ADVERTISEMENT

ಎಸ್‌ಎಸ್ಎಲ್‌ಸಿ ಪೂರಕ ಪರೀಕ್ಷೆ | ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಪೊಲೀಸರ ನೆರವು

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 19:58 IST
Last Updated 12 ಜೂನ್ 2022, 19:58 IST
ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳ ಜೊತೆ ಬಂಡೆಪಾಳ್ಯ ಪೊಲೀಸರು
ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳ ಜೊತೆ ಬಂಡೆಪಾಳ್ಯ ಪೊಲೀಸರು   

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುತ್ತಿರುವ ಬಂಡೇಪಾಳ್ಯ ಠಾಣೆಯ ಪೊಲೀಸರು, ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಗತ್ಯ ತರಬೇತಿ ಕೊಡಿಸುತ್ತಿದ್ದಾರೆ.

ಠಾಣೆ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದ 100ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇಂಥ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ, ಪೂರಕ ಪರೀಕ್ಷೆಗೆ ಸಜ್ಜುಗೊಳಿಸಲು ಪೊಲೀಸರು ಪಣ ತೊಟ್ಟಿದ್ದಾರೆ.

‘ದರ್ಪಣ’ ಹಾಗೂ ‘ರಾಜ ಲಾಂಛನ’ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ವಿನೂತನ ಯೋಜನೆ ರೂಪಿಸಿ ಪರಿಣತ ಶಿಕ್ಷಕರಿಂದ ತರಬೇತಿ ಕೊಡಿಸಲು 20 ದಿನಗಳ ವಿಶೇಷ ಶಿಬಿರ ಆಯೋಜಿಸಿದ್ದಾರೆ.

ADVERTISEMENT

ಜೂನ್ 5ರಂದು ಆರಂಭಗೊಂಡ ಶಿಬಿರಕ್ಕೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ, ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ಚಾಲನೆ ನೀಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪೊಲೀಸರು, ರೂಪಿಸಿರುವ ಯೋಜನೆ ಬಗ್ಗೆ ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.

'ಠಾಣೆ ವ್ಯಾಪ್ತಿಯಲ್ಲಿ ಬಡವರು, ಆರ್ಥಿಕವಾಗಿ ಹಿಂದುಳಿದವರು, ಕಾರ್ಮಿಕರು ವಾಸವಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಅವರ ಕೆಲ ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಇಂಥ ಮಕ್ಕಳಿಗಾಗಿ ಕಮಿಷನರ್ ಹಾಗೂ ಡಿಸಿಪಿ ಅವರ ಮಾರ್ಗದರ್ಶನದಲ್ಲಿ ಈ ತರಬೇತಿ ಯೋಜನೆ ರೂಪಿಸಲಾಗಿದೆ’ ಎಂದು ಇನ್‌ಸ್ಪೆಕ್ಟರ್ ರಾಜೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೂನ್ 27ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗಳು ಆರಂಭವಾಗಲಿವೆ. 20 ದಿನ ಕಾಲ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳ ಬಗ್ಗೆ ಶಿಕ್ಷಕರು ಪಾಠ ಮಾಡುವರು. ಪ್ರತಿಯೊಬ್ಬ ವಿದ್ಯಾರ್ಥಿ ಬಗ್ಗೆ ವೈಯಕ್ತಿಕ ಕಾಳಜಿ ವಹಿಸಲಿದ್ದಾರೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.