ಇನ್ಫೊಸಿಸ್
ಬೆಂಗಳೂರು: ಇನ್ಫೊಸಿಸ್‌ನ ಮೈಸೂರು ಕ್ಯಾಂಪಸ್‌ನಲ್ಲಿ ಮೇ 23ರಿಂದ 25ರವರೆಗೆ ನಡೆಯಲಿರುವ ‘ಸೋಲಾರ್ ಡಿಕ್ಯಾಥಲಾನ್ ಇಂಡಿಯಾ(ಎಸ್‌ಡಿಐ)’ ವಾರ್ಷಿಕ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬರುವ 41 ಬಹುಶಿಸ್ತೀಯ ತಂಡಗಳು, ‘ನೆಟ್–ಜಿರೊ ಬಿಲ್ಡಿಂಗ್’ ವಿನ್ಯಾಸಕ್ಕೆ ಸಂಬಂಧಿಸಿದ ಮಾದರಿಗಳನ್ನು ಪ್ರಸ್ತುಪಡಿಸಲಿವೆ ಎಂದು ಎಸ್‌ಡಿಐ ನಿರ್ದೇಶಕ ಪ್ರಸಾದ್ ವೈದ್ಯ ಹೇಳಿದರು.
ಒಂದು ಕಟ್ಟಡಕ್ಕೆ ಒಂದು ವರ್ಷದಲ್ಲಿ ಬಳಕೆಯಾಗುವ ಇಂಧನವನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪಾದಿಸುವ ಸಾಮರ್ಥ್ಯವಿರುವಂತೆ ಕಟ್ಟಡಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಇಂತಹ ವಿನ್ಯಾಸಗಳನ್ನು ‘ನೆಟ್–ಜಿರೊ ಬಿಲ್ಡಿಂಗ್ ಡಿಸೈನ್’ ಎನ್ನಲಾಗುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವ್ಯವಸ್ಥೆಯಿಂದ ಇಂಧನ ಉತ್ಪಾದಿಸಿದಾಗ, ಪರಿಸರಕ್ಕೆ ಇಂಗಾಲ ಸೇರುವುದು ತಪ್ಪುತ್ತದೆ. ಸೌರ ಫಲಕಗಳು, ಪವನ ವಿದ್ಯುತ್ ಯಂತ್ರದಂತಹ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ ಎಂದು ವಿವರಿಸಿದರು.
2100 ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳನ್ನು ಒಳಗೊಂಡ 175 ತಂಡಗಳಿಂದ 41 ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ. ದೇಶದಾದ್ಯಂತ 150 ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ 300ಕ್ಕಿಂತ ಹೆಚ್ಚು ಕೈಗಾರಿಕೆಗಳು ಪಾಲ್ಗೊಂಡಿವೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.