ADVERTISEMENT

ಬೆಂಗಳೂರು: ನಗರದಾದ್ಯಂತ ರಾಮನವಮಿ ಸಡಗರ, ಉತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 15:43 IST
Last Updated 6 ಏಪ್ರಿಲ್ 2025, 15:43 IST
<div class="paragraphs"><p>ರಾಮನವಮಿ ನಿಮಿತ್ತ ಬೆಂಗಳೂರಿನ ಜಯನಗರದ ಜಯರಾಮ ಸೇವಾ ಮಂಡಳಿಯಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಿತು</p></div>

ರಾಮನವಮಿ ನಿಮಿತ್ತ ಬೆಂಗಳೂರಿನ ಜಯನಗರದ ಜಯರಾಮ ಸೇವಾ ಮಂಡಳಿಯಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯಿತು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಭಕ್ತಿ, ಸಡಗರ-ಸಂಭ್ರಮದೊಂದಿಗೆ ನಗರದಲ್ಲಿ ಶ್ರೀರಾಮನವಮಿಯನ್ನು ಭಾನುವಾರ ಆಚರಿಸಲಾಯಿತು.

ADVERTISEMENT

ದೇವಾಲಯಗಳಲ್ಲಿ ಶ್ರೀರಾಮ ಸ್ಮರಣೆಯೊಂದಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಕಾರ್ಯಕ್ರಮಗಳು ನಡೆದವು. ಅಲ್ಲಲ್ಲಿ ನಡೆದ ರಥೋತ್ಸವಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದವು.

ಆಂಜನೇಯ ಹಾಗೂ ಶ್ರೀರಾಮ ದೇವಾಲಯಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ಭಕ್ತರು ಸಾಲಾಗಿ ನಿಂತು ದೇವರ ದರ್ಶನ ಪಡೆದರು. ಭಕ್ತರಿಗೆ ಪಾನಕ, ಕೊಸಂಬರಿ, ಮಜ್ಜಿಗೆ ವಿತರಿಸಲಾಯಿತು.

ಹಲವು ಸಂಘಟನೆಗಳು ನಗರದ ವಿವಿಧೆಡೆ ಆಯೋಜಿಸಿದ್ದ ಶ್ರೀರಾಮನ ಉತ್ಸವ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಬಸವನಗುಡಿ, ಬನಶಂಕರಿ, ಮೈಸೂರು ರಸ್ತೆ ಸೇರಿದಂತೆ ವಿವಿಧೆಡೆ ಶಾಮಿಯಾನಗಳನ್ನು ಹಾಕಿ, ಶ್ರೀರಾಮನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ, ಪಾನಕ, ಕೋಸಂಬರಿ ವಿತರಿಸಲಾಯಿತು.

ಇಂದಿರಾನಗರ, ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ರಥೋತ್ಸವ ನಡೆಯಿತು. ಇಂದಿರಾ ನಗರದಲ್ಲಿ ಪುಷ್ಪಾಲಂಕೃತ ವಾಹನಗಳಲ್ಲಿ ಉತ್ಸವಗಳು ನಡೆದವು. ಸಂಪಂಗಿರಾಮನಗರದಲ್ಲಿ ಶ್ರೀರಾಮದೇವರ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀರಾಮನ ಘೋಷಣೆಯೊಂದಿಗೆ ಹಬ್ಬ ಆಚರಿಸಿದರು. ರಾಮ, ಲಕ್ಷ್ಮಣ, ಸೀತೆ ವೇಷಧಾರಿ ಮಕ್ಕಳು ಗಮನ ಸೆಳೆದರು.

ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ಇಡೀ ದಿನ ವಿಶೇಷ ಪೂಜೆಗಳು ನಡೆದವು. ಭಜನೆ, ರಥೋತ್ಸವವೂ ನಡೆಯಿತು. ಬೆಂಗಳೂರಿನ ರಂಗಪುತ್ಥಳಿ ತಂಡದಿಂದ ‘ಸೀತಾಪಹರಣ’ ತೊಗಲು ಬೊಂಬೆಯಾಟವನ್ನು ಪ್ರದರ್ಶಿಸಲಾಯಿತು.

ವಿಜಯನಗರದ ಮಾರುತಿ ಮಂದಿರದಲ್ಲಿ ಇಡೀ ದಿನ ವಿಶೇಷ ಪೂಜೆಗಳು, ರಥೋತ್ಸವ ನಡೆದವು. ನಗರದ ವಿವಿಧೆಡೆ ರಾಮನ ವೇಷಧಾರಿಗಳು ಸಹ ಪಾನಕ ವಿತರಿಸಿದರು. ರಾಮನಾಮ ಸಂಕೀರ್ತನೆ, ಭಜನೆ ನಡೆಸಿ ತಮ್ಮ ಭಕ್ತಿ ಮೆರೆದರು.

ರಾಮನವಮಿ ಅಂಗವಾಗಿ ಹನುಮಂತನಗರದ ಶ್ರೀ ರಾಮಾಂಜನೇಯ ದೇವಸ್ಥಾನದ ಬಳಿ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ಶ್ರೀಕೃಷ್ಣ ಬಲರಾಮರ ವಿಗ್ರಹಗಳನ್ನು ರಾಮ ಮತ್ತು ಲಕ್ಷ್ಮಣರಂತೆ ಅಲಂಕರಿಸಲಾಗಿತ್ತು. ಮಲ್ಲೇಶ್ವರದ ಕೋದಂಡರಾಮಪುರದ ಕೋದಂಡರಾಮ ಭಜನಾ ಮಂದಿರ, ಯಶವಂತಪುರ ವೃತ್ತದಲ್ಲಿರುವ ದಾರಿ ಆಂಜನೇಯಸ್ವಾಮಿ ದೇವಸ್ಥಾನ, ಮಹಾಲಕ್ಷ್ಮಿ ಬಡಾವಣೆಯ ಆಂಜನೇಯ ದೇವಸ್ಥಾನ, ರಾಗಿಗುಡ್ಡದ ಆಂಜನೇಯ ದೇವಾಲಯ ಸೇರಿದಂತೆ ನಗರದ ವಿವಿಧ ಆಂಜನೇಯ ದೇಗುಲಗಳು ಹಾಗೂ ರಾಮಮಂದಿರಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬೆಳಿಗ್ಗೆಯಿಂದಲೇ ಜರುಗಿದವು. ವಿವಿಧ ದೇವಾಲಯಗಳಲ್ಲಿ ಸಂಗೀತೋತ್ಸವ ಮತ್ತು  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ  ಆಯೋಜಿಸಲಾಗಿತ್ತು.

ರಾಮನವಮಿ ಅಂಗವಾಗಿ ಹನುಮಂತನಗರದ ಶ್ರೀ ರಾಮಾಂಜನೇಯ ದೇವಸ್ಥಾನದ ಬಳಿ ಹೆಣ್ಣುಮಕ್ಕಳು ನೃತ್ಯದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.