ADVERTISEMENT

ಜಿಬಿಎ ಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಶ್ರೀಕಾಂತ್ ನರಸಿಂಹನ್ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 18:37 IST
Last Updated 17 ಜನವರಿ 2026, 18:37 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ‘ಜಿಬಿಎ ಕೇಂದ್ರೀಕೃತ ಆಡಳಿತ ಪದ್ಧತಿಯನ್ನು ಬೆಂಗಳೂರು ನವನಿರ್ಮಾಣ ಪಕ್ಷ(ಬಿಎನ್‌ಪಿ) ಖಂಡಿಸುತ್ತದೆ. ನಗರದ ಸುಸ್ಥಿರ ಅಭಿವೃದ್ಧಿಗೆ ‘ಏರಿಯಾ ಸಭಾ’ಗಳೇ ಅತ್ಯಂತ ಪರಿಣಾಮಕಾರಿ ಚೌಕಟ್ಟು’ ಎಂದು ಪಕ್ಷದ ಸಂಸ್ಥಾಪಕ ಶ್ರೀಕಾಂತ್ ನರಸಿಂಹನ್ ಶುಕ್ರವಾರ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಡಳಿತದಲ್ಲಿ ವಿಕೇಂದ್ರೀಕರಣ ತರುವ ಮೂಲಕ ಬೆಂಗಳೂರು ನಗರವನ್ನು ಅಭಿವೃದ್ಧಿ ಪಥದೆಡೆಗೆ ಕರೆದೊಯ್ಯುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ನಮ್ಮ ಪಕ್ಷ ಪಾಲಿಕೆಗಳಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲಿದೆ’ ಎಂದು ತಿಳಿಸಿದರು.

ADVERTISEMENT

‘ಬಿಎನ್‌ಪಿ ಬೆಂಗಳೂರು ನಗರಕ್ಕಷ್ಟೇ ಸೀಮಿತ. ಪಕ್ಷ ಈಗಾಗಲೇ ಮಿಷನ್ 50 ಅಭಿಯಾನ ಪ್ರಾರಂಭಿಸಿದೆ. ಪಾಲಿಕೆ ಚುನಾವಣೆಯಲ್ಲಿ 100 ವಾರ್ಡ್‌ಗಳಿಂದ ಸ್ಪರ್ಧಿಸಿ, ಕನಿಷ್ಠ 50 ವಾರ್ಡ್‌ಗಳಲ್ಲಿ ಜಯಗಳಿಸುವ ಗುರಿ ಮತ್ತು ವಿಶ್ವಾಸ ಇದೆ’ ಎಂದು ತಿಳಿಸಿದರು.

‘ಪೂರ್ವ ಮತ್ತು ದಕ್ಷಿಣ ಪಾಲಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಎನ್‌ಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು. ಭವಿಷ್ಯದಲ್ಲಿ ಐದೂ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಕೇವಲ ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ನಮ್ಮ ಪಕ್ಷ ಕಾರ್ಯನಿರ್ವಹಿಸುವುದಿಲ್ಲ. ಕೋವಿಡ್ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ನಮ್ಮ ಕೆಲಸಗಳೇ ಪಕ್ಷದ ಪ್ರಣಾಳಿಕೆ, ಅವು ಮತವಾಗಿ ಪರಿವರ್ತನೆಯಾಗಲಿವೆ’ ಎಂದು ನುಡಿದರು.

ಬಿಎನ್‌ಪಿ ಯುವ ಘಟಕದ ಮುಖಂಡ ರಿಶ್ವಾನ್‌ಜಾಸ್ ರಾಘವನ್ ಮಾತನಾಡಿ, ‘ನಗರದ ಸಮಸ್ಯೆಗಳಿಗೆ ಹೊಸ ಕಾನೂನುಗಳು ಪರಿಹಾರವಲ್ಲ. ಬದಲಿಗೆ ಯುವ ನಾಯಕರ ಅವಶ್ಯವಿದೆ. ಇಲ್ಲಿ ಪ್ರತಿ ಯೋಜನೆಗೂ ಕಟ್ಟುನಿಟ್ಟಾದ ಗಡುವು ಇರಲಿದ್ದು, ಪ್ರತಿ ಅಧಿಕಾರಿಯೂ ಹೊಣೆಗಾರರು’ ಎಂದರು.

ಪಕ್ಷದ ಆಡಳಿತ ಮಂಡಳಿ ಮುಖ್ಯಸ್ಥೆ ಲಲಿತಾಂಬ ಬಿ.ವಿ. ಮಾತನಾಡಿ, ‘ನಾವು ಸಾಂಪ್ರದಾಯಿಕ ರಾಜಕೀಯ ಸೂತ್ರ ಪಾಲಿಸುವುದಿಲ್ಲ. ನಮ್ಮ ಮನೆಯಂತಿರುವ ಬೆಂಗಳೂರು ನಗರವನ್ನು ವೃತ್ತಿಪರ ಶೈಲಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದೇವೆ’ ಎಂದು ತಿಳಿಸಿದರು.

ಈ ವೇಳೆ ವಿವಿಧ ವಾರ್ಡ್‌ಗಳಿಂದ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳನ್ನು ಪರಿಚಯಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಬಿಎನ್‌ಪಿ ಉತ್ತರಹಳ್ಳಿ ವಾರ್ಡ್ ಮುಖ್ಯಸ್ಥ ನಿಶ್ಚಿತ್ ಅಶೋಕ್ ಕುಮಾರ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.