ADVERTISEMENT

ಘನತ್ಯಾಜ್ಯ: ಎಸ್‌ಐಟಿ ರಚನೆಗೆ ಸಿಎಂ ಸೂಚನೆ

ಬಿಎಸ್‌ಡಬ್ಲ್ಯುಎಂಎಲ್‌: ನಗರಾಭಿವೃದ್ಧಿ ಇಲಾಖೆಯಿಂದ ತನಿಖೆ ಇಲ್ಲ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 15:36 IST
Last Updated 6 ಜುಲೈ 2023, 15:36 IST
   

ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್‌)  ಸಂಪೂರ್ಣ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಅವರು ನಗರಾಭಿವೃದ್ಧಿ ಇಲಾಖೆಗೆ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜೂನ್‌ 20ರಂದು ಕಳುಹಿಸಿದ್ದ ಟಿಪ್ಪಣಿಯನ್ನು ಮಾರ್ಪಡಿಸಿ, ಮುಖ್ಯ ಕಾರ್ಯದರ್ಶಿಯವರಿಗೆ ಜೂನ್‌ 26ರಂದು ಎಸ್‌ಐಟಿ ರಚಿಸಲು ಟಿಪ್ಪಣಿ ಕಳುಹಿಸಿದ್ದಾರೆ. ಬಿಎಸ್‌ಡಬ್ಲ್ಯುಎಂಎಲ್‌ ಟೆಂಡರ್‌ ಹಾಗೂ ಕಾರ್ಯಾದೇಶ ಪ್ರಕ್ರಿಯೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳ ಪಾತ್ರವೂ ಇರುವುದರಿಂದ, ಆ ಇಲಾಖೆಯ ಅಧಿಕಾರಿಗಳಿಂದ ತನಿಖೆ ನಡೆಸುವುದು ಬೇಡ ಎಂಬ ಉದ್ದೇಶದಿಂದ ಎಸ್ಐಟಿ ರಚಿಸಲು ಆದೇಶಿಸಿದ್ದಾರೆ.

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಎಸ್‌ಐಟಿ ರಚಿಸುವ ಬಗ್ಗೆ ಅಗತ್ಯ ಪ್ರಸ್ತಾವದೊಂದಿಗೆ ಕಡತ ಮಂಡಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಆದರೆ, ಮುಖ್ಯ ಕಾರ್ಯದರ್ಶಿಯವರು ಮತ್ತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೇ ಟಿಪ್ಪಣಿಯನ್ನು ಕಳುಹಿಸಿರುವುದು ಗೊಂದಲಕ್ಕೀಡು ಮಾಡಿದೆ.

ADVERTISEMENT

ಬಿಎಸ್‌ಡಬ್ಲ್ಯುಎಂಎಲ್‌ನಿಂದ ಸರ್ಕಾರದ ಹಣ ದುರುಪಯೋಗವಾಗುತ್ತಿದೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಪಿ.ಆರ್‌. ರಮೇಶ್‌ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದರು. ‘ಪ್ರಜಾವಾಣಿ’ಯಲ್ಲಿ ‘ಗುತ್ತಿಗೆ ದೋಷಯುಕ್ತ: ₹13 ಕೋಟಿ ಬಿಡುಗಡೆ’ ಶೀರ್ಷಿಕೆಯಡಿ ಜೂನ್‌ 20ರಂದು ಹಾಗೂ ‘ಕಸ ಸಾಗಣೆಗೆ ದುಪ್ಪಟ್ಟಿಗೂ ಹೆಚ್ಚು ವೆಚ್ಚ’ ವರದಿ  2022ರ ಡಿ.20ರಂದು ಪ್ರಕಟವಾಗಿತ್ತು.

ಬಿಎಸ್‌ಡಬ್ಲ್ಯುಎಂಎಲ್‌ ಸ್ಥಾಪನೆಯಾದಂದಿನಿಂದ ನೀಡಿರುವ ಕಾರ್ಯಾದೇಶಗಳು, ಚಾಲ್ತಿಯಲ್ಲಿರುವ ಟೆಂಡರ್‌ ಪ್ರಕ್ರಿಯೆಗಳನ್ನು ಕೂಡಲೇ ರದ್ದುಗೊಳಿಸಬೇಕು. ಅನುಷ್ಠಾನಗೊಳಿಸಿದ ಕಾಮಗಾರಿಗಳು, ಹಣ ದುರುಪಯೋಗ, ಸಂಸ್ಥೆಯ ಸಂಪೂರ್ಣ ಕಾರ್ಯವೈಖರಿ ಬಗ್ಗೆ ಸಮಗ್ರ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದರು. ಇದೀಗ, ಆ ಎಲ್ಲ ಪ್ರಕ್ರಿಯೆ ರದ್ದುಗೊಳಿಸುವ ಜೊತೆಗೆ ತನಿಖೆಗೆ ಎಸ್‌ಐಟಿ ರಚಿಸಲು ತೀರ್ಮಾನಿಸಲಾಗಿದೆ.

ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದ ಹಿಂದಿನ ಟಿಪ್ಪಣಿಯನ್ನೇ ಇದರಲ್ಲೂ ಪ್ರಸ್ತಾಪಿಸಲಾಗಿದ್ದು, ₹1,100 ಕೋಟಿ ವೆಚ್ಚ ಮಾಡಿರುವ ಅವೈಜ್ಞಾನಿಕ ಕ್ರಮಗಳಿಂದ ವಾಹನ ಸವಾರರು ಹಾಗೂ ನಾಗರಿಕರ ಆರೋಗ್ಯ, ಪರಿಸರಕ್ಕೆ ಹಾನಿ ಉಂಟು ಮಾಡುವ ಯೋಜನೆಗಳಾಗಿವೆ ಎಂದಿದ್ದಾರೆ. ‍ಪರಿಶುದ್ಧ ವೆಂಚರ್ಸ್‌ಗೆ ನಿಯಮಗಳನ್ನು ಮೀರಿ ₹13.5 ಕೋಟಿ ಮುಂಗಡ ನೀಡಿರುವುದರಿಂದ ಹಣದ ದುರುಪಯೋಗವಾಗಿದೆ. ಇದೆಲ್ಲವನ್ನೂ ಕೂಲಂಕಷವಾಗಿ ತನಿಖೆ ನಡೆಸಲು ಸೂಚಿಸಲಾಗಿದೆ.

ಬಜೆಟ್‌ ತಯಾರಿಯಿಂದ ಎಸ್‌ಐಟಿ ರಚನೆ ವಿಳಂಬವಾಗಿದ್ದು, ಶೀಘ್ರವೇ ತನಿಖಾ ತಂಡಕ್ಕೆ ಸದಸ್ಯರನ್ನು ನೇಮಿಸಿ ಸರ್ಕಾರಿ ಆದೇಶ ಹೊರಬೀಳಲಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.