ADVERTISEMENT

‘ವಿಶ್ವಭಾರತಿ ಸೊಸೈಟಿ– ಸಂಕಟ ಬಗೆಹರಿಸಿ’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:21 IST
Last Updated 28 ಫೆಬ್ರುವರಿ 2021, 5:21 IST

ಬೆಂಗಳೂರು: ವಿಶ್ವಭಾರತಿ ಹೌಸ್‌ ಬಿಲ್ಡಿಂಗ್‌ ಕೋ–ಆಪರೇಟಿವ್‌ ಸೊಸೈಟಿ ವತಿಯಿಂದ ಸಚ್ಚಿದಾನಂದ ನಗರದಲ್ಲಿ ನಿರ್ಮಾಣವಾಗಿರುವ ಬಡಾವಣೆಯ ನಿವೇಶನದಾರರಿಗೆ ಸ್ವಂತ ಮನೆ ನಿರ್ಮಿಸಲು ಮೂರು ದಶಕಗಳಿಂದ ಅಡ್ಡಿಪಡಿಸಲಾಗುತ್ತಿದೆ. ಇಲ್ಲಿನ ನಿವೇಶನದಾರರ ಸಮಸ್ಯೆಗೆ ಸರ್ಕಾರ ಮುಕ್ತಿ ನೀಡಬೇಕು ಎಂದು ಸಚ್ಚಿದಾನಂದ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸಿದೆ.

‘ಸೊಸೈಟಿಯು 65 ಎಕರೆಗಳಷ್ಟು ವಿಶಾಲ ಜಾಗದಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆಯಲ್ಲಿ 170ಕ್ಕೂ ಹೆಚ್ಚು ಹಿರಿಯ ನಾಗರಿಕರು ನಿವೇಶನ ಹೊಂದಿದ್ದಾರೆ. ಸರ್ವೆ ನಂಬರ್‌ 212 ಮತ್ತು 213ರಲ್ಲಿ ಒಟ್ಟು 11 ಎಕರೆ ಪ್ರದೇಶದಲ್ಲಿ ನಿವೇಶನಗಳು ಸೊಸೈಟಿ ಸದಸ್ಯರ ಸ್ವಾಧೀನದಲ್ಲಿದೆ. ಆದರೆ, ಮುಂಗಡ ಪಡೆದು ಲಿಖಿತ ಒಪ್ಪಂದದ ಮೂಲಕ ಬಡಾವಣೆಗೆ ಜಾಗ ಬಿಟ್ಟುಕೊಟ್ಟ ಭೂಮಾಲೀಕರೊಬ್ಬರು ಸದಸ್ಯರು ಇಲ್ಲಿ ಮನೆ ನಿರ್ಮಿಸಲು ಅಡ್ಡಿಪಡಿಸುತ್ತಿದ್ದಾರೆ’ ಎಂದು ಸಂಘವು ದೂರಿದೆ.

‘ಜಾಗ ಬಿಟ್ಟುಕೊಟ್ಟ ಭೂಮಾಲೀಕರ ವಿರುದ್ಧ ಸೊಸೈಟಿಯು 1996ರಲ್ಲಿ ಸಿವಿಲ್‌ ಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದು, ನ್ಯಾಯಾಲಯವು ಈ ಬಡಾವಣೆಯ ಕಾನೂನುಬದ್ಧತೆಯನ್ನು 2005ರಲ್ಲಿ ಎತ್ತಿ ಹಿಡಿದಿದೆ. ಕ್ರಯಪತ್ರಗಳನ್ನು ನೋಂದಣಿ ಮಾಡುವಂತೆ ಉಪನೋಂದಣಾಧಿಕಾರಿಗಳಿಗೆ ಆದೇಶವನ್ನೂ ಮಾಡಿದೆ. 2010ರಲ್ಲಿ ಭೂಮಾಲೀಕರು ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್‌ ತಳ್ಳಿಹಾಕಿದೆ. ಇನ್ನೊಬ್ಬ ವ್ಯಕ್ತಿಯು ಈ ಸ್ವತ್ತಿನ ಮಾಲೀಕ ನಾನು ಎಂದು ಇದೇ ಫೆ 13ರಂದು ದಾಂಧಲೆ ನಡೆಸಿದ್ದಾರೆ.’

ADVERTISEMENT

‘ಈ ನಡುವೆ ಸರ್ವೆ ನಂಬರ್‌ 213ರ ಜಾಗವನ್ನು ಕ್ರಯಪತ್ರದ ಮೂಲಕ ಬೇರೊಬ್ಬರ ಹೆಸರಿಗೆ ₹ 27.50 ಕೋಟಿಗೆ ಮಾರಾಟ ಮಾಡಲಾಗಿದ್ದು, ಇದರ ನೋಂದಣಿಯೂ ನಡೆದಿದೆ. ಈ ಬೆಳವಣಿಗೆಗಳಿಂದ ಇಲ್ಲಿ ನಿವೇಶನ ಹೊಂದಿರುವ ಹಿರಿಯ ನಾಗರಿಕರು ರೋಸಿ ಹೋಗಿದ್ದಾರೆ’ ಎಂದು ಸಂಘವು ಹೇಳಿದೆ.

‘ಈ ಅಕ್ರಮ ನೋಂದಣಿಯನ್ನು ರದ್ದುಪಡಿಸಿ, ಈ ಬಡಾವಣೆಯ ನಿವೇಶನದಾರರಿಗೆ ಸರ್ಕಾರ ನ್ಯಾಯ ಒದಗಿಸಬೇಕು ಹಾಗೂ ಅವರು ಮನೆ ನಿರ್ಮಿಸುವುದಕ್ಕೆ ಪೊಲೀಸ್‌ ಇಲಾಖೆ ರಕ್ಷಣೆ ಒದಗಿಸಬೇಕು ಎಂದು ಸಂಘದ ಅಧ್ಯಕ್ಷ ದಾಮೋದರ ನಾಯ್ಡು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.