ವಿಶ್ರಾಂತಿ ಕೊಠಡಿ, ಸೌರ
ವಿದ್ಯುತ್ ಅಳವಡಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ’ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

’ಈ ಕಾರ್ಯದಡಿ ಈಗಾಗಲೇ ಕೆಲವು ಸರ್ಕಾರಿ ಶಾಲೆಗಳನ್ನು ಪುನಶ್ಚೇತನಗೊಳಿಸಲಾಗಿದೆ. ಇದರ ಭಾಗವಾಗಿ ಮಕ್ಕಳ ಕಲಿಕೆಗೆ ನೆರವಾಗುವ ತಂತ್ರಜ್ಞಾನ ಅಳವಡಿಕೆಯೊಂದಿಗೆ ಬ್ಯಾಡರಹಳ್ಳಿ ಸರ್ಕಾರಿ ಶಾಲೆಯನ್ನು ಸುಂದರಗೊಳಿಸಿದ್ದೇವೆ. ಮಕ್ಕಳು ಶಿಕ್ಷಣ ಪಡೆಯಲು ಪೂರಕ ವಾತಾವರಣ ನಿರ್ಮಿಸುವುದು ಇದರ ಉದ್ದೇಶ’ ಎಂದು ಮಾಹಿತಿ ನೀಡಿದರು.

'ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಿರುವ ಬಹುತೇಕರ ಮೂಲ ಸರ್ಕಾರಿ ಶಾಲೆ. ಇಲ್ಲಿ ಕಲಿತವರು ಶೈಕ್ಷಣಿಕ ಪಾಠದೊಂದಿಗೆ ಬದುಕಿನ ಪಾಠವೂ ಕಲಿಯುತ್ತಾರೆ. ಆದರೆ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವಂತಹ ದುಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮುಂದೆ ಇನ್ನಷ್ಟು ಶಾಲೆಗಳ ಅಭಿವೃದ್ಧಿಪಡಿಸುವ ಚಿಂತನೆಯಿದ್ದು, ಆಸಕ್ತ ಸಂಘ ಸಂಸ್ಥೆಗಳೂ ಕೈಜೋಡಿಸಬಹುದು' ಎಂದರು.

'ಖಾಸಗಿ ಶಾಲಾ ಸೌಲಭ್ಯಗಳನ್ನು ನಮ್ಮ ಶಾಲೆಗೂ ನೀಡಲಾಗಿದೆ. ಈಗ 745 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದು, ಸ್ಮಾರ್ಟ್ ಸೌಲಭ್ಯಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡಲಿದ್ದಾರೆ' ಎಂದು ಶಾಲಾ ಸಿಬ್ಬಂದಿ ವರ್ಗ ಸಂತಸ ವ್ಯಕ್ತಪಡಿಸಿದ್ದಾರೆ.

***

ಶಿಕ್ಷಣವೊಂದೇ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಡಲು ಅಸ್ತ್ರ. ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ತಡೆಯಲು ಎಲ್ಲರೂ ಕೈಜೋಡಿಸಬೇಕು. ಶಾಲೆಗಳ ಅಭಿವೃದ್ಧಿಗೆ ಮುಂದಾಗಿ.

- ಜಿ.ಸಿ.ಚಂದ್ರಶೇಖರ್, ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.