ADVERTISEMENT

ಸಿಎಂ ವಿದಾಯದ ಭಾಷಣ ಮಾಡಲಿ: ಕೋಟ ಶ್ರೀನಿವಾಸ ಪೂಜಾರಿ ಲೇವಡಿ

ಉಡುಪಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 20:15 IST
Last Updated 21 ಜುಲೈ 2019, 20:15 IST
ಕೋಟ ಶ್ರೀನಿವಾಸ ಪೂಜಾರಿ
ಕೋಟ ಶ್ರೀನಿವಾಸ ಪೂಜಾರಿ   

ಉಡುಪಿ: ರಾಜ್ಯ ಮೈತ್ರಿ ಸರ್ಕಾರ ಬಹುತೇಕ ಬಹುಮತ ಕಳೆದುಕೊಂಡಿದೆ. ಇದು ಸರ್ಕಾರ ನಡೆಸುವವರಿಗೂ ಅರ್ಥವಾಗಿದೆ. ಹಾಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಸೋಮವಾರವೇ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.

ಭಾನುವಾರ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಒಟ್ಟಾರೆ ವ್ಯವಸ್ಥೆ ದೃಷ್ಟಿಯಿಂದ ಮುಖ್ಯಮಂತ್ರಿಗಳು ನಾಳೆ ವಿದಾಯದ ಭಾಷಣ ಮಾಡುವುದು ಒಳ್ಳೆಯದು’ ಎಂದರು.

‘ಸ್ವೀಕರ್‌ ರಮೇಶ್‌ ಕುಮಾರ್‌ ಆದರ್ಶ ರಾಜಕಾರಣ, ರಾಜಧರ್ಮವನ್ನು ನಮಗೆಲ್ಲಾ ಹೇಳಿಕೊಟ್ಟವರು. ನಾಳೆ ಎಲ್ಲವನ್ನೂ ಮುಗಿಸುತ್ತೇನೆ ಎಂದು ಅವರೇ ಭರವಸೆ ನೀಡಿದ್ದಾರೆ. ಹಾಗಾಗಿ ಸ್ಪೀಕರ್‌ ರಾಜಧರ್ಮವನ್ನು ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ADVERTISEMENT

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಅತೃಪ್ತ ಶಾಸಕರನ್ನು ಸೆಳೆಯುವ ನಿಟ್ಟಿನಿಂದ ವಿಳಂಬ ನೀತಿ ಅನುಸರಿಸಲು ಮುಂದಾಗಿದ್ದರು. ಆದರೆ ಅತೃಪ್ತರು ಗಟ್ಟಿಯಾಗಿ ನಿಂತುಕೊಂಡಿದ್ದಾರೆ. ಸರ್ಕಾರದ ಒಟ್ಟು ನೀತಿಯನ್ನು ವಿರೋಧಿಸಿದ್ದಾರೆ. ಅಭಿವೃದ್ಧಿ ಕಾರ್ಯಗಳು ಆಗದಿರುವ ಬಗ್ಗೆ ರೋಸಿ ಹೋಗಿದ್ದಾರೆ. ಇದೇ ಸರ್ಕಾರ ಮುಂದುವರಿದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಅಲ್ಲದೆ, ಜನರು ವಿಶ್ವಾಸ ಕಳೆದುಕೊಳ್ಳುವ ಮೊದಲು ಸರ್ಕಾರದ ಮೇಲೆ ತಾವು ವಿಶ್ವಾಸ ಕಳೆದುಕೊಂಡಿದ್ದೇವೆ ಎನ್ನುವುದನ್ನು ಪ್ರಚಾರ ಮಾಡಿದ್ದಾರೆ ಎಂದರು.

ಸಚಿವ ರೇವಣ್ಣ ಮಾಡುವುದೆಲ್ಲಾ ಮಾಡಿದ್ದಾರೆ. ಇದೀಗ ಸರ್ಕಾರವನ್ನು ದೇವರು ರಕ್ಷಿಸಬೇಕು ಎಂದೆಲ್ಲ ಹೇಳಿದರೆ ಆಗಲ್ಲ. ಸರ್ಕಾರದಲ್ಲಿ ದೂರುಗಳೆಲ್ಲಾ ಇರುವುದು ರೇವಣ್ಣ ಮೇಲೆ. ಶಾಸಕರ ಅತೃಪ್ತಿಗೆ, ಸರ್ಕಾರ ಹೋಗುವುದಕ್ಕೆ ರೇವಣ್ಣ ಕಾರಣ. ಸರ್ಕಾರದ ಪ್ರಭಾವಿ ಸಚಿವನಾಗಿ ಎಲ್ಲಾ ತಪ್ಪುಗಳನ್ನು ಅವರು ಮಾಡಿದ್ದಾರೆ. ಈಗ ದೇವರ ದರ್ಶನ ಮಾಡಿದರೆ ಪ್ರಯೋಜನವಿಲ್ಲ. ಎಡ, ಬಲಗೈಯಲ್ಲಿ ನಾಲ್ಕು ನಾಲ್ಕು ಲಿಂಬೆಹಣ್ಣು ಹಿಡಿದುಕೊಂಡು ಹೋದರೂ ದೇವರು ರಕ್ಷಣೆ ಮಾಡಲ್ಲ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.