ADVERTISEMENT

ಯಲಹಂಕ: ಪದವಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 22:30 IST
Last Updated 7 ಜೂನ್ 2025, 22:30 IST
ಡಾ.ಎಂ.ಸಿ.ಸುಧಾಕರ್‌
ಡಾ.ಎಂ.ಸಿ.ಸುಧಾಕರ್‌   

ಯಲಹಂಕ: ಬ್ಯಾಟರಾಯನಪುರದಲ್ಲಿ ನೂತನ ಸರ್ಕಾರಿ ಪದವಿ ಕಾಲೇಜು ಉದ್ಘಾಟಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌, ಜಕ್ಕೂರು ಸರ್ಕಾರಿ ಶಾಲೆ ಆವರಣದಲ್ಲಿ ಸರ್ಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಕೃಷ್ಣ ಬೈರೇಗೌಡ, ‘ಖಾಸಗಿ ಕಾಲೇಜುಗಳನ್ನು ಮೀರಿಸುವಂತೆ ಸರ್ಕಾರಿ ಕಾಲೇಜುಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ನುರಿತ ಶಿಕ್ಷರರನ್ನು ನೇಮಕ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳ ವ್ಯಾಮೋಹಬಿಟ್ಟು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಜೀವನದಲ್ಲಿ ಕೊನೆಯವರೆಗೂ ಕಾಪಾಡುವ ಏಕೈಕ ಆಸ್ತಿ ಶಿಕ್ಷಣ. ಹೀಗಾಗಿಯೇ ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ  ಮಹಾತ್ವಾಕಾಂಕ್ಷೆಯಿಂದ ಬ್ಯಾಟರಾಯನಪುರ ಕ್ಷೇತ್ರದಾದ್ಯಂತ ಹಲವು ಶಾಲಾ-ಕಾಲೇಜುಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಕಳೆದ ವರ್ಷವೇ ತಾತ್ಕಾಲಿಕವಾಗಿ ಪದವಿ ಕಾಲೇಜು ಆರಂಭಿಸಲಾಗಿದ್ದು, ಬ್ಯಾಟರಾಯನಪುರ ಶಾಲೆಯಲ್ಲಿ ಪದವಿ ತರಗತಿಗಳನ್ನು ನಡೆಸಲಾಗುತ್ತಿದೆ. 56 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಕಂಪ್ಯೂಟರ್‌ ಲ್ಯಾಬ್‌ ತೆರೆಯಲಾಗಿದೆ ಎಂದು ವಿವರಿಸಿದರು.

‘ಜಕ್ಕೂರಿನಲ್ಲಿ ₹ 4 ಕೋಟಿ ವೆಚ್ಛದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈ ಕಟ್ಟಡದಲ್ಲಿ ಕನಿಷ್ಠ 30 ಕೊಠಡಿಗಳು, ಲ್ಯಾಬ್‌  ಜೊತೆಗೆ, 400 ಆಸನ ಸಾಮರ್ಥ್ಯದ ಆಡಿಟೋರಿಯಂ ನಿರ್ಮಿಸುವ ಉದ್ದೇಶವಿದೆ. ಹೆಚ್ಚುವರಿ ₹10 ಕೋಟಿಗೂ ಅಧಿಕ ಹಣದ ಅವಶ್ಯಕತೆಯಿದೆ’ ಎಂದು ತಿಳಿಸಿದರು.

ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು, ‘ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳು ಉತ್ತಮವಾಗಿದೆ. ಈ ಭಾಗದ ಜನರು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್‌ ಸಿಂಗ್‌, ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ಷೆ ಎನ್‌.ಮಂಜುಶ್ರೀ, ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಮಾರ್‌, ಬಿಬಿಎಂಪಿ ಮಾಜಿ ಉಪ ಮೇಯರ್‌ಗಳಾದ ಎಂ.ಆನಂದ್‌, ಇಂದಿರಾ, ಕಾಂಗ್ರೆಸ್‌ ಮುಖಂಡರಾದ ಎನ್.ಎನ್‌.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಎನ್‌.ಕೆ.ಮಹೇಶ್‌ಕುಮಾರ್‌, ವಿ.ವಿ.ಪಾರ್ತಿಬರಾಜನ್‌, ವಿ.ಹರಿ, ಬಿ.ರವಿಗೌಡ, ಎಚ್‌.ಎ.ಶಿವಕುಮಾರ್‌, ಕೆ.ಗೌರೀಶ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.