ADVERTISEMENT

ನಷ್ಟದಲ್ಲಿ ಸಕ್ಕರೆ ಕಾರ್ಖಾನೆ; ಅ.15ರ ಬಳಿಕ ಸಭೆ: ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 22:13 IST
Last Updated 23 ಸೆಪ್ಟೆಂಬರ್ 2021, 22:13 IST
ಸೋಮಶೇಖರ್
ಸೋಮಶೇಖರ್   

ಬೆಂಗಳೂರು: 'ಇಂಧನ, ಸಕ್ಕರೆ ಸಚಿವರನ್ನೂ ಸೇರಿಸಿಕೊಂಡು ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಮತ್ತು ಅಧಿಕಾರಿಗಳ ಸಭೆಯನ್ನು ಅ. 15ರ ನಂತರ ನಡೆಸಿ, ಸಕ್ಕರೆ ಕಾರ್ಖಾನೆಗಳು, ಕಬ್ಬು ಬೆಳೆಗಾರರು ಹಾಗೂ ಸಹಕಾರಿ ಬ್ಯಾಂಕ್‌ಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು' ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರು ವಿಷಯ ಪ್ರಸ್ತಾಪಿಸಿ, 'ಉತ್ತರ ಕರ್ನಾಟಕ ಭಾಗದ ದುಸ್ಥಿತಿಯಲ್ಲಿರುವ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

'ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು ನೀಡಬೇಕು. ಈ ಕಾರ್ಖಾನೆಗಳಿಗೆ ಆರ್ಥಿಕ ಸಹಕಾರ ನೀಡುತ್ತಿದ್ದ ಸಹಕಾರಿ ಬ್ಯಾಂಕುಗಳು ಕೂಡ ಇಂದು ದುಸ್ಥಿತಿಯಲ್ಲಿವೆ. ಅವುಗಳನ್ನು ಸುಸ್ಥಿತಿಗೆ ತರುವ ಸಂಬಂಧ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಬೇಕು' ಎಂದು ಒತ್ತಾಯಿಸಿದರು.

ADVERTISEMENT

'87 ಸಕ್ಕರೆ ಕಾರ್ಖಾನೆಗಳೂ ರಾಜ್ಯದಲ್ಲಿದ್ದು, 22 ಮುಚ್ಚಿವೆ. ಉತ್ತರ ಕರ್ನಾಟಕದಲ್ಲಿ 33 ಸಕ್ಕರೆ ಕಾರ್ಖಾನೆಗಳಿವೆ. ಇಲ್ಲಿಯೇ ಶೇ 75ರಷ್ಟು ಕಾರ್ಖಾನೆ ಇದ್ದು ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಹೆಚ್ಚು ಕಾರ್ಖಾನೆಗಳಿವೆ. ಶೇ 80ರಷ್ಟು ಸಕ್ಕರೆ ಉತ್ಪಾದನೆ ಆಗುತ್ತದೆ. ಇಲ್ಲಿನ ಕಾರ್ಖಾನೆಗಳಲ್ಲಿ ಬರುವ ಆದಾಯ ಬ್ಯಾಂಕ್ ಸಾಲದ ಬಡ್ಡಿ ಕಟ್ಟಲು ವ್ಯಯ ಆಗುತ್ತಿದೆ. ಸರ್ಕಾರ ಸಹಾಯಕ್ಕೆ ಧಾವಿಸಬೇಕು' ಎಂದರು.

ಉತ್ತರ ನೀಡಿದ ಸಚಿವರು, 'ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲೇ ರಾಜ್ಯ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಸಹಕಾರಿ ಸಂಘದಿಂದ ಸಾಲ ಪಡೆದವರು ತೀರಿಸಿಲ್ಲ. 34 ಸಕ್ಕರೆ ಕಾರ್ಖಾನೆಗಳಲ್ಲಿ ಅರ್ಧದಷ್ಟು ಮಂದಿ ಮಾತ್ರ ಸರಿಯಾಗಿ ನಡೆದುಕೊಳ್ಳುತ್ತಾರೆ. ಉಳಿದವರಲ್ಲಿ ಕೆಲವರು ಬಡ್ಡಿ ಕಟ್ಟುತ್ತಾರೆ. ಕೆಲವು ಶಾಸಕರು ‌ಕಾರ್ಖಾನೆ ಹೊಂದಿದ್ದು ಅವರು ಕೂಡಾ ಇದುವರೆಗೂ ಒಂದು ರೂಪಾಯಿ ಭರಿಸಿಲ್ಲ. ಸಾಲ ಪಡೆದು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಕ್ಕರೆ ಲಾಬಿ ರಾಜ್ಯದಲ್ಲಿ ಪ್ರಬಲವಾಗಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.