ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ: ಅಧಿಕಾರಿಗಳ ವಿಚಾರಣೆ ಇಂದು?

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 0:01 IST
Last Updated 23 ಜೂನ್ 2025, 0:01 IST
<div class="paragraphs"><p>ಪಿಟಿಐ</p></div>
   

ಪಿಟಿಐ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ತನಿಖೆ ನಡೆಸುತ್ತಿರುವ ವಿಚಾರಣಾಧಿಕಾರಿಯಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಎದುರು ಅಮಾನತುಗೊಂಡಿರುವ ಅಧಿಕಾರಿಗಳು ಸೋಮವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ಕಬ್ಬನ್ ಪಾರ್ಕ್ ಠಾಣೆ ಉಪವಿಭಾಗದ ಎಸಿಪಿಯಾಗಿದ್ದ ಬಾಲಕೃಷ್ಣ ಈಗಾಗಲೇ ವಿಚಾರಣೆಗೆ ಹಾಜರಾಗಿ, ಹೇಳಿಕೆ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಶೇಖರ್ ಟೆಕ್ಕಣ್ಣನವರ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್‌ಸ್ಪೆಕ್ಟರ್ ಗಿರೀಶ್ ಅವರು ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್​ಸಿಎ) ಮಾಜಿ ಕಾರ್ಯದರ್ಶಿ ಶಂಕರ್ ಹಾಗೂ ಮಾಜಿ ಖಜಾಂಚಿ ಇ.ಎಸ್.ಜೈರಾಮ್ ಅವರು ತನಿಖಾಧಿಕಾರಿ ಜಿ.ಜಗದೀಶ್ ಎದುರು ಶನಿವಾರ ಹಾಜರಾಗಿ, ಸುಮಾರು ಮೂರು ತಾಸು ವಿಚಾರಣೆ ಎದುರಿಸಿದರು.

ಅಹಮದಾಬಾದ್​ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ಆರಂಭಕ್ಕೆ ಮುನ್ನವೇ ವಿಜಯೋತ್ಸವ ಆಚರಣೆಗಾಗಿ ಪೂರ್ವಾನುಮತಿ ಪಡೆಯಲು ಸೂಚಿಸಿದ್ದು ಯಾರು? ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗರಿಷ್ಠ 35 ಸಾವಿರ ಆಸನಗಳಿದ್ದರೂ ಲಕ್ಷಾಂತರ ಮಂದಿ ಅಭಿಮಾನಿಗಳು ಬರುವ ಬಗ್ಗೆ ನಿರೀಕ್ಷೆ ಹೊಂದಿರಲಿಲ್ಲವೇ? ಕಬ್ಬನ್ ಪಾರ್ಕ್ ಪೊಲೀಸರು ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡದಿದ್ದರೂ ಸಂಭ್ರಮಾಚರಣೆಗೆ ಹೇಳಿದವರು ಯಾರು ಎಂಬುದು ಸೇರಿದಂತೆ ಹತ್ತಾರು ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಕೇಳಿದ್ಧಾರೆ ಎಂದು ಮೂಲಗಳು ತಿಳಿಸಿವೆ.

ದುರಂತದಲ್ಲಿ 11 ಮಂದಿ ಸಾವು ಹಾಗೂ 50ಕ್ಕಿಂತ ಹೆಚ್ಚು ಮಂದಿ ಗಾಯಗೊಂಡ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಶಂಕರ್ ಹಾಗೂ ಜೈರಾಮ್ ಈಗಾಗಲೇ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಆರ್​​ಸಿಬಿ ತಂಡದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಹೊರತುಪಡಿಸಿ ಡಿಎನ್​ಎ ಇವೆಂಟ್ ಮ್ಯಾನೇಜ್​ಮೆಂಟ್ ಸಿಬ್ಬಂದಿ ಸುನೀಲ್ ಮ್ಯಾಥ್ಯು, ಕಿರಣ್ ಕುಮಾರ್ ಹಾಗೂ ಶಮಂತ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.

ಮೊದಲ ಬಾರಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಿದಾಗ ಲಿಖಿತ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಲಿಖಿತ ಹೇಳಿಕೆಗೆ ಪೂರಕವಾಗಿ ಅಗತ್ಯ ದಾಖಲಾತಿ ನೀಡುವಂತೆ ಹೇಳಲಾಗಿತ್ತು. ಅದರಂತೆ ಶನಿವಾರ ಹಾಜರಾಗಿ ಕ್ರೀಡಾಂಗಣದ ಭದ್ರತೆಗಿದ್ದ ಸಿಬ್ಬಂದಿಯ ವಿವರ, ವಿಜಯೋತ್ಸವಕ್ಕೆ ಕೈಗೊಂಡಿದ್ದ ಮುಂಜಾಗ್ರತಾ ಕ್ರಮಗಳ ಕುರಿತಂತೆ ದಾಖಲಾತಿಗಳನ್ನು ಪಡೆಯಲಾಗಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.