ಹೈಕೋರ್ಟ್
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 2024ರ ನವೆಂಬರ್‌ನಲ್ಲಿ ‘ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಗಮ ನಿಯಮಿತ" (ಬಿಎಸ್‌ಡಬ್ಲ್ಯುಎಂಎಲ್) ಹೊರಡಿಸಿದ್ದ ಹೊಸ ಟೆಂಡರ್ ಅನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
‘ಬಿಎಸ್‌ಡಬ್ಲ್ಯುಎಂಎಲ್’ ಹೊರಡಿಸಿದ್ದ ಹೊಸ ಟೆಂಡರ್ ನಿಯಮಗಳನ್ನು ಪ್ರಶ್ನಿಸಿ ಹಲವು ಗುತ್ತಿಗೆದಾರರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ನಾಲ್ಕು ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ’ ಎಂದು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಆದೇಶಿಸಿದೆ.
ಅಂತೆಯೇ, ಅರ್ಜಿದಾರರಿಗೆ ಬಿಬಿಎಂಪಿ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಕರೆಯಲಿರುವ ತ್ಯಾಜ್ಯ ವಿಲೇವಾರಿ ಟೆಂಡರ್‌ಗಳಲ್ಲಿ ಭಾಗವಹಿಸಲು ಅನುಮತಿ ನೀಡಿದೆ.
‘ಟೆಂಡರ್ ವಾಪಸು ಪಡೆದದ್ದು ಏಕಪಕ್ಷೀಯ’ ಎಂಬ ಅರ್ಜಿದಾರರ ಆರೋಪವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ‘ಸರ್ಕಾರ ವಿಸ್ತೃತ ಸಮಾಲೋಚನೆ ಬಳಿಕವೇ 2022ರ ಸೆಪ್ಟಂಬರ್ ನಲ್ಲಿ ಟೆಂಡರ್ ವಾಪಸ್ ಪಡೆದಿರುವುದು ಸ್ಪಷ್ಟವಾಗಿದೆ’ ಎಂಬುದನ್ನು ದೃಢಪಡಿಸಿದೆ.
‘ಟೆಂಡರ್ ದರವನ್ನು ಮನಬದಂತೆ ನಿಗದಿ ಮಾಡಲಾಗಿದೆ’ ಎಂಬ ಆರೋಪಕ್ಕೆ ಉತ್ತರಿಸಿರುವ ನ್ಯಾಯಪೀಠ, ‘ಈ ಕೋರ್ಟ್ ಬೆಲೆ ನಿಗದಿಯ ಬಗ್ಗೆ ಮೌಲ್ಯಮಾಪನ ಮಾಡುವ ತಜ್ಞನಲ್ಲ’ ಎಂದು ಕುಟುಕಿದೆ.
ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ನ್ಯಾಯಪೀಠ, ‘ಈ ಅರ್ಜಿಗಳಲ್ಲಿ ಯಾವ್ಯಾವ ಗುತ್ತಿಗೆದಾರರು ಅಥವಾ ಟೆಂಡರ್‌ದಾರರು ಇದ್ದಾರೋ ಅವರಿಗೆ ಹೊಸ ಟೆಂಡರ್ ನಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ಆದ್ದರಿಂದ, ಹೊಸ ಟೆಂಡರ್ ರದ್ದುಗೊಳಿಸಲು ಯಾವುದೇ ಕಾರಣಗಳಿಲ್ಲ ಮತ್ತು ಈಗಾಗಲೇ ರದ್ದುಗೊಳಿಸುವ ಟೆಂಡರ್ ರೀ-ಕಾಲ್ ಮಾಡುವುದರಲ್ಲಿ ಅರ್ಥವಿಲ್ಲ’ ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.