ಬೆಂಗಳೂರು: ಸೂರ್ಯ ನಗರ ನಾಲ್ಕನೇ ಹಂತದಲ್ಲಿ 100 ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ಹಾಗೂ ಮಾದರಿ ಶಾಲೆ ನಿರ್ಮಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ಸಂಸದ ಡಿ. ಕೆ. ಸುರೇಶ್ ಹಾಗೂ ಶಾಸಕ ಶಿವಣ್ಣ ಅವರೊಂದಿಗೆ ಸೂರ್ಯ ನಗರ ನಾಲ್ಕನೇ ಹಂತದ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಅವರು ಮಾತನಾಡಿದರು.
ಕ್ರಿಕೆಟ್, ಫುಟ್ಬಾಲ್, ಹಾಕಿ ಸೇರಿದಂತೆ ಎಲ್ಲ ಕ್ರೀಡೆಗೆ ಅವಕಾಶವಿರುವ ಕ್ರೀಡಾಂಗಣ ಹಾಗೂ 10 ಎಕರೆ ಪ್ರದೇಶದಲ್ಲಿ ಮಾದರಿ ಶಾಲೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಐದು ಗ್ರಾಮಗಳ 1938 ಎಕರೆ ಪ್ರದೇಶದಲ್ಲಿ 587 ಎಕರೆ ಸರ್ಕಾರಿ ಗೋಮಾಳವೂ ಸೇರಿದ ಪ್ರದೇಶದಲ್ಲಿ ಸೂರ್ಯನಗರ ನಾಲ್ಕನೇ ಹಂತ ಬಡಾವಣೆ ನಿರ್ಮಾಣವಾಗುತ್ತಿದೆ. ಜಮೀನು ಮಾಲೀಕರು ಹಾಗೂ ಗೃಹ ಮಂಡಳಿ 50:50 ಹಂಚಿಕೆ ಆಧಾರದಲ್ಲಿ ರಚನೆ ಮಾಡಲಾಗುತ್ತಿದೆ. 20 ಸಾವಿರ ನಿವೇಶನ ರಚನೆ ಆಗಲಿದ್ದು, ಜಮೀನು ಮಾಲೀಕರಿಗೆ 10 ಸಾವಿರ ನಿವೇಶನ ನೀಡಲಾಗುತ್ತದೆ ಎಂದರು.
ತ್ಯಾಜ್ಯ ವಿಲೇವಾರಿ ಘಟಕ, ಶಾಲೆ, ಚಿತಾಗಾರ, ಕ್ಲಬ್ ಗೆ ಜಾಗ ಒದಗಿಸಲು ಸ್ಥಳೀಯರು ಸಚಿವರಿಗೆ ಮನವಿ ಸಲ್ಲಿಸಿದರು.
ಹಂಚಿಕೆಗೆ ಕ್ರಮ: ಇಂಡ್ಲ ವಾಡು ಬಳಿ ರಾಜೀವ್ ಗಾಂಧಿ ವಸತಿ ನಿಗಮದಿಂದ 2387 ಒಂದು ಬಿಎಚ್‌ಕೆ, 653 ಎರಡು ಬಿಎಚ್‌ಕೆ ವಸತಿ ಸಂಕೀರ್ಣ ಕಾಮಗಾರಿಯನ್ನು ಸಚಿವ ಜಮೀರ್ ಅಹಮದ್ ಖಾನ್ ಪರಿಶೀಲಿಸಿದರು. ಕಾಲಮಿತಿಯಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.