ಸಿದ್ದರಾಮಯ್ಯ
ಬೆಂಗಳೂರು: ‘ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ನೀಡುವ ನಗದು ಬಹುಮಾನದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ನಗರದ ಯವನಿಕಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳಿಗೆ ನೇರ ನಗದು ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಚಿನ್ನದ ಪದಕ ವಿಜೇತರಿಗೆ ₹ 7 ಲಕ್ಷ , ಬೆಳ್ಳಿ ಪದಕ ಪಡೆದವರಿಗೆ ₹ 5 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ ₹ 3 ಲಕ್ಷಕ್ಕೆ ಹೆಚ್ಚಿಸಿದ್ದೇವೆ’ ಎಂದು ಅವರು ವಿವರಿಸಿದರು.
‘2015ರಲ್ಲಿ ನಾನೇ ಮುಖ್ಯಮಂತ್ರಿ ಆಗಿದ್ದಾಗ ಬಹುಮಾನದ ಮೊತ್ತವನ್ನು ಚಿನ್ನ, ಬೆಳ್ಳಿ, ಕಂಚಿನ ಪದಕದವರಿಗೆ ಕ್ರಮವಾಗಿ ₹ 5, ₹3 ಹಾಗೂ ₹2 ಲಕ್ಷಕ್ಕೆ ಏರಿಸಿದ್ದೆ. ದಶಕದ ನಂತರ ನಗದು ಬಹುಮಾನದ ಮೊತ್ತ ಹೆಚ್ಚಿಸಿ ಕ್ರೀಡಾಪಟುಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ’ ಎಂದು ಹೇಳಿದರು.
ಕರ್ನಾಟಕದ ಕ್ರೀಡಾಪಟುಗಳು ಒಲಿಂಪಿಕ್ಸ್, ಕಾಮನ್‌ವೆಲ್ತ್ ಹಾಗೂ ಏಷಿಯನ್ ಗೇಮ್ಸ್‌ನಲ್ಲಿ ಹೆಚ್ಚು ಪದಕ ಪಡೆಯಲು ಪೂರಕ ಪ್ರೋತ್ಸಾಹವನ್ನು ಸರ್ಕಾರ ನೀಡುತ್ತಿದೆ. ತರಬೇತಿಗೆ ನೆರವು ನೀಡಲಾಗುತ್ತಿದೆ. ಉದ್ಯೋಗದಲ್ಲೂ ಅವಕಾಶ ಮಾಡಿಕೊಡಲಾಗಿದೆ ಎಂದರು.
ಉತ್ತರಾಖಂಡದಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 34 ಚಿನ್ನ, 18 ಬೆಳ್ಳಿ ಹಾಗೂ 28 ಕಂಚಿನ ಪದಕ ಪಡೆದವರ ಜತೆಗೆ ಇತರೆ ಕೂಟಗಳಲ್ಲಿ ಪದಕ ಗೆದ್ದ 124 ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ನೀಡಲಾಯಿತು.
ಕ್ರೀಡಾಪಟುಗಳಾದ ಸುನೀಲ್, ಮೊಹಮ್ಮದ್ ರಹೀಲ್, ಅಶ್ವಿನಿ ಭಟ್, ಶ್ರೇಯಾ, ಶಿಖಾ ಗೌತಮ್, ಜ್ಯೋತಿಕಾ, ಉನ್ನತಿ ಅಯ್ಯಪ್ಪ, ಪ್ರಜ್ವಲ್‌ದೇವ್, ಜೋನಾಥನ್ ಅವರು ಸಾಂಕೇತಿಕವಾಗಿ ಗೌರವ ಸ್ವೀಕರಿಸಿದರು. ಶಾಸಕ ರಿಜ್ವಾನ್ ಅರ್ಷದ್, ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ಆರ್.ಚೇತನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.