ADVERTISEMENT

ಮಳೆ ಬಂದಿದೆ– ಹೂಳು ಹಾಗೆ ಉಳಿದಿದೆ!

​ಪ್ರಜಾವಾಣಿ ವಾರ್ತೆ
Published 30 ಮೇ 2019, 20:14 IST
Last Updated 30 ಮೇ 2019, 20:14 IST
ರಾಜಕಾಲುವೆಯಲ್ಲಿ ಹೂಳು ತುಂಬಿರುವುದು
ರಾಜಕಾಲುವೆಯಲ್ಲಿ ಹೂಳು ತುಂಬಿರುವುದು   

ಬೆಂಗಳೂರು: ಮಳೆ ನೀರು ಹರಿಯಲಷ್ಟೇ ಮೀಸಲಾಗಿದ್ದ ನಗರದ ರಾಜಕಾಲುವೆಗಳಲ್ಲಿ ಕೊಚ್ಚೆಯೇ ತುಂಬಿದೆ. ನೀರು ಸರಾಗವಾಗಿ ಹರಿಯದಂತೆ ಅಡಿಗಡಿಗೂ ಹೂಳಿನ ಅಡೆತಡೆ ಇದೆ.

ಮಳೆನೀರು ಸಾಗಿಸುವ ಈ ಕಾಲುವೆಗಳ ಗಾತ್ರ ಕಿರಿದಾಗಿರುವುದು, ಅವುಗಳ ದಾರಿಯಲ್ಲಿ ದೊಡ್ಡ ಕಟ್ಟಡಗಳು ಎದುರಾಗಿ ಇದ್ದಕ್ಕಿದ್ದಂತೆ ಸಂಪರ್ಕ ಕಡಿದುಕೊಂಡಿರುವುದು, ಗೋಡೆಗಳು ಉರುಳಿ ಬಿದ್ದಿರುವುದು... ಹೀಗೆ ‘ರಾಜ’ಕಾಲುವೆಗಳ ಅನಾಥ ಸ್ಥಿತಿಯ ದರ್ಶನವಾಗುತ್ತದೆ.

ಭಾರಿ ಮಳೆ ಸುರಿದಾಗ ಕಾಲುವೆಗಳಲ್ಲಿ ಪ್ರವಾಹ ಉಂಟಾಗಿ ಮಳೆ ನೀರು ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿ ಜನತೆ ತೊಂದರೆ ಅನುಭವಿಸುವುದು ನಗರದಲ್ಲಿ ಸಾಮಾನ್ಯ ಸಂಗತಿ ಎಂಬಂತಾಗಿದೆ. ಮುಂಗಾರು ಆರಂಭವಾಗುವ ಮೊದಲು ಅಂದರೆ ಮೇ ತಿಂಗಳಲ್ಲಿ ಮಳೆ ಸುರಿದಾಗಲೇ ನಗರದಲ್ಲಿ ಸಾಕಷ್ಟು ತೊಂದರೆ ಉಂಟಾಗಿದೆ. ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ADVERTISEMENT

‘ಪ್ರತಿ ಮಳೆಗಾಲದಲ್ಲಿ ನಾವು ಅನುಭವಿಸುತ್ತಿರುವ ಪ್ರವಾಹದ ಸಂಕಷ್ಟಗಳಿಗೆ ಕೊನೆಯೇ ಇಲ್ಲವೇ? ಮಳೆನೀರಿನೊಂದಿಗೆ ನಮ್ಮ ಬದುಕೂ ಕೊಚ್ಚಿಹೋಗಬೇಕೇ’ ಎಂದು ಗೊಟ್ಟಿಗೆರೆ, ಅಂಜನಾಪುರ, ಉತ್ತರಹಳ್ಳಿ, ದೊಡ್ಡಕಲ್ಲಸಂದ್ರ, ಥಣಿಸಂದ್ರ, ಹುಳಿಮಾವು, ಹಲಸೂರು, ಹೆಣ್ಣೂರು, ಕೋರಮಂಗಲ, ಕುರುಬರಹಳ್ಳಿ, ಈಜಿಪುರ... ಹೀಗೆ ನಗರದ ಸಾಲು, ಸಾಲು ಪ್ರದೇಶಗಳ ಜನ ಪ್ರಶ್ನೆ ಮಾಡುತ್ತಿದ್ದಾರೆ.

ನಗರದಲ್ಲಿ 842 ಕಿ.ಮೀ. ಉದ್ದದ ಮುಖ್ಯ ಕಾಲುವೆ ಇದ್ದು, ಒಂದೆಡೆ ಹೂಳು ಹಾಗೂ ಮತ್ತೊಂದೆಡೆ ಒತ್ತುವರಿ ಭಾರದಿಂದ ಮಳೆನೀರು ಸಾಗಿಸುವ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು­ಹೋಗಿದೆ. ಹೀಗಾಗಿ ಮಳೆ ಬಂದಾಗಲೆಲ್ಲ ರಸ್ತೆ­ಗಳು ಹೊಳೆ ರೂಪ ತಾಳುತ್ತಿವೆ.

‘ಹೂಳು ತೆಗೆಯುವ ಹೆಸರಿನಲ್ಲಿ ಪ್ರತಿವರ್ಷ ಖರ್ಚಾಗುವ ಹಣಕ್ಕೆ ಲೆಕ್ಕವಿಲ್ಲ. ಆದರೆ, ಕಾಮ­ಗಾರಿ ನಡೆದ ಕುರುಹು ಎಲ್ಲಿಯೂ ಕಾಣುವು­ದಿಲ್ಲ. ಹೂಳು ತೆಗೆಯಲು ನಡೆಸಿದ ಎಲ್ಲ ಕಾಮ­ಗಾರಿಗಳನ್ನು ಈಗ ತನಿಖೆಗೆ ಒಳಪಡಿಸಬೇಕಿದೆ’ ಎಂಬ ಒತ್ತಾಯ ಕೂಡ ಬಲವಾಗಿ ಕೇಳಿಬಂದಿದೆ.

‘ಪ್ರತಿವರ್ಷ ಸರಾಸರಿ 40 ಸಾವಿರ ಲೋಡ್‌­ಗಳಷ್ಟು ಹೂಳು ತೆಗೆಯಲಾಗುತ್ತದೆ’ ಎಂದು ಬೃಹತ್‌ ನೀರುಗಾಲುವೆ ವಿಭಾಗದ ಅಧಿಕಾರಿ­ಗಳು ಲೆಕ್ಕ ಕೊಡುತ್ತಾರೆ. ‘ಕಳೆದ ಐದು ವರ್ಷ­ಗಳಿಂದ ಅಷ್ಟೊಂದು ಹೂಳನ್ನು ತೆಗೆದು ಹಾಕಿದ್ದರೆ ಈ ವೇಳೆಗಾಗಲೇ ಎರಡು ನಂದಿಬೆಟ್ಟಗಳೇ ನಿರ್ಮಾಣ ಆಗಬೇಕಿತ್ತು. ಹಾಗಾದರೆ ಆ ಹೂಳು ಹೋಗಿದ್ದು ಎಲ್ಲಿಗೆ’ ಎಂದು ಬಿಬಿಎಂಪಿಯ ಬಿಜೆಪಿ ಸದಸ್ಯರು ಪ್ರಶ್ನಿಸುತ್ತಾರೆ.

‘ರಾಜಕಾಲುವೆಗಳ ಒತ್ತುವರಿಯನ್ನು ತಡೆ­ಯಲು ವಿಫಲವಾಗಿದ್ದೇ ಸಮಸ್ಯೆ ಇಷ್ಟೊಂದು ಬೃಹದಾಕಾರ ತಾಳಲು ಕಾರಣವಾಗಿದೆ. ಅತಿ­ಕ್ರಮಣ ತೆರವುಗೊಳಿಸಲು ಮುಂದಾಗಬೇಕಾದ ಅಧಿಕಾರಿಗಳೇ ಖಾಸಗಿಯವರಿಗೆ ಪರೋಕ್ಷವಾಗಿ ನೆರವು ನೀಡುತ್ತಿದ್ದಾರೆ’ ಎಂದು ಅವರು ದೂರುತ್ತಾರೆ.

‘ಹೂಳು ತೆಗೆಯುವ ಕಾಮಗಾರಿ ಬೇಸಿಗೆ­ಯಲ್ಲಿ ನಡೆಯಬೇಕೇ ಹೊರತು ಮಳೆ­ಗಾಲ ಬಂದಾಗ ಆ ಕೆಲಸ ನಡೆಸುವುದಲ್ಲ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಗರಯೋಜನೆ ತಜ್ಞರು ವಿವರಿಸುತ್ತಾರೆ. ಮಳೆಗಾಲದ ಮುನ್ನವೇ ಪ್ರವಾಹದ ಸ್ಥಿತಿಯನ್ನು ನಿಭಾಯಿಸಲು ಬಿಬಿಎಂಪಿ ಸಂಪೂರ್ಣವಾಗಿ ಸನ್ನದ್ಧವಾಗಿರ
ಬೇಕು ಎನ್ನುವ ಸಲಹೆ ಅವರದಾಗಿದೆ. ‘ಉದ್ಯಾನ ಹೊರತುಪಡಿಸಿ ನಗರದಲ್ಲಿ ಹುಡುಕಿದರೂ ಅಂಗೈ ಅಗಲದಷ್ಟು ಮಣ್ಣಿನ ಜಾಗ ಸಿಗುವುದಿಲ್ಲ. ಮಳೆ ನೀರು ಭೂಮಿಯ ಒಡಲನ್ನೇ ಸೇರದೆ ಹಾಗೇ ಹರಿದು ಹೋಗುತ್ತದೆ. ಪ್ರವಾಹ ಉಂಟಾಗಲು ಈ ಡಾಂಬರಿನ ಸಾಮ್ರಾಜ್ಯವೂ ಕಾರಣ’ ಎಂದು ಅವರು ವಿವರಿಸುತ್ತಾರೆ.

‘ಸತತವಾಗಿ 2–3 ತಾಸು ಸುರಿಯುವ ಮಳೆಯ ನೀರನ್ನು ಸಾಗಹಾಕಲು ಕಾಲುವೆಗಳು ಸಮರ್ಥವಾಗಿಲ್ಲ’ ಎಂಬುದನ್ನು ತಜ್ಞರು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಕಾಲುವೆಗಳ ಸಾಮರ್ಥ್ಯ ಹೆಚ್ಚಿಸುವಲ್ಲಿ ಹಾಕಿಕೊಂಡ ಯೋಜನೆಗಳು ಮಾತ್ರ ಕುಂಟುತ್ತಲೇ ಸಾಗಿವೆ.

ಹೂಳು ತೆಗೆಯಲು ವಾರದ ಗಡುವು
ರಾಜರಾಜೇಶ್ವರಿನಗರ:
ವಾರದೊಳಗೆ ರಾಜಕಾಲುವೆ ಹಾಗೂ ಚರಂಡಿಗಳಲ್ಲಿ ತುಂಬಿಕೊಂಡಿರುವ ಹೂಳನ್ನು ತೆಗೆಯಬೇಕು ಎಂದು ರಾಜರಾಜೇಶ್ವರಿನಗರ ವಲಯದ ಉಸ್ತುವಾರಿ ಅಧಿಕಾರಿ ಡಾ.ಕೆ.ವಿ ತ್ರಿಲೋಕ್‍ಚಂದ್ರ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಜಂಟಿ ಆಯುಕ್ತರ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಬಿಬಿಎಂಪಿ ಹಾಗೂ ಜಲಮಂಡಳಿಯವರು ಹೂಳು ತೆಗೆಯಬೇಕು. ಮರ ಹಾಗೂ ಕೊಂಬೆಗಳು ಬಿದ್ದರೆ ಅವುಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸೂಚಿಸಿದರು.

ನಾಯಂಡಹಳ್ಳಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಪ್ರವೇಶದ್ವಾರ, ಹೊರವರ್ತುಲ ರಸ್ತೆಯ ಸುತ್ತಮುತ್ತಲ ಪ್ರಮುಖ ರಸ್ತೆಯಲ್ಲಿನ ಚರಂಡಿಗಳು ಮುಚ್ಚಿಹೋಗಿರುವ ಕಾರಣ ಮಳೆ ಬಂದಾಗ ಸಮಸ್ಯೆಯಾಗುತ್ತಿದೆ ಎಂದು ರಸ್ತೆ ಕಾಮಗಾರಿ ವಿಭಾಗದ ಎಂಜಿನಿಯರ್ ಮಾಹಿತಿ ನೀಡಿದರು.

ಮಳೆ ಬಂದಾಗ ಕೊಟ್ಟಿಗೆಪಾಳ್ಯ ಸುತ್ತಮುತ್ತಲ ಬಡಾವಣೆಗಳ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುತ್ತಿದ್ದು, ಸಮಸ್ಯೆಯಾಗದಂತೆ ಶಾಶ್ವತ ಯೋಜನೆ ರೂಪಿಸಲಾಗಿದೆ ಎಂದು ಜಂಟಿ ಆಯುಕ್ತ ಎಚ್.ಬಾಲಶೇಖರ್ ಪ್ರತಿಕ್ರಿಯಿಸಿದರು.

‘2.3 ಲಕ್ಷ ಟನ್‌ ಹೂಳು ತೆಗೆಯಲಾಗಿದೆ’
‘ಮುಂಗಾರು ಸಿದ್ಧತೆಯ ಭಾಗವಾಗಿ ಬಿಬಿಎಂಪಿ ವತಿಯಿಂದ ಕಳೆದ 135 ದಿನಗಳಲ್ಲಿ 11,733 ಟ್ರಕ್‌ ಹೂಳನ್ನು (ಅಂದಾಜು 2.3 ಲಕ್ಷ ಟನ್‌) ತೆಗೆಯಲಾಗಿದೆ’ ಎಂದು ಪಾಲಿಕೆಯ ರಾಜಕಾಲುವೆ ವಿಭಾಗದ ಅಧಿಕಾರಿಗಳು ಲೆಕ್ಕ ಹೇಳುತ್ತಾರೆ.

ರಾಜಕಾಲುವೆಗಳ ಹೂಳೆತ್ತುವ ಕಾಮಗಾರಿಯನ್ನು 2018ರ ನವೆಂಬರ್‌ನಲ್ಲಿ ಆರಂಭಿಸಿ 2019ರ ಮಾರ್ಚ್‌ನಲ್ಲಿ ಪೂರ್ಣಗೊಳಿಸಲಾಗಿದೆ. ದಶಕದಲ್ಲಿ ಮೊದಲ ಬಾರಿಗೆ ರಾಜಕಾಲುವೆಗಳ ಸ್ವಚ್ಛಗೊಳಿಸಲಾಗಿದೆ. ಈ ಸಲ ಮಳೆಗಾಲದಲ್ಲಿ ರಾಜಕಾಲುವೆಗಳು ಉಕ್ಕಿ ಹರಿಯುವ ಸಮಸ್ಯೆ ಇರುವುದಿಲ್ಲ ಎಂದು ಅವರು ಹೇಳುತ್ತಾರೆ.

ಅಂಕಿ ಅಂಶಗಳು
842 ಕಿ.ಮೀ.:ನಗರದಲ್ಲಿರುವ ಮುಖ್ಯ ಕಾಲುವೆ
₹800 ಕೋಟಿ:ರಾಜಕಾಲುವೆ ಅಭಿವೃದ್ಧಿಗೆ 2016–17ರಲ್ಲಿ ಬಿಡುಗಡೆ ಮಾಡಿದ ಹಣ
₹300 ಕೋಟಿ:2017–18ರಲ್ಲಿ ಬಿಡುಗಡೆಯಾದ ಹಣ
₹117 ಕೋಟಿ:ಪ್ರವಾಹದ ಹಿನ್ನೆಲೆಯಲ್ಲಿ 2017ರಲ್ಲಿ ಬಿಡುಗಡೆಯಾದ ಹೆಚ್ಚುವರಿ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.