ADVERTISEMENT

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಇನ್ನು ವಿದ್ಯುನ್ಮಾನ ಪ್ರಶ್ನೆ ಬ್ಯಾಂಕ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:09 IST
Last Updated 16 ಜುಲೈ 2019, 19:09 IST
   

ಬೆಂಗಳೂರು: ಮುಂದಿನ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗಾಗಿ ವಿದ್ಯುನ್ಮಾನ ಪ್ರಶ್ನೆ ಬ್ಯಾಂಕ್‌ (ಇ ಕ್ವೆಶ್ಚನ್‌ ಬ್ಯಾಂಕ್‌) ಆರಂಭಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (ಕೆಎಸ್‌ಇಇಬಿ) ಮುಂದಾಗಿದೆ.

ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಒಂದೆಡೆ ಸಂಗ್ರಹಿಸಿ ಇಟ್ಟು ವಿದ್ಯುನ್ಮಾನ ಪ್ರಶ್ನೆ ಬ್ಯಾಂಕ್‌ ತಯಾರಿಸಲಾಗುವುದು. ಇದಕ್ಕಾಗಿ ಮಂಡಳಿ ವಿಷಯ ಪರಿಣಿತರ ನೆರವನ್ನೂ ಪಡೆಯಲಿದೆ.

‘ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ವಿದ್ಯಾರ್ಥಿಗಳು ಹಳೆಯ ಪ್ರಶ್ನೆಪತ್ರಿಕೆಗಳ ಮಾದರಿಗಳನ್ನು ಒಳಗೊಂಡ ಪುಸ್ತಕ ಖರೀದಿಗಾಗಿ ಮಾರುಕಟ್ಟೆಗೆ ತೆರಳುತ್ತಾರೆ. ಇದನ್ನು ತಪ್ಪಿಸಿ, ವಿದ್ಯಾರ್ಥಿಗಳು ಒಂದೆಡೆಯಲ್ಲೇ ಹಲವು ಪ್ರಶ್ನೆಪತ್ರಿಕೆಗಳನ್ನು ನೋಡುವುದಕ್ಕೆ ಅನುಕೂಲ ಮಾಡಿಕೊಡುವ ಈ ಸೌಲಭ್ಯವನ್ನು ಮಂಡಳಿ ಒದಗಿಸುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.‌

ADVERTISEMENT

‘ಈ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಹಿಂದಿನ ಹಲವು ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಿ ಅವುಗಳನ್ನು ಮಂಡಳಿಯ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. ವೆಬ್‌ಸೈಟ್‌ನಲ್ಲಿ ಲಿಂಕ್‌ ಇರಲಿದ್ದು, ಪ್ರಶ್ನೆ ‌ಬ್ಯಾಂಕ್‌ ಅನ್ನು ಸುಲಭವಾಗಿ ತೆರೆದು ನೋಡಬಹುದು’ ಎಂದು ಅವರು ಹೇಳಿದರು.

ಪೂರ್ವಸಿದ್ಧತಾ ಪರೀಕ್ಷೆಗಳು ಮುಗಿದ ನಂತರ ಈ ಪ್ರಶ್ನೆ ಬ್ಯಾಂಕ್‌ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಈ ಹಿಂದಿನ ವರ್ಷಗಳಲ್ಲಿ ಸಿದ್ಧಪಡಿಸಲಾದ ಆದರೆ ಪರೀಕ್ಷೆಗೆ ಬಾರದ ಪ್ರಶ್ನೆಪತ್ರಿಕೆಗಳನ್ನು ಸಹ ಇಲ್ಲಿ ಅಪ್‌ಲೋಡ್‌ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.