ಬೆಂಗಳೂರು: ಹೊಸದಾಗಿ ಸಲೂನ್ ಆ್ಯಂಡ್ ಸ್ಪಾ ಆರಂಭಿಸಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ, ಹಲ್ಲೆ ನಡೆಸಿದ್ದ ಆರೋಪದ ಅಡಿ ಮೂವರನ್ನು ಬಂಧಿಸಿರುವ ಅಮೃತಹಳ್ಳಿ ಠಾಣೆ ಪೊಲೀಸರು, ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.
ನಿಶಾ ಅಲಿಯಾಸ್ ಸ್ಮಿತಾ, ಅವರ ಸ್ನೇಹಿತೆ ಕಾವ್ಯಾ ಹಾಗೂ ಮೊಹಮ್ಮದ್ ಅವರನ್ನು ಬಂಧಿಸಿರುವ ಪೊಲೀಸರು ಆರೋಪಿಗಳ ಹಿನ್ನೆಲೆಯನ್ನು ಪತ್ತೆ ಮಾಡುತ್ತಿದ್ದಾರೆ. ಬಂಧಿತರ ಪೈಕಿ ಕಾವ್ಯಾಗೆ ರೌಡಿಯೊಬ್ಬರ ನಂಟು ಇರುವುದು ತನಿಖೆಯಿಂದ ಪತ್ತೆಯಾಗಿದೆ.
ಕಾವ್ಯಾ ಅವರಿಗೆ ರೌಡಿಶೀಟರ್ ಮುನಿಕೃಷ್ಣ ಅಲಿಯಾಸ್ ‘ಅಮೃತಹಳ್ಳಿ ಕಪ್ಪೆ’ ಎಂಬಾತನ ಪರಿಚಯವಿದೆ ಎಂಬುದು ಗೊತ್ತಾಗಿದೆ. ಆತನನ್ನು ಈ ಹಿಂದೆಯೇ ಗೂಂಡಾ ಕಾಯ್ದೆಯಡಿ ಬಂಧಿಸಿ ಕಲಬುರಗಿ ಜೈಲಿಗೆ ಕಳುಹಿಸಲಾಗಿತ್ತು. ಇದಕ್ಕೂ ಮೊದಲು ಮುನಿಕೃಷ್ಣನನ್ನು ಗಡಿಪಾರು ಮಾಡಲಾಗಿತ್ತು. ಆತನ ಹೆಸರು ಹೇಳಿಕೊಂಡು ಕಾವ್ಯಾ ತಮ್ಮ ಬಡಾವಣೆಯಲ್ಲಿ ಗಲಾಟೆ ಮಾಡುತ್ತಿದ್ದಳು. ಕಾವ್ಯಾ ತಮ್ಮ ಸ್ನೇಹಿತೆ ಸ್ಮಿತಾ ಜೊತೆ ಸ್ಪಾನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದರು.
ಕಾವ್ಯಾ ಸಿಗರೇಟ್ ಸೇದುತ್ತಾ ಸಂಜು ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಸಲೂನಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಕೊಡಿಗೆಹಳ್ಳಿ ಸಮೀಪದಲ್ಲಿ ನಿಶಾ ಅವರು ಸ್ಪಾ ನಡೆಸುತ್ತಿದ್ದಳು. ಅದೇ ಸ್ಪಾದಲ್ಲಿ ಸಂಜು ಅವರು ಕೆಲವು ವರ್ಷಗಳಿಂದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕೆಲಸ ಬಿಟ್ಟು ಸ್ವಂತ ಸ್ಪಾ ಆರಂಭಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ನಿಶಾ ತನ್ನ ಸಹಚರರಾದ ಕಾವ್ಯಾ, ಮೊಹಮ್ಮದ್ ಅವರ ಜೊತೆಗೆ ಸೇರಿಕೊಂಡು ಸಂಜು ಅವರನ್ನು ಅಪಹರಿಸಿ ಹಲ್ಲೆ ನಡೆಸಿದ್ದರು ಎಂಬ ಆರೋಪದ ಮೇರೆಗೆ ಬಂಧಿಸಲಾಗಿದೆ.
ಮೂವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.