ADVERTISEMENT

ದಲಿತ ವಿಮೋಚನೆ ರಾಜಕೀಯ ಪಕ್ಷಗಳ ಗುರಿಯಾಗಲಿ: ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 15:16 IST
Last Updated 8 ಏಪ್ರಿಲ್ 2021, 15:16 IST

ಬೆಂಗಳೂರು: ‘ದಲಿತ ವಿಮೋಚನೆಯು ರಾಜಕೀಯ ಪಕ್ಷಗಳ ಗುರಿ ಮತ್ತು ಸಿದ್ಧಾಂತವಾಗಬೇಕು. ದಲಿತರಿಗೆ ಆರ್ಥಿಕ ಶಕ್ತಿ ತುಂಬುವುದು ಹಾಗೂ ಸಾಮಾಜಿಕ ಸಮಾನತೆ ಕಲ್ಪಿಸುವುದು ಎಲ್ಲಾ ಪಕ್ಷಗಳ ಆದ್ಯತೆಯಾಗಬೇಕು’ ಎಂದು ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಅಭಿಪ್ರಾಯಪಟ್ಟರು.

ಸ್ಪೂರ್ತಿಧಾಮ ಸಂಸ್ಥೆ ಆಯೋಜಿಸಿದ್ದ ‘ಅಧಿಕಾರ ರಾಜಕಾರಣದಲ್ಲಿ ಚಳವಳಿಗಾರರ ಪಾಲ್ಗೊಳ್ಳುವಿಕೆ ಮತ್ತು ಯಶಸ್ಸಿನ ಸಾಧ್ಯತೆಗಳು’ ಕುರಿತ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ದಲಿತ ರಾಜಕಾರಣವು ಬಲಪಂಥೀಯ ರಾಜಕಾರಣದಲ್ಲಿ ಹಂಚಿ ಹೋಗಿದೆ. ದಲಿತರೇ ಒಂದು ಶಕ್ತಿಯಾಗಿ ರಾಜಕಾರಣ ಮಾಡಬೇಕು. ಆಗ ಇತರ ರಾಜಕೀಯ ಪಕ್ಷಗಳಲ್ಲಿರುವ ದಲಿತ ನಾಯಕರ ಶಕ್ತಿ ಕುಗ್ಗುತ್ತದೆ’ ಎಂದರು.

ADVERTISEMENT

‘ತುರ್ತು ಪರಿಸ್ಥಿತಿಯ ನಂತರ ದೇಶದಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಉದಯವಾದವು. ಬಳಿಕ ಸಮ್ಮಿಶ್ರ ಸರ್ಕಾರ ರಾಜಕಾರಣ ಶುರುವಾಯಿತು. ದೇಶದಲ್ಲಿ ಬಿಜೆಪಿ ಆಡಳಿತ ಬಂದ ಮೇಲೆ ಅಧಿಕಾರ ರಾಜಕಾರಣದಲ್ಲಿ ದಲಿತರ ಸ್ಪರ್ಧೆ ಕಷ್ಟ ಎಂಬುದು ಮನದಟ್ಟಾಗಿದೆ’ ಎಂದು ತಿಳಿಸಿದರು.

‘ಅಸ್ಪೃಶ್ಯ ಸಮುದಾಯಗಳು ಒಂದಾಗಬೇಕು. ಜಾತಿಗಳನ್ನು ಸಮೀಕರಿಸುವ ಕೆಲಸ ಮಾಡಬೇಕು. ಆಗ ಮಾತ್ರ ದಲಿತ ಸಮುದಾಯದವರೂ ರಾಜ್ಯ ರಾಜಕಾರಣವನ್ನು ನಿಯಂತ್ರಿಸಲು ಸಾಧ್ಯ. ದಲಿತ ಚಳವಳಿಗಳು ಹಣ ಮತ್ತು ಜಾತಿ ರಾಜಕಾರಣವನ್ನು ಧಿಕ್ಕರಿಸಬೇಕು. ಆಗ ನಮ್ಮವರು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಭಾವಿ ನಾಯಕರಾಗಿ ಬೆಳೆಯಬಹುದು’ ಎಂದು ಹೇಳಿದರು.

ಜೆಡಿಎಸ್‌ ಮುಖಂಡ ವೈ.ಎಸ್‌.ವಿ.ದತ್ತ ‘ಸೈದ್ಧಾಂತಿಕ ಚೌಕಟ್ಟು ಕಟ್ಟಿಕೊಂಡು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬಹುದಾಗಿದ್ದ ಶಕ್ತಿ ದಲಿತ ಚಳವಳಿಗಿತ್ತು. ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್‌ ವಿರೋಧಿ ರಾಜಕಾರಣ ಮಾಡಲು ಎಲ್ಲರು ಒಲವು ತೋರಿದರು. ಹೀಗಾಗಿ ದಲಿತ ಸಂಘಟನೆಗಳು ದಾರಿ ತಪ್ಪಿದವು’ ಎಂದರು.

ಸ್ಫೂರ್ತಿಧಾಮ ಸಂಸ್ಥೆಯ ಮರಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.