ADVERTISEMENT

ಮೊಬೈಲ್‌ ಕೊಡಿಸದಿದ್ದಕ್ಕೆ ತಾಯಿ ಕೊಲೆ: ಆರೋಪಿ ಬಂಧನ

ಸೊಪ್ಪು ಮಾರಿ ಜೀವನ ಸಾಗಿಸುತ್ತಿದ್ದ ಕುಟುಂಬ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 2:20 IST
Last Updated 4 ಜೂನ್ 2022, 2:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಫಾತಿಮಾ ಮೇರಿ (45) ಎಂಬುವರನ್ನು ಗುರುವಾರ ಮಧ್ಯಾಹ್ನ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಮಗ ದೀಪಕ್ ಎಡ್ವಿನ್‌ನನ್ನು (26) ಪೊಲೀಸರು ಬಂಧಿಸಿದ್ದಾರೆ.

‘ಮೈಲಸಂದ್ರ ನಿವಾಸಿ ಫಾತಿಮಾ, ಪತಿ ಸ್ವಾಮಿ ಹಾಗೂ ಮಗ ದೀಪಕ್ ಎಡ್ವಿನ್ ಜೊತೆ ನೆಲೆಸಿದ್ದರು. ಟಚ್‌ ಸ್ಕ್ರೀನ್ ಮೊಬೈಲ್ ಕೊಡಿಸಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡ ಆರೋಪಿ ದೀಪಕ್, ತಾಯಿ ಫಾತಿಮಾ ಅವರನ್ನು ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಬೇಗೂರು ಪೊಲೀಸರು ಹೇಳಿದರು.

‘ಕೃತ್ಯದ ಬಳಿಕ ತಾಯಿ ಬಳಿಯಿದ್ದ ₹ 800 ಸಮೇತ ಆರೋಪಿ ಪರಾರಿಯಾಗಿದ್ದ. ಸ್ಥಳೀಯರು ನೀಡಿದ್ದ ಮಾಹಿತಿ ಹಾಗೂ ಕೆಲ ಪುರಾವೆಗಳನ್ನು ಆಧರಿಸಿ ಗುರುವಾರ ರಾತ್ರಿಯೇ ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದೂ ತಿಳಿಸಿದರು.

ADVERTISEMENT

ಸೊಪ್ಪು ವ್ಯಾಪಾರ: ‘ಫಾತಿಮಾ ಹಾಗೂ ಸ್ವಾಮಿ, ಮಡಿವಾಳ ಮಾರುಕಟ್ಟೆಯಲ್ಲಿ ಸೊಪ್ಪು ವ್ಯಾಪಾರ ಮಾಡುತ್ತಿದ್ದರು. ಎಂಟನೇ ತರಗತಿಗೆ ಶಾಲೆ ಬಿಟ್ಟಿದ್ದ ದೀಪಕ್ ಸಹ ವ್ಯಾಪಾರಕ್ಕೆ ಸಹಾಯ ಮಾಡುತ್ತಿದ್ದ. ಸೊಪ್ಪು ವ್ಯಾಪಾರವೇ ಕುಟುಂಬಕ್ಕೆ ಆಧಾರವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಮಗನಿಗೆ ಕೆಲ ವರ್ಷಗಳ ಹಿಂದೆಯಷ್ಟೇ ಬೈಕ್ ಕೊಡಿಸಿದ್ದ ತಂದೆ–ತಾಯಿ, ಅದರಲ್ಲೇ ಮಾರುಕಟ್ಟೆಗೆ ಹೋಗಿ ಬರುತ್ತಿದ್ದರು. ಮಗನ ಬಳಿ ಸಾಧಾರಣ ಮೊಬೈಲ್ ಇತ್ತು. ಟಚ್ ಸ್ಕ್ರೀನ್ ಮೊಬೈಲ್ ಕೊಡಿಸುವಂತೆ ಆತ ತಾಯಿಯನ್ನು ಪೀಡಿಸುತ್ತಿದ್ದ.’

‘ಗುರುವಾರ ಮಧ್ಯಾಹ್ನ ತಾಯಿ–ಮಗ ಮಾತ್ರ ಮನೆಯಲ್ಲಿದ್ದರು. ತಾಯಿ ಜೊತೆ ಜಗಳ ಮಾಡಿದ್ದ ಮಗ, ಮೊಬೈಲ್ ಖರೀದಿಸಲು ಹಣ ನೀಡುವಂತೆ ಪಟ್ಟು ಹಿಡಿದಿದ್ದ. ಹಣವಿಲ್ಲವೆಂದು ತಾಯಿ ಹೇಳಿದ್ದರು. ಅಷ್ಟಕ್ಕೆ ಸಿಟ್ಟಾದ ಮಗ, ಸೀರೆಯಿಂದ ಕತ್ತು ಬಿಗಿದು ತಾಯಿಯನ್ನು ಕೊಂದಿದ್ದ. ಸ್ಥಳದಲ್ಲೇ ತಾಯಿ ಮೃತಪಟ್ಟಿದ್ದರು. ಕೃತ್ಯದ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.