ADVERTISEMENT

ದೃಷ್ಟಿ ಇಲ್ಲದವರಿಗೆ ದಾರಿ ತೋರುವ ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 16:19 IST
Last Updated 23 ಜನವರಿ 2026, 16:19 IST
‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’
‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’   

ಬೆಂಗಳೂರು: ದೃಷ್ಟಿ ಇಲ್ಲದವರಿಗೆ ಸಂಚಾರ ಮತ್ತು ದೈನಂದಿನ ಜೀವನವನ್ನು ಸುಗಮಗೊಳಿಸಲು ‘ಸ್ಮಾರ್ಟ್‌ ವಿಷನ್‌ ಗ್ಲಾಸಸ್‌ ಅಲ್ಟ್ರಾ’ ಎಂಬ ಸಾಧನವನ್ನು ನಾರಾಯಣ ನೇತ್ರಾಲಯವು ಎಸ್‌ಎಚ್‌ಜಿ ಟೆಕ್ನಾಲಜೀಸ್‌ ಸಹಯೋಗದೊಂದಿಗೆ ಅಭಿವೃದ್ಧಿ ಪಡಿಸಿದೆ.

ನಾರಾಯಣ ನೇತ್ರಾಲಯದ ಸಿಇಒ ಎಸ್‌.ಕೆ. ಮಿತ್ತಲ್ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ‘ಶಸ್ತ್ರಚಿಕಿತ್ಸೆ ಅಥವಾ ವೈದ್ಯಕೀಯ ಚಿಕಿತ್ಸೆಗಳಿಂದ ದೃಷ್ಟಿ ಸುಧಾರಿಸಲು ಸಾಧ್ಯವಿಲ್ಲದವರಿಗಾಗಿ ವಿನ್ಯಾಸಗೊಳಿಸಿದ ಆಧುನಿಕ ಸಾಧನವೇ ಸ್ಮಾರ್ಟ್‌ ವಿಷನ್‌ ಅಲ್ಟ್ರಾ ಆಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುವ ಇದು ದೇಶದ 13 ಭಾಷೆಗಳು ಸೇರಿದಂತೆ ಜಗತ್ತಿನ 50 ಭಾಷೆಗಳಲ್ಲಿ ಆ ವ್ಯಕ್ತಿಗೆ ಮಾಹಿತಿ ನೀಡುತ್ತದೆ. ತನಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲಿ ಓದಲು, ನೋಟುಗಳನ್ನು ಗುರುತಿಸಲು, ವಸ್ತುಗಳನ್ನು, ದಾರಿಯಲ್ಲಿನ ಅಡೆತಡೆಗಳನ್ನು ಪತ್ತೆ ಹಚ್ಚಲು, ಎದುರು ಇರುವ ವ್ಯಕ್ತಿಗಳ ಮುಖ ಗುರುತಿಸಲು ಸಹಾಯ ಮಾಡುತ್ತದೆ’ ಎಂದು ವಿವರಿಸಿದರು.

ಎಸ್‌ಎಚ್‌ಜಿ ಟೆಕ್ನಾಲಜೀಸ್‌ ಸಿಇಒ ಸೀತಾರಾಮ್‌ ಮುತ್ತಂಗಿ ಮಾತನಾಡಿ, ‘ನೋಡಲು ಸಾಮಾನ್ಯ ಕನ್ನಡಕದಂತೆಯೇ ಇರುವ ಈ ಸಾಧನವು ದೃಷ್ಟಿ ಇಲ್ಲದವರಿಗೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡುತ್ತದೆ. ಭಾರತದಲ್ಲೇ ತಯಾರಾದ ಈ ಸಾಧನದ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇರುವ ಇಂಥ ತಂತ್ರಜ್ಞಾನಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇದೆ. ಹಾಗಾಗಿ ಸಮಾಜದ ಎಲ್ಲ ವರ್ಗದ ಜನರಿಗೆ ತಲುಪಲಿದೆ’ ಎಂದು ತಿಳಿಸಿದರು.

ADVERTISEMENT

ಕನ್ನಡಕವನ್ನು ನಾಲ್ಕು ತಾಸುಗಳಿಗೆ ಒಮ್ಮೆ ಚಾರ್ಜ್‌ ಮಾಡಬೇಕು. ಮೊಬೈಲ್‌ನಲ್ಲಿ ಇದರ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಂಡಿರಬೇಕು. ಆನಂತರ ಕನ್ನಡಕದಲ್ಲಿಯೇ ಸೈಪ್‌ ಮಾಡುವ ಮೂಲಕ ನಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಬಹುದು. ನಡಿಗೆ, ಓದುವುದು, ಯಾವುದೋ ಸ್ಥಳಕ್ಕೆ ಹೋಗಬೇಕಿದ್ದರೆ ಅದನ್ನು ತಿಳಿಸಿದರೆ ಈ ಸಾಧನವು ಮಾಹಿತಿ ನೀಡುತ್ತಾ ಹೋಗುತ್ತದೆ. ಅದರಂತೆ ಸಾಗಲು ಸಾಧ್ಯ. ಈ ಸಾಧನದಲ್ಲಿ ಅಳವಡಿಸಿದ್ದ ಮೊಬೈಲ್‌ ಸಂಖ್ಯೆಗಳಿಗೆ ತುರ್ತು ಸಮಯದಲ್ಲಿ ಸಂದೇಶಗಳನ್ನೂ ಕಳುಹಿಸಲು ಸಾಧ್ಯ ಎಂದು ಪೀಡಿಯಾಟ್ರಿಕ್‌ ರೆಟಿನಾ ವಿಭಾಗದ ಮುಖ್ಯಸ್ಥ ಡಾ. ಆನಂದ್‌ ವಿನೇಕರ್‌, ಎಸ್‌ಎಚ್‌ಜಿ ಟೆಕ್ನಾಲಜೀಸ್‌ನ ಪ್ರಧಾನ ವ್ಯವಸ್ಥಾಪಕಿ ಶೀಲಾ ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.