ADVERTISEMENT

ಬೆಂಗಳೂರು | ಮಗನ ಕೊಂದು ಆತ್ಮಹತ್ಯೆ ನಾಟಕ: ಸಿಕ್ಕಿಬಿದ್ದ ತಂದೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 14:48 IST
Last Updated 10 ಮಾರ್ಚ್ 2024, 14:48 IST
ಪ್ರಕಾಶ್
ಪ್ರಕಾಶ್   

ಬೆಂಗಳೂರು: ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಯೋಗೇಶ್‌ (21) ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಕೃತ್ಯ ಎಸಗಿದ್ದ ಆರೋಪದಡಿ ತಂದೆ ಪ್ರಕಾಶ್‌ ಅವರನ್ನು ಬಂಧಿಸಿದ್ದಾರೆ.

‘ಬಸವೇಶ್ವರನಗರದ ಯೋಗೇಶ್, ನಗರದ ಕಾಲೇಜೊಂದರಲ್ಲಿ ಬಿಬಿಎ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮಾರ್ಚ್ 6ರಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಕೊಲೆ ಆರೋಪದಡಿ ತಂದೆ ಪ್ರಕಾಶ್‌ನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

ಮದ್ಯದ ವಿಚಾರಕ್ಕೆ ಗಲಾಟೆ: ‘ಆರೋಪಿ ಪ್ರಕಾಶ್, ಪಾನಿಪುರಿ ವ್ಯಾಪಾರಿ. ಪತ್ನಿ ಹಾಗೂ ಒಬ್ಬನೇ ಮಗ ಯೋಗೇಶ್ ಜೊತೆ ವಾಸವಿದ್ದರು. ಯೋಗೇಶ್ ಕೆಲ ದಿನಗಳಿಂದ ಮದ್ಯ ಕುಡಿಯಲಾರಂಭಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ ಪ್ರಕಾಶ್, ಮದ್ಯ ಕುಡಿಯದಂತೆ ಮಗನಿಗೆ ಬುದ್ದಿವಾದ ಹೇಳಿದ್ದರು. ಅಷ್ಟಾದರೂ ಯೋಗೇಶ್ ಮಾತು ಕೇಳಿರಲಿಲ್ಲವೆಂದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಮಾರ್ಚ್ 5ರಂದು ಬೆಳಿಗ್ಗೆ ಮನೆಯಿಂದ ಹೊರ ಹೋಗಿದ್ದ ಯೋಗೇಶ್, ರಾತ್ರಿ ವಾಪಸು ಬಂದಿರಲಿಲ್ಲ. ಮರುದಿನ ಮಾರ್ಚ್ 6ರಂದು ಬೆಳಿಗ್ಗೆ ಮನೆಗೆ ಬಂದಿದ್ದರು. ಪರೀಕ್ಷೆ ಇದ್ದಿದ್ದರಿಂದ ಕಾಲೇಜಿಗೆ ಹೋಗಲು ಸಜ್ಜಾಗಿದ್ದರು. ಆದರೆ, ಮನೆಯಲ್ಲಿ ಪರೀಕ್ಷೆ ಪ್ರವೇಶ ಪತ್ರ ಸಿಕ್ಕಿರಲಿಲ್ಲ. ಅದಕ್ಕಾಗಿ ಹುಡುಕಾಡುತ್ತಿದ್ದರು’ ಎಂದು ಹೇಳಿದರು.

‘ರಾತ್ರಿ ಮದ್ಯ ಕುಡಿದು ಮಲಗಿ, ಈಗ ಮನೆಗೆ ಬಂದಿದ್ದಿಯಾ’ ಎಂದು ತಂದೆ ಪ್ರಶ್ನಿಸಿದ್ದರು. ಇದಾದ ನಂತರ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಕೋಪಗೊಂಡಿದ್ದ ತಂದೆ, ಯೋಗೇಶ್‌ ಕುತ್ತಿಗೆಗೆ ವೇಲ್‌ನಿಂದ ಬಿಗಿದಿದ್ದರು. ಬಳಿಕ, ಯೋಗೇಶ್‌ ಸ್ಥಳದಲ್ಲೇ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದರು.’

‘ತಂದೆಯೇ ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಯೋಗೇಶ್ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು. ಸಾವಿನ ಬಗ್ಗೆ ಠಾಣೆಗೆ ದೂರು ನೀಡಿದ್ದ ತಂದೆ, ‘ನನ್ನ ಮಗ ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದಿದ್ದರು. ಅದೇ ದೂರಿನಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.

‘ಮೃತದೇಹದ ಮರಣೋತ್ತರ ಪರೀಕ್ಷೆ ವರದಿ ಬಂದಾಗ, ಕೊಲೆ ಎಂಬುದು ಗೊತ್ತಾಗಿತ್ತು. ಸ್ಥಳೀಯರೂ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ತಂದೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡರು’ ಎಂದು ಹೇಳಿದರು.

ಯೋಗೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.