ADVERTISEMENT

ಫಿಜಿಯೋಥೆರಪಿಸ್ಟ್ ಕೊಂದು, ದೇಹ ಸುಟ್ಟರು: ಮೂವರು ಸ್ನೇಹಿತರ ಬಂಧನ

ಸೋಲದೇವನಹಳ್ಳಿ ಠಾಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 20:11 IST
Last Updated 6 ಮಾರ್ಚ್ 2023, 20:11 IST
ಕೆ. ಶ್ರೀಧರ್
ಕೆ. ಶ್ರೀಧರ್   

ಬೆಂಗಳೂರು: ಮದ್ಯದ ಪಾರ್ಟಿಗೆಂದು ಕರೆದು ಫಿಜಿಯೋಥೆರಪಿಸ್ಟ್ ಕೆ. ಶ್ರೀಧರ್ (32) ಅವರನ್ನು ಹತ್ಯೆ ಮಾಡಿ ದೇಹ ಸುಟ್ಟು ಹಾಕಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಯಲಹಂಕ ಕೊಂಡಪ್ಪ ಬಡಾವಣೆಯ ವೀರಾಂಜನೇಯ (38), ಗೋವರ್ಧನ್ (23) ಹಾಗೂ ಬುಡ್ಡಪ್ಪ (36) ಬಂಧಿತರು. ಮೂವರು ಸೇರಿಕೊಂಡು ಶ್ರೀಧರ್ ಅವರನ್ನು ಕೊಲೆ ಮಾಡಿ ಗಾಣಿಗರಹಳ್ಳಿ ಬಳಿ ಮೃತದೇಹ ಸುಟ್ಟು ಹಾಕಿದ್ದರು. ಬಟ್ಟೆ ತುಣುಕು ನೀಡಿದ್ದ ಸುಳಿವು ಆಧರಿಸಿ ಶ್ರೀಧರ್ ಗುರುತು ಪತ್ತೆ ಮಾಡಿ, ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೊಂಡಪ್ಪ ಬಡಾವಣೆ ನಿವಾಸಿಯಾಗಿದ್ದ ಶ್ರೀಧರ್, ಆಸ್ಪತ್ರೆಯೊಂದರಲ್ಲಿ ಫಿಜಿಯೋಥೆರಪಿಸ್ಟ್ ಕೆಲಸ ಮಾಡುತ್ತಿದ್ದರು. ಇವರ ಮನೆ ಸಮೀಪದಲ್ಲೇ ವೀರಾಂಜನೇಯ ವಾಸವಿದ್ದ. ಇಬ್ಬರೂ 8 ವರ್ಷಗಳ ಸ್ನೇಹಿತರು. ಹಳೇ ವೈಷಮ್ಯದಿಂದಾಗಿ ಶ್ರೀಧರ್ ಮೇಲೆ ಸಿಟ್ಟಾಗಿದ್ದ ವೀರಾಂಜನೇಯ, ತನ್ನ ಸ್ನೇಹಿತರಾದ ಗೋವರ್ಧನ್ ಹಾಗೂ ಬುಡ್ಡಪ್ಪ ಜೊತೆ ಸೇರಿ ಕೃತ್ಯ ಎಸಗಿದ್ದ’ ಎಂದರು.

ADVERTISEMENT

ಮದ್ಯದ ಪಾರ್ಟಿ ವೇಳೆ ಗಲಾಟೆ: ‘ಶ್ರೀಧರ್ ಹಾಗೂ ವೀರಾಂಜನೇಯ, ಆಗಾಗ ಮದ್ಯದ ಪಾರ್ಟಿ ಮಾಡುತ್ತಿದ್ದರು. ಇತರೆ ಸ್ನೇಹಿತರೂ ಪಾರ್ಟಿಗೆ ಬರುತ್ತಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಪಾರ್ಟಿ ವೇಳೆ ಮದ್ಯದ ಅಮಲಿನಲ್ಲಿ ಶ್ರೀಧರ್ ಹಾಗೂ ವೀರಾಂಜನೇಯ ನಡುವೆ ಗಲಾಟೆ ಆಗಿತ್ತು. ಕೈ ಕೈ ಮಿಲಾಯಿಸಿದ್ದರು. ಸ್ನೇಹಿತರು ಜಗಳ ಬಿಡಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಆಂಧ್ರಪ್ರದೇಶದಲ್ಲಿ ಕೆಲವರ್ಷ ವ್ಯಾಸಂಗ ಮಾಡಿದ್ದ ಶ್ರೀಧರ್, ನಗರದಲ್ಲಿ ಬಂದು ಫಿಜಿಯೋಥೆರಪಿಸ್ಟ್ ಕೆಲಸ ಆರಂಭಿಸಿದ್ದರು. ಮದುವೆ ಸಹ ಆಗಿದ್ದರು. ಆದರೆ, ಕೌಟುಂಬಿಕ ಜಗಳದಿಂದಾಗಿ ಪತ್ನಿ ಮನೆ ಬಿಟ್ಟು ಹೋಗಿದ್ದರು’ ಎಂದು ತಿಳಿಸಿದರು.

ಪಾರ್ಟಿ ನೆಪದಲ್ಲಿ ಹತ್ಯೆ: ‘ಕೆಂಪಾಪುರದಲ್ಲಿ ಕೊಠಡಿ ಬಾಡಿಗೆ ಪಡೆದಿದ್ದ ವೀರಾಂಜನೇಯ, ಅಲ್ಲಿಯೇ ಆಗಾಗ ಮದ್ಯದ ಪಾರ್ಟಿ ಮಾಡಲಾರಂಭಿಸಿದ್ದ. ಶ್ರೀಧರ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪಿ, ಸ್ನೇಹಿತರ ಸಹಾಯ ಪಡೆದಿದ್ದ’ ಎಂದು ಪೊಲೀಸರು ಹೇಳಿದರು.

‘ಮದ್ಯದ ಪಾರ್ಟಿ ಮಾಡೋಣವೆಂದು ಶ್ರೀಧರ್ ಅವರನ್ನು ತನ್ನ ಬಳಿ ಕರೆಸಿದ್ದ ವೀರಾಂಜನೇಯ, ಆಟೊದಲ್ಲಿ ಕೆಂಪಾ
ಪುರದ ಕೊಠಡಿಗೆ

ಕರೆದೊಯ್ದಿದ್ದ. ಸ್ನೇಹಿತರೂ ಜೊತೆಗಿದ್ದರು. ಶ್ರೀಧರ್ ಅವರಿಗೆ ಮದ್ಯ ಕುಡಿಸಿದ್ದ ಆರೋಪಿಗಳು, ಜಗಳ ತೆಗೆದಿದ್ದರು. ಮಾರಕಾಸ್ತ್ರಗಳಿಂದ ಹೊಡೆದು ಶ್ರೀಧರ್ ಅವರನ್ನು ಹತ್ಯೆ ಮಾಡಿದ್ದರು’ ಎಂದು ತಿಳಿಸಿದರು.

ಪೆಟ್ರೋಲ್ ಸುರಿದು ಮೃತದೇಹಕ್ಕೆ ಬೆಂಕಿ: ‘ಮೃತದೇಹವನ್ನು ಆಟೊದಲ್ಲಿ ಗಾಣಿಗರಹಳ್ಳಿಯ ಜಮೀನೊಂದಕ್ಕೆ ಆರೋಪಿಗಳು ತೆಗೆದುಕೊಂಡು ಹೋಗಿದ್ದರು. ಅಲ್ಲಿಯೇ ಪೆಟ್ರೋಲ್ ಹಾಕಿ, ಮೃತದೇಹ ಸುಟ್ಟು ಪರಾರಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಫೆ. 7ರಂದು ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹ ನೋಡಿದ್ದ ಜಮೀನು ಮಾಲೀಕ ಠಾಣೆಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ಮೃತದೇಹ ಯಾರದ್ದು ಎಂಬುದು ಗೊತ್ತಾಗಿರಲಿಲ್ಲ. ಸ್ಥಳದಲ್ಲಿ ಬಟ್ಟೆ ತುಣುಕುಗಳು ಮಾತ್ರ ಸಿಕ್ಕಿದ್ದವು. ಶ್ರೀಧರ್ ನಾಪತ್ತೆ ಬಗ್ಗೆ ದೂರು ನೀಡಲು ಸಂಬಂಧಿಕರು ತಯಾರಿ ನಡೆಸಿದ್ದರು. ಅವರಿಗೆ ಬಟ್ಟೆ ತೋರಿಸಿದಾಗ, ಮೃತದೇಹವನ್ನು ಗುರುತಿಸಿದರು’ ಎಂದು ತಿಳಿಸಿದರು.

‘ಶ್ರೀಧರ್ ಅವರನ್ನು ಕೊಲೆ ಮಾಡಿರುವ ಬಗ್ಗೆ ಸಹೋದರ ಪ್ರಸಾದ್ ಪ್ರತ್ಯೇಕ ದೂರು ನೀಡಿದ್ದರು. ತಾಂತ್ರಿಕ ಪುರಾವೆಗಳನ್ನು ಆಧರಿಸಿ ತನಿಖೆ ಕೈಗೊಂಡಾಗ, ಸ್ನೇಹಿತ ವೀರಾಂಜನೇಯನೇ ಆರೋಪಿ ಎಂಬುದು ತಿಳಿಯಿತು.’

‘ಪಾರ್ಟಿ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಶ್ರೀಧರ್, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಇದರಿಂದ ಸಿಟ್ಟಾಗಿ ಆತನನ್ನು ಕೊಲೆ ಮಾಡಿದೆ. ಸಾಕ್ಷ್ಯ ನಾಶಪಡಿಸಲು ಮೃತದೇಹ ಸುಟ್ಟು ಹಾಕಿದೆ’ ಎಂಬುದಾಗಿ ಆರೋಪಿ ವೀರಾಂಜನೇಯ ಹೇಳಿಕೆ ನೀಡಿದ್ದಾನೆ. ಮೂವರು ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.