ADVERTISEMENT

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕ್ರಮ: ಸ್ಮೃತಿ ಇರಾನಿ

ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ ಎಂದ ಸಚಿವೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 20:05 IST
Last Updated 4 ಏಪ್ರಿಲ್ 2022, 20:05 IST
ಕೇಂದ್ರ ಸಚಿವೆ ಸ್ಮೃತಿ ಇರಾನಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌ ಇದ್ದರು.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌ ಇದ್ದರು.   

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕ್ರಮ ಕೈಗೊಳ್ಳುವುದರ ಜತೆಗೆ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಮಹಿಳಾ ಸಹಾಯ ಕೇಂದ್ರ ತೆರೆಯಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.

ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಜತೆ ಸೋಮವಾರ ನಡೆದ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಹಿಳೆಯರ ವಿರುದ್ಧದ ಎಲ್ಲಾ ರೀತಿಯ ದೌರ್ಜನ್ಯಗಳಿಗೆ ಪರಿಹಾರ ಒದಗಿಸಲು ಮಹಿಳಾ ಸಹಾಯ ಕೇಂದ್ರಗಳು ನೆರವಾಗುತ್ತಿವೆ. ಸದ್ಯ ಇಂತಹ 704 ಮಹಿಳಾ ಸಹಾಯ ಕೇಂದ್ರಗಳು ಕೆಲಸ ಮಾಡುತ್ತಿವೆ. 70 ಲಕ್ಷ ಮಹಿಳೆಯರಿಗೆ ಸಹಾಯ ಕೇಂದ್ರಗಳಿಂದ ನೆರವು ದೊರೆತಿದೆ. ಅಲ್ಲದೆ, ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಯಲು ನಿಯಮಗಳನ್ನು ಮತ್ತಷ್ಟು ಕಠಿಣ ಮಾಡಿರುವುದಾಗಿಯೂ ವಿವರಿಸಿದರು.

ADVERTISEMENT

ತಮ್ಮ ಜೀವಮಾನವಿಡಿ ಬ್ಯಾಂಕ್‌ ಖಾತೆಯನ್ನು ಹೊಂದಿರದ ಸುಮಾರು 24 ಕೋಟಿ ಮಹಿಳೆಯರಿಗಾಗಿ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ಸಖಿ ಯೋಜನೆಯಡಿ 8 ಕೋಟಿ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಗೆ ನೆರವು ನೀಡಲಾಗಿದೆ ಎಂದರು.

ದೇಶದಲ್ಲಿ 14 ಲಕ್ಷ ಅಂಗನವಾಡಿಗಳ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗಿದ್ದು, ಇದರಡಿ 11 ಲಕ್ಷ ಅಂಗನವಾಡಿಗಳು ಸಿದ್ಧವಾಗಿವೆ. ಇದರಿಂದ 9 ಲಕ್ಷ ಮಂದಿಗೆ ಉಪಯೋಗವಾಗಲಿದೆ. ಅಂಗನವಾಡಿಗಳಿಗೆ ಸ್ಮಾರ್ಟ್‌ ಉಪಕರಣಗಳನ್ನು ನೀಡುತ್ತಿದ್ದು, ಈಗಾಗಲೇ 11 ಲಕ್ಷ ಸ್ಮಾರ್ಟ್‌ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಸ್ಮೃತಿ ಇರಾನಿ ಹೇಳಿದರು.

ಕೇಂದ್ರ ಸರ್ಕಾರದ ವತಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ ತಲಾ ₹4,500 ಗೌರವಧನ, 180 ದಿನ ಹೆರಿಗೆ ರಜೆ, 20 ದಿನ ವೇತನ ಸಹಿತ ರಜೆ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ಅನುದಾನವನ್ನು ರಾಜ್ಯಗಳಿಗೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಸಕಾಲದಲ್ಲಿ ಗೌರವ ಧನ ಪಾವತಿ ಮಾಡುತ್ತಿದೆ ಎಂದರು.

ಸಿಎಂ ಮನೆಗೂ ಭೇಟಿ: ಈ ಕಾರ್ಯಕ್ರಮಕ್ಕೂ ಮೊದಲು ಮುಖ್ಯಮಂತ್ರಿಯವರ ರೇಸ್‌ ವ್ಯೂ ಕಾಟೇಜ್‌ ನಿವಾಸಕ್ಕೆ ಸ್ಮೃತಿ ಇರಾನಿ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಂಗನವಾಡಿ ಡ್ಯಾಷ್‌ಬೋರ್ಡ್‌ ಕುರಿತು ಬಸವರಾಜ ಬೊಮ್ಮಾಯಿ ಜತೆಗೆ ಚರ್ಚೆ ನಡೆಸಿದರು. ಡ್ಯಾಷ್‌ಬೋರ್ಡ್‌ ಕಾರ್ಯ ನಿರ್ವಹಿಸುವ ವಿಧಾನದ ಬಗ್ಗೆ ಬೊಮ್ಮಾಯಿ ಪೂರ್ಣ ವಿವರ ನೀಡಿದರು. ಯಾವ ಯಾವ ಅಂಗನವಾಡಿಗಳಲ್ಲಿ ಶಿಕ್ಷಕಿಯರು ಮತ್ತು ಸಿಡಿಪಿಗಳು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೊ ಅಂತಹವರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದನ್ನೂ ಅವರ ಗಮನಕ್ಕೆ ತಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.