ADVERTISEMENT

ವೈದ್ಯೆಯಿಂದಲೇ ಕಾಂಡಕೋಶ ದಾನ

ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮುಂಬೈನ ವಂಶಿಕಾಗೆ ಮರುಜನ್ಮ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 19:16 IST
Last Updated 30 ನವೆಂಬರ್ 2018, 19:16 IST
ಡಾ. ಶ್ರುತಿ ಕಕ್ಕರ್ ಅವರಿಗೆ ಮುತ್ತಿಟ್ಟ ವಂಶಿಕಾ –ಪ್ರಜಾವಾಣಿ ಚಿತ್ರ/ರಂಜು ಪಿ.
ಡಾ. ಶ್ರುತಿ ಕಕ್ಕರ್ ಅವರಿಗೆ ಮುತ್ತಿಟ್ಟ ವಂಶಿಕಾ –ಪ್ರಜಾವಾಣಿ ಚಿತ್ರ/ರಂಜು ಪಿ.   

ಬೆಂಗಳೂರು: ಅವರು ವೃತ್ತಿಯಲ್ಲಿ ವೈದ್ಯೆ. ಕ್ಯಾನ್ಸರ್‌ಗೆ ತುತ್ತಾಗಿದ್ದ ರೋಗಿಯ ಯಾತನೆಗೆ ಮರುಕಪಟ್ಟು, ಎರಡು ತಿಂಗಳು ಕಠಿಣ ಡಯಟ್‌ ಪೂರ್ಣಗೊಳಿಸಿ ತಮ್ಮ ರಕ್ತದ ಕಾಂಡಕೋಶ ದಾನ ಮಾಡಿ ಪ್ರಾಣ ಉಳಿಸಿದರು.

ಬದುಕಿದ್ದ ರೋಗಿ ಹಾಗೂ ಆ ವೈದ್ಯೆಯನ್ನು ಮುಖಾಮುಖಿಯಾಗಿಸಿದ ಧಾತ್ರಿ ಸಂಸ್ಥೆಯ ಕಾರ್ಯಕ್ರಮ, ಅವರಿಬ್ಬರ ಕಣ್ಣಲ್ಲಿ ಆನಂದ ಬಾಷ್ಪ ತರಿಸಿತು. ಆ ವೈದ್ಯೆಯೇ ಶ್ರುತಿ ಕಕ್ಕರ್‌. ದಾನ ಪಡೆದ ಮಗು ಮುಂಬೈನ ವಂಶಿಕಾ.

ಐದು ವರ್ಷದ ವಂಶಿಕಾ ಕೆಲವು ತಿಂಗಳ ಹಿಂದೆಯಷ್ಟೇ ರಕ್ತ ಕ್ಯಾನ್ಸರ್‌ನಿಂದ ಸಾವಿನ ದವಡೆಯಲ್ಲಿ ಸಿಲುಕಿದ್ದಳು. ಆಗ ದಾನಿಗಳಿಗಾಗಿ ದೇಶದ ಎಲ್ಲೆಡೆ ಹುಡುಕಾಟ ನಡೆಸಿದರೂ ಪ್ರಯೋಜನ ಆಗಿರಲಿಲ್ಲ. ಇಂತಹ ಸಂದರ್ಭದಲ್ಲಿಯೇ ಧಾತ್ರಿ ಸಂಸ್ಥೆ ನೆರವಿಗೆ ಬಂದಿತು. ಇದರ ಮೂಲಕ ಶ್ರುತಿ ಕಕ್ಕರ್ ಅವರು ರಕ್ತದ ಕಾಂಡಕೋಶ ದಾನ ಮಾಡಿದರು.

ADVERTISEMENT

‘ಇನ್ನೆಷ್ಟು ದಿನ ಸಾವನ್ನು ದೂಡಲು ಸಾಧ್ಯ ಎನ್ನುವ ಪರಿಸ್ಥಿತಿಯಲ್ಲಿ ನಾವಿದ್ದೆವು. ರಕ್ತ ಸಂಬಂಧಿಗಳೂ ನೆರವಾಗಲು ಸಾಧ್ಯವಾಗಲಿಲ್ಲ. ಸಂಬಂಧವೇ ಇಲ್ಲದವರು ಬಂದು ಮಗುವಿನ ಬ್ಲಡ್‌ ಸ್ಟೆಮ್‌ ಸೆಲ್‌ (ರಕ್ತದ ಕಾಂಡಕೋಶ) ದಾನ ಮಾಡಿ ಜೀವ ಉಳಿಸಿದರು. ಈ ಸಭೆಯಲ್ಲಿ ಅವರನ್ನು ನೋಡುವ ಅವಕಾಶ ಸಿಕ್ಕಿದೆ’ ಎಂದು ವಂಶಿಕಾಳ ಪೋಷಕರು ಶ್ರುತಿ ಅವರನ್ನು ಬಿಗಿದಪ್ಪಿ ಅತ್ತರು. ಕೈಮುಗಿದು ಕೃತಜ್ಞತೆ ಸಲ್ಲಿಸಿದರು.

‘ಮಗಳಿಗೆ ರಕ್ತಕ್ಯಾನ್ಸರ್‌ ಆಗಿದ್ದು ತಿಳಿದಾಗ ಕುಸಿದು ಹೋಗಿದ್ದೆವು. ತಿಂಗಳುಗಟ್ಟಲೆ ದಾನಿಗಳಿಗಾಗಿ ಪರಿತಪಿಸಿದ್ದೆವು. ಆದರೆ ಒಮ್ಮೆ ನಿರಾಸೆಯ ಮೋಡ ಕರಗಿತು. ಧಾತ್ರಿ ಸಂಸ್ಥೆಯ ಸಹಾಯ ಸಿಕ್ಕಿತು’ ಎಂದು ವಂಶಿಕಾ ತಂದೆ ನೀರಜ್‌ ರೋಹ್ರಾ ಅಳುತ್ತಲೇ ವಿವರಗಳನ್ನು ಹಂಚಿಕೊಂಡರು.

‘ವೈದ್ಯೆ ಶ್ರುತಿ ಅವರು ದಾನ ಮಾಡದಿದ್ದರೆ ನಮ್ಮ ಮಗುವನ್ನು ಕಳೆದುಕೊಂಡಿರುತ್ತಿದ್ದೆವು. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಮನಸ್ಸು ಭಾರವಾಗಿದೆ’ ಎಂದು ಹೇಳಿದರು.

ಡಾ.ಶ್ರುತಿ ‘ನಾನು ವೃತ್ತಿಯಲ್ಲಿ ವೈದ್ಯೆ. ಕ್ಯಾನ್ಸರ್‌ ಪೀಡಿತ (ತಲಸೇಮಿಯಾ) ಮಕ್ಕಳ ಸ್ಥಿತಿ ನನಗೂ ಗೊತ್ತು. ನನಗೆ ಒಬ್ಬ ಮಗ ಇದ್ದಾನೆ. ಇವತ್ತು ಮಗಳು ಸಿಕ್ಕಿದಳು. ನನ್ನಂತೆ ಖುಷಿಪಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ದಾನದಿಂದ ಇಷ್ಟೆಲ್ಲಾ ಖುಷಿ ಸಿಗುವುದಾದರೆ ಯಾಕೆ ದಾನ ಮಾಡಬಾರದು’ ಎಂದು ಮಗುವನ್ನು ಬಿಗಿದಪ್ಪಿದರು.

‘ದಾನ ಮಾಡುವ ಮೊದಲು ನಾನು ಎರಡು ತಿಂಗಳು ಕಠಿಣ ಡಯಟ್ ಮಾಡಿದೆ. ದಾನ ಮಾಡುವ ಐದು ದಿನ ಮೊದಲು ನನಗೆ ಒಂದು ಚುಚ್ಚುಮದ್ದು ನೀಡಿದರು. ಇದರಿಂದ ಸ್ವಲ್ಪ ಜ್ವರ ಬಂದಿರುವ ಅನುಭವ ಆಯಿತು. ಯಂತ್ರದ ಮೂಲಕ ನಮ್ಮ ರಕ್ತದ ಕಾಂಡಕೋಶ ಪಡೆದುಕೊಂಡು ಮತ್ತೆ ಆ ರಕ್ತವನ್ನು ಅದು ಮರಳಿಸಿತು’ ಎಂದು ಅವರು ಹೇಳಿದರು.

ತಮಿಳುನಾಡಿನ ಮೂರು ವರ್ಷದ ದೀಕ್ಷಾಗೆ ಪ್ರಕಾಶ್‌ ಕುಮಾರ್‌ ರಕ್ತದ ಕಾಂಡಕೋಶ ದಾನ ಮಾಡಿದ್ದರು. ಮಗುವಿಗೆ ಜೀವದಾನ ಮಾಡಿದವರು ಸಿಕ್ಕಾಗ ಅವರಿಗೆ ಸಿಕ್ಕ ಆನಂದವೇ ಬೇರೆ ಆಗಿತ್ತು. ಕಣ್ಣುಗಳಲ್ಲಿ ಅಳತೆ ಮಾಡಲಾಗದಷ್ಟು ಕೃತಜ್ಞತೆಯ ಭಾವ ಎದ್ದು ಕಾಣುತ್ತಿತ್ತು.

ದಾನ ಮಾಡಲು ಏಕೆ ಹಿಂಜರಿಕೆ?

‘ಅಂಗಾಂಗ ದಾನ ಮಾಡಬೇಕಾದರೆ ನಾವು ಒಂದು ಅಂಗವನ್ನೇ ಕಳೆದುಕೊಳ್ಳುತ್ತೇವೆ. ಆದರೆ ಇದು ಹಾಗಲ್ಲ. ಕೇವಲ ರಕ್ತದಲ್ಲಿರುವ ಕಾಂಡಕೋಶ ಮಾತ್ರ ಪಡೆದುಕೊಳ್ಳಲಾಗುತ್ತದೆ. ಇದರಿಂದ ದಾನಿಗಳ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ’ ಎಂದು ವೈದ್ಯೆ ಶ್ರುತಿ ಮಾಹಿತಿ ನೀಡಿದರು.

ದಾನ ಮಾಡುವವರು www.datri.orgಗೆ ಭೇಟಿ ನೀಡಿ ಮಾಹಿತಿಗಳನ್ನು ಭರ್ತಿ ಮಾಡಿ ಕಳಿಸಬಹುದು.

ತಮಿಳುನಾಡು ಸರ್ಕಾರದಿಂದ ಸಹಾಯ

ತಮಿಳುನಾಡು ಸರ್ಕಾರ, ಅಪರಿಚಿತ ದಾನಿಗಳಿಂದ ಸಹಾಯ ಪಡೆಯುವ ರೋಗಿಗಳ ನೆರವಿಗೆ ನಿಂತಿದೆ. ದೀಕ್ಷಾಳಂತಹ ನೂರಾರು ರೋಗಿಗಳು ಇದರ ಸಹಾಯ ಪಡೆದುಕೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ₹17 ಲಕ್ಷವನ್ನು ಸರ್ಕಾರ ಭರಿಸಿದೆ. ಪರಿಚಿತ (ಸಂಬಂಧಿ) ದಾನಿಗಳಾಗಿದ್ದರೆ₹ 9.5 ಲಕ್ಷ ಸರ್ಕಾರದಿಂದ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.