ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಸಂಡೂರಿನ ದೇವದಾರಿ ಬ್ಲಾಕ್‌ನಲ್ಲಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್) ಗಣಿಗಾರಿಕೆ ನಡೆಸಲು ಒಪ್ಪಿಗೆ ನೀಡಿರುವುದು ರಾಜ್ಯ ಸರ್ಕಾರ. ಅದು ತಮ್ಮ ತೀರ್ಮಾನ ಅಲ್ಲ ಎಂದು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಕೆಐಒಸಿಎಲ್ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ದೇವದಾರಿ ಬ್ಲಾಕ್‌ನ 992 ಎಕರೆ 31 ಗುಂಟೆ ವಿಸ್ತೀರ್ಣದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದ ರಾಜ್ಯ ಸರ್ಕಾರ, ಪುನರ್ ಅರಣ್ಯೀಕರಣ ಚಟುವಟಿಕೆ ನಡೆಸಲು ಕಂಪನಿಯಿಂದ ₹194 ಕೋಟಿ ಪಡೆದಿದೆ. ಗಣಿಗಾರಿಕೆಗೆ ಅರಣ್ಯ ಇಲಾಖೆಯ ವಿರೋಧವಿದ್ದರೆ ಕೆಐಒಸಿಎಲ್‌ನಿಂದ ರಾಜ್ಯ ಸರ್ಕಾರ ಹಣ ಪಡೆದಿದ್ದು ಏಕೆ’ ಎಂದು ಪ್ರಶ್ನಿಸಿದರು.
‘ಗಣಿಗಾರಿಕೆಗೆ ಅನುಮತಿ ನೀಡುವುದಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳೂ 2023ರಲ್ಲೇ ಪೂರ್ಣಗೊಂಡಿದ್ದವು. ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿದ ಬಳಿಕ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಅಂತಿಮ ಅನುಮೋದನೆ ನೀಡಿತ್ತು’ ಎಂದರು.
ದೇವದಾರಿ ಬ್ಲಾಕ್‌ನ ಗಣಿಗಾರಿಕೆಯಿಂದ ಕೆಐಒಸಿಎಲ್‌ಗೆ ಅನುಕೂಲ ಆಗುವುದರ ಜತೆಯಲ್ಲೇ ಅರಣ್ಯೀಕರಣಕ್ಕೂ ಸಹಾಯವಾಗುತ್ತದೆ. 1976ರಲ್ಲಿ ಆರಂಭವಾದ ಕಂಪನಿ 2005ರವರೆಗೂ ಲಾಭದಾಯಕ ಸ್ಥಿತಿಯಲ್ಲೇ ಇತ್ತು. 1,600ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿತ್ತು. ಗಣಿಗಾರಿಕೆ ಚಟುವಟಿಕೆ ಸ್ಥಗಿತಗೊಂಡ ಬಳಿಕ ಹಲವು ಸವಾಲುಗಳ ಮಧ್ಯೆಯೂ 595 ನೌಕರರು ಉಳಿದಿದ್ದಾರೆ ಎಂದು ಹೇಳಿದರು.
‘ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ನಾನು ಅನುಮತಿ ನೀಡಿಲ್ಲ ಎಂಬುದನ್ನು ಸಂಡೂರಿನ ಜನರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ಕೆಐಒಸಿಎಲ್ 808 ಹೆಕ್ಟೇರ್ ವಿಸ್ತೀರ್ಣದಲ್ಲಿ ಅರಣ್ಯೀಕರಣ ಚಟುವಟಿಕೆ ನಡೆಸಲಿದೆ. ಈ ಯೋಜನೆಯು ಕೆಐಒಸಿಎಲ್ ಅನ್ನು ಲಾಭದ ಹಳಿಗೆ ತರುವುದಕ್ಕೆ ಸೀಮಿತವಾಗಿಲ್ಲ. ಅದರ ಜತೆಯಲ್ಲೇ ಅರಣ್ಯೀಕರಣದ ಮೂಲಕ ಜೀವವೈವಿಧ್ಯ ಸಂರಕ್ಷಣೆಯೂ ಸೇರಿದೆ’ ಎಂದರು.
ಅಧಿಕಾರಿಗಳ ಜತೆ ಸಭೆ ನಡೆಸಿದ ಕುಮಾರಸ್ವಾಮಿ ಕೆಐಒಸಿಎಲ್ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಕಂಪನಿಯ ಅಧ್ಯಕ್ಷ ಗಂಟಿ ವೆಂಕಟ ಕಿರಣ್ ಅವರು ಉತ್ಪಾದನಾ ಚಟುವಟಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಕಾರ್ಖಾನೆ ಪುನಶ್ಚೇತನದ ಬಗ್ಗೆಯೂ ಅಧಿಕಾರಿಗಳ ಜತೆ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.