ADVERTISEMENT

ಕಂಕಣ ಸೂರ್ಯಗ್ರಹಣ: ಬಾನಂಗಳದಲ್ಲಿ ನೆರಳು–ಬೆಳಕಿನಾಟದ ಕೌತುಕ

ಬಹುತೇಕ ವೀಕ್ಷಣೆಗೆ ಮೋಡಗಳಿಂದ ‘ಅಡ್ಡಿ’ l ಅಚ್ಚರಿ ಕಣ್ತುಂಬಿಕೊಳ್ಳುವ ಜನರಿಗೆ ಇನ್ನಿಲ್ಲದ ನಿರಾಸೆ l ಮೂಢನಂಬಿಕೆ, ಕಾಡಿದ ಭೀತಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 11:57 IST
Last Updated 27 ಡಿಸೆಂಬರ್ 2019, 11:57 IST
ಗ್ರಹಣ ಮುಗಿದ ಬಳಿಕ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನವಗ್ರಹಗಳ ವಿಗ್ರಹಗಳಿಗೆ ವಿಶೇಷ ಅಭಿಷೇಕ ಮಾಡಲಾಯಿತು –ಪ್ರಜಾವಾಣಿ ಚಿತ್ರ
ಗ್ರಹಣ ಮುಗಿದ ಬಳಿಕ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನವಗ್ರಹಗಳ ವಿಗ್ರಹಗಳಿಗೆ ವಿಶೇಷ ಅಭಿಷೇಕ ಮಾಡಲಾಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಾನಂಗಳದಲ್ಲಿ ಅಪರೂಪಕ್ಕೊಮ್ಮೆ ಘಟಿಸುವ ವಿಸ್ಮಯವನ್ನು ನೋಡಲು ತುದಿಗಾಲ ಮೇಲೆ ನಿಂತಿದ್ದ ನಗರದ ಜನತೆಗೆ ಮೋಡದಲ್ಲಿ ಮರೆಯಾಗಿದ್ದ ಸೂರ್ಯ–ಚಂದ್ರ ನಿರಾಸೆಯನ್ನುಂಟು ಮಾಡಿದರು.

9 ವರ್ಷದ ಬಳಿಕ ನಡೆದಕಂಕಣ ಸೂರ್ಯಗ್ರಹಣದ ಸಂಪೂರ್ಣ ಚಿತ್ರಣವನ್ನು ಕಣ್ತುಂಬಿಕೊಳ್ಳುವ ನಗರದ ಜನರ ಆಸೆ ಕೈಗೂಡಲೇ ಇಲ್ಲ.

ಅಗತ್ಯ ಸುರಕ್ಷತೆಯೊಂದಿಗೆ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಮುಂಜಾನೆಯಿಂದಲೇ ಜನ ಕಾತುರದಿಂದ ಕಾಯುತ್ತಿದ್ದರು. ಜವಾಹರ್‌ಲಾಲ್‌ ನೆಹರೂ ತಾರಾಲಯ, ಲಾಲ್‌ಬಾಗ್,ಕರ್ನಾಟಕ ವಿಜ್ಞಾನ ಪರಿಷತ್ ಆವರಣ, ರಾಜಾಜಿನಗರ ಆರ್‌ಪಿಎ ಮೈದಾನ, ನವರಂಗ್‌ ಮೈದಾನ, ಕೆಂಗೇರಿ, ಆರ್‌.ಟಿ.ನಗರ ಮೈದಾನ, ಬಸವೇಶ್ವರನಗರ ಉದ್ಯಾನ ಸೇರಿದಂತೆ ನಗರದ ವಿವಿಧೆಡೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಮಕ್ಕಳು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರೂ ಕುತೂಹಲ, ಉತ್ಸಾಹದಿಂದ ಸೇರಿದ್ದರು. ಕೆಲವರು ದೂರದರ್ಶಕ, ಕ್ಯಾಮೆರಾವನ್ನೂ ತಂದಿದ್ದು, ಪಾರ್ಶ್ವ ಸೂರ್ಯಗ್ರಹಣವನ್ನು ಸೆರೆ ಹಿಡಿಯಲು ಸನ್ನದ್ದರಾಗಿದ್ದರು. ಕೆಲ ನಿಮಿಷಗಳು ಕಾಣಿಸಿಕೊಂಡ ಕಂಕಣ ಸೂರ್ಯ ಮೋಡಗಳ ನಡುವೆ ಕಣ್ಣಾಮುಚ್ಚಾಲೆಯಾಡಿ ನಿರಾಸೆ ಮೂಡಿಸಿದ.

ನಗರದಲ್ಲಿ ಬೆಳಿಗ್ಗೆ 8.06ಕ್ಕೆ ಗ್ರಹಣ ಪ್ರಾರಂಭವಾದರೂ 9ಗಂಟೆ ಬಳಿಕವಷ್ಟೇ ಈ ವಿದ್ಯಮಾನ ‌ಗೋಚರಿಸಲಾ
ರಂಭಿಸಿತು. ಕೆಲ ಕ್ಷಣಗಳು ಮಾತ್ರ ಸೂರ್ಯ–ಚಂದ್ರರ ಸಮಾಗಮ ವೀಕ್ಷಣೆ ಸಾಧ್ಯವಾಯಿತು. ಜವಾಹರ್‌ ಲಾಲ್ ನೆಹರೂ ತಾರಾಲಯದಲ್ಲಿ ಗ್ರಹಣ ವೀಕ್ಷಣೆಗೆ 500ಕ್ಕೂ ಅಧಿಕ ಮಂದಿ ಬಂದಿದ್ದರು.

5 ದೂರದರ್ಶಕಗಳಿಂದ ಸೂರ್ಯನ ಬಿಂಬವನ್ನು ಪರದೆಯ ಮೇಲೆ ಮೂಡಿಸುವ ಮೂಲಕ ಗ್ರಹಣದ ವಿವಿಧ ಹಂತಗಳನ್ನು ತೋರಿಸುವ ಪ್ರಯತ್ನಗಳೂ ನಡೆದವು.ಸೂರ್ಯನನ್ನು ನೇರವಾಗಿ ವೀಕ್ಷಿಸಲು 14 ವೆಲ್ಡರ್ ಗ್ಲಾಸ್‌ಗಳು ಇದ್ದವು.ಸೂರ್ಯಗ್ರಹಣ ವಿವರ ನೀಡಲು 12 X 6 ಅಳತೆಯ ಭಿತ್ತಿಚಿತ್ರವನ್ನು ಪ್ರದರ್ಶಿಸಲಾಯಿತು.

ರಾಜ್ಯ ನಡಿಗೆದಾರರ ಒಕ್ಕೂಟ ಸಹಭಾಗಿತ್ವದಲ್ಲಿಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯಘಟಕವು ಲಾಲ್‍ಬಾಗ್‍ನ ಕೆಂಪೇಗೌಡರ ಗೋ‍ಪುರ ಆವರಣದಲ್ಲಿ ಆಯೋಜಿಸಿದ್ದ ‘ಸೂರ್ಯೋತ್ಸವ ಸಂಭ್ರಮ'ವನ್ನು ಭೂವಿಜ್ಞಾನಿ ಎಚ್.ಎಸ್.ಎಮ್. ಪ್ರಕಾಶ್ ಉದ್ಘಾಟಿಸಿದರು.

ನೂರಾರು ಮಂದಿ ಸೌರ ಕನ್ನಡಕ, ದೂರದರ್ಶಕಗಳ ಸಹಾಯದಿಂದ ಗ್ರಹಣ ವೀಕ್ಷಿಸಿದರು.ಮೌಢ್ಯ ತೊಡೆದು
ಹಾಕುವ ಉದ್ದೇಶದಿಂದ ಬಂದವರಿಗೆ ಉಪಾಹಾರ ಉಣಬಡಿಸಲಾಯಿತು.

‘ಗ್ರಹಣವು ಸೌರಮಂಡಲದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಗ್ರಹಣದ ಬಗ್ಗೆ ಇರುವು ಮೂಢನಂಬಿಕೆಯಿಂದ ಹೊರಬಂದು, ವೈಜ್ಞಾನಿಕ ದೃಷ್ಟಿಯಿಂದ ವೀಕ್ಷಿಸಬೇಕು’ ಎಂದು ಎಚ್.ಎಸ್.ಎಮ್.ಪ್ರಕಾಶ್ ತಿಳಿಸಿದರು.

ಗ್ರಹಣದ ಅವಧಿಯಲ್ಲಿದೋಷ ಪರಿಹಾರಕ್ಕೆ ಬಹುತೇಕರು ಮನೆಯಲ್ಲಿಯೇ ದೇವರ ನಾಮ ಜಪಿಸಿದರು. ಮತ್ತೊಂದೆಡೆ ಮೌಢ್ಯ ತೊಡೆದುಹಾಕಲು ಪ್ರಗತಿಪರರು ಗ್ರಹಣ ಅವಧಿಯಲ್ಲಿ ಉಪಾಹಾರ ಸೇವಿಸಿ ಸಂಭ್ರಮಿಸಿದರು. ಬಹುತೇಕ ಎಲ್ಲ ದೇವಾಲಯಗಳ ಬಾಗಿಲುಗಳೂ ಬೆಳಿಗ್ಗೆ 7 ಗಂಟೆಗೆ ಮುಚ್ಚಲಾಗಿತ್ತು. ಗ್ರಹಣಕಾಲದ ನಂತರ 11.30ಕ್ಕೆ ದೇವಾಲಯದಲ್ಲಿ ಶುದ್ಧಿ ಕಾರ್ಯ ಪ್ರಾರಂಭವಾಯಿತು.

ಉಪಾಹಾರ ಸೇವಿಸಿ ಜಾಗೃತಿ: ಮೂಢನಂಬಿಕೆ ವಿರೋಧಿ ಒಕ್ಕೂಟವು ಪುರಭವನದ ಮುಂಭಾಗ ಜನಜಾಗೃತಿ ಕಾರ್ಯಕ್ರಮ ನಡೆಸಿತು. ಒಕ್ಕೂಟದ ಪ್ರತಿನಿಧಿಗಳು ಗ್ರಹಣದ ಅವಧಿಯಲ್ಲಿ ಉಪಾಹಾರ ಹಾಗೂ ಹಣ್ಣುಗಳನ್ನು ಸೇವಿಸಿ, ಮೂಢನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಿದರು.

‘ಸೂರ್ಯ ಗ್ರಹಣ ನಡೆಯುವುದು ಖಗೋಳದಲ್ಲಿ. ಭೂಮಿಯ ಮೇಲೆ ಅದು ಪರಿಣಾಮ ಬೀರುವುದಿಲ್ಲ. ಕೆಲವರು ಗ್ರಹಣದ ಬಗ್ಗೆ ತಪ್ಪಾಗಿ ಬಿಂಬಿಸಿ, ಲಾಭ ಮಾಡಿಕೊಳ್ಳುತ್ತಿದ್ದಾರೆ. ದೇವಾಲಯಗಳಲ್ಲಿ ಜ್ಞಾನದ ಜ್ಯೋತಿ ಬೆಳಗಿಸುವ ಕೆಲಸವಾಗಬೇಕು’ ಎಂದು ಲೇಖಕಿಬಿ.ಟಿ. ಲಲಿತಾ ನಾಯಕ್ ತಿಳಿಸಿದರು.

‘ದೇಶದ ಜನರ ಮನಸ್ಸಿನಲ್ಲಿ ತುಂಬಿಕೊಂಡಿರುವ ಮೂಢನಂಬಿಕೆಯನ್ನು ಮೊದಲು ತೊಲಗಿಸಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘಟಿತವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಜನರು ವೈಜ್ಞಾನಿ
ಕತೆಯನ್ನು ಅರ್ಥ ಮಾಡಿಕೊಳ್ಳಬೇಕು. ದಿನದಿಂದ ದಿನಕ್ಕೆ ವಿಜ್ಞಾನ ಬೆಳೆಯುತ್ತಿದೆ. ಆದರೆ, ಇನ್ನೂ ಜನರು ಮೌಢ್ಯದಲ್ಲಿಯೇ ತೇಲಾಡುತ್ತಿದ್ದಾರೆ’ ಎಂದು ವಕೀಲ ಪ್ರೊ.ರವಿವರ್ಮ ಕುಮಾರ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.